Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. ೮

ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕ್ಷಣದಿಂದ ನಾವು ಪ್ರಕೃತಿ ಮಾತೆಗೆ ಸಂಪೂರ್ಣ ಶರಣಾಗಿದ್ದೆವು, ಆದರೆ ಮಿನಿಕಾಯ್ ದ್ವೀಪದ ಪ್ರಕೃತಿಯಲ್ಲಿನ ಮಾನವರ ಬಗ್ಗೆ ಹಿಂದಿನ ಇತಿಹಾಸ ಕೇಳಿ ತಸು ಬೆಚ್ಚಿಬಿದ್ದಿದೆವು. ಮಿನಿಕ ರಜ್ಜೆ ಬಗ್ಗೆ ತಿಳಿದು ಕೊಳ್ಳಲು ಅವರ ನಿವಾಸಗಳಿಗೆ ಭೇಟಿ ಅವರ ಜೀವನ ಶೈಲಿ ಆಚಾರ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ  ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗಾಗಿ  ಮಿನಿಕಾಯ್ ದ್ವೀಪದ ಪ್ರಮುಖ ಹಳ್ಳಿಯಾದ ಫಾಲೆಸ್ಸೆರಿಗೆ ಭೇಟಿಯ ಸಲುವಾಗಿ ಹೊರಟೆವು. 

ಮಿನಿಕಾಯ್ ದ್ವೀಪದಲ್ಲಿ ಸುಮಾರು ಹತ್ತು ಹಳ್ಳಿಗಳಿವೆ , ಅವುಗಳು  ಬಡ , ಆಗುಮಾಗು , ಬೋಡುತೀರಿ , ಸೆಡಿವಲು , ಅಲೋಡಿ , ಫನ್ ಹಿಲಾಲ್ , ಕುದೇಹಿ, ಫಾಲೆಸ್ಸೆರಿ  ಮತ್ತು ಕೇಂಡಿಪಾರ್ಟಿ.  ಮಿನಿಕಾಯ್  ದ್ವೀಪದ ಬೌಗೋಳಿಕವಾಗಿ  ಲಕ್ಷದ್ವೀಪಕ್ಕೆ ಸೇರಿದ್ದರೂ ಸಾಂಸ್ಕೃತಿಕವಾಗಿ, ಆಚಾರ ವಿಚಾರಗಳಲ್ಲಿ ಲಕ್ಷದ್ವೀಪದಿಂದ ಸಂಪೂರ್ಣವಾಗಿ ಬೇರ್ಪಟ್ಟು  ಮಾಲ್ಡಿವ್  ದ್ವೀಪವನ್ನು ಅನುಸರಿಸುತ್ತದೆ.  ೧೯೪೭ರಲ್ಲಿ  ಭಾರತ ಸ್ವತಂತ್ರವಾದ ನಂತರ ಮಿನಿಕಾಯ್ ದ್ವೀಪ ಮಾಲ್ಡಿವ್  ದ್ವೀಪ ಬ್ರಿಟೀಷರ ಅಧೀನದಲ್ಲಿತ್ತು, ನಂತರ ೧೯೫೬ ಭಾರತಕ್ಕೆ ಹಸ್ತಾಂತರವಾಯಿತು ಆದರೂ ಮಾಲ್ಡಿವ್  ಸ್ವತಂತ್ರ ಪಡೆದ ನಂತರ ೧೯೭೬ ರಲ್ಲಿ ಮಿನಿಕಾಯ್ ಹಾಗು ಮಾಲ್ಡಿವ್ ಗಡಿಯನ್ನು ಗುರುತಿಸಿ ಮಾನ್ಯ ಮಾಡಿತು ಹಾಗಾಗಿ ಇಂದಿನವರೆಗೂ ಮಿನಿಕಾಯ್ ಮತ್ತು ಮಾಲ್ಡಿವ್ ಸಾಂಸ್ಕೃತಿಕವಾಗಿ  ಸಹೋದರರಿದ್ದಂತೆ. 

ಇಲ್ಲಿನ ಪ್ರತಿಯೊಂದು ಹಳ್ಳಿಯನ್ನು ‘ಅವ’ ಎಂದು ಕರೆಯುತ್ತಾರೆ, ಇಲ್ಲಿನ ಹಳ್ಳಿಗಳ ಆಡಳಿತ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿದೆ. ನಮ್ಮಲ್ಲಿ ಪ್ರತಿಯೊಂದು ಗ್ರಾಮಕ್ಕೂ ಪಂಚಾಯಿತಿ ಇದ್ದಂಗೆ ಇಲ್ಲಿ ಆವ ವ್ಯವಸ್ಥೆಯಿದ್ದಂತೆ. ಪ್ರತಿಯೊಂದು ಹಳ್ಳಿಗೂ ಮುಖಂಡನು ಒಬ್ಬ ಇರುತ್ತಾನೆ , ಅವನನ್ನು ಮೊಪೇನ್ ಎಂದು ಕರೆಯುತ್ತಾರೆ , ಗ್ರಾಮದ ಜನತೆಯು ತಮ್ಮ ಜೊತೆಗಿರುವ ಅತ್ಯಂತ ಸಮರ್ಥವಾಗಿರುವವನ್ನು  ಮೊಪೇನ್ ಎಂದು  ತಾವೇ ಆರಿಸುತ್ತಾರೆ.  ಸಂಪೂರ್ಣ ಹಳ್ಳಿಯ ಜವಾಬ್ದಾರಿಯನ್ನು ಮೊಪೇನ್ ಕೈಗೆ ನೀಡುತ್ತಾರೆ, ಮೊಪೇನ್ ಸಹಾಯಕ್ಕೆ ಮತ್ತೆ ಮೂವರನ್ನು ನೇಮಿಸುತ್ತಾರೆ. 

ನಾವು ಫಾಲೆಸ್ಸೆರಿಗೆ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮೋಪತಿ(ಮಹಿಳಾ ಮುಖಂಡೆ) ನಮಗೆ ಸ್ವಾಗತಿಸಿ ತಮ್ಮ ಹಳ್ಳಿ ಮನೆ ಬಗ್ಗೆ ವಿವರ ನೀಡಿ ತಮ್ಮ ಸ್ಪರ್ಧಾ ದೋಣಿಯನ್ನು ತೋರಿಸಿ ತಮ್ಮ ಸಂಸ್ಕೃತಿ ಹಾಗು ಆಚಾರ ವಿಚಾರಗಳನ್ನು ತಿಳಿಸಿ ಕೊಟ್ಟು ತಮ್ಮ ಜವಾಬ್ದಾರಿಯ ಬಗ್ಗೆ ತಿಳಿಸಿದಾಗ ನಮ್ಮೊಡನೆ ಬಂದಿದ್ದ ಪ್ರವಾಸಿಗರು ಮೊಪತಿಯ ಬಗ್ಗೆ ಅಭಿಮಾನ ತೋರಿಸಿ ನೀವು ಅತ್ಯಂತ ಧೈರ್ಯ ಶಾಲಿ ಹೆಣ್ಣು ಹೀಗೆಯೇ ಮುಂದುವರೆಯಿರಿ ಎಂದು ಆಶಿಸಿದರು. 

ನಿಮಗೂ ಒಂದು ಅನುಮಾನ ಬರಬಹುದು ಮೊಪೇನ್ ಮತ್ತು ಮೊಪೇನ್  ಗಂಡ ಹೆಂಡ್ತಿಯರಾ ಅಂತ, ಆ ಹುದ್ದೆಯನ್ನು ಸಂಭಾಳಿಸಲು ಯಾರು ಬೇಕಾದರೂ ಅರ್ಹರು ಹಾಗಾಗಿ ಇಬ್ಬರೂ ಗಂಡ ಹೆಂಡತಿ ಆಗಿರಬೇಕಿಲ್ಲ.  ಮೋಪತಿಯ  ಹತ್ತಿರ ಸಂಭಾಷಣೆ ನಡೆಯುವಾಗ ಅಲ್ಲಿನ ಮೊಪೇನ್ ಆಗಲಿ ದ್ವೀಪದ ಗಂಡಸರಾರು ಕಣ್ಣಿಗೆ ಬೀಳಲಿಲ್ಲ ನಮಗೆ  ಹಳ್ಳಿಗೆ ಸ್ವಾಗತ ಕೋರಿದಾಗಿನಂದಲೂ ಚಹಾ ಕುಡಿದು ಹಡಗಿಗೆ ಹೋರಡುವ ಸಮಯ ಸಮೀಪಿಸುತ್ತಿದ್ದರೂ ಸುತ್ತಲೂ  ಅಲ್ಲಿ ದ್ವೀಪದ ಒಬ್ಬರೋ ಇಬ್ಬರೂ ಗಂಡಸರೂ ಬಿಟ್ಟರೆ ಬೇರಾರೂ ಕಾಣಲಿಲ್ಲ.  

ಈ ಹಳ್ಳಿ ಮನೆಯು ಊರಿನಲ್ಲಿರುವ ಎಲ್ಲರೂ ಒಂದು ಕಡೆ ಸಭೆ ಸೇರುವ ಸ್ಥಳ ಹಾಗಾಗಿ ನಮಗೆ ಇಲ್ಲಿಯೇ  ಸಂಜೆಯ ಚಹಾ ಕೂಟಕ್ಕೆ ವ್ಯವಸ್ಥೆ ಮಾಡಿದ್ದರು. ಹಳ್ಳಿಯ ಮನೆಯಲ್ಲಿ ಕೆಲವು ಇತಿಹಾಸದ ಬಗೆಗಿನ ಮಾಹಿತಿಯ ಚಿತ್ರಪಟಗಳು, ದ್ವೀಪಕ್ಕಾಗಿ ದುಡಿದ ಹಿರಿಯರ ಭಾವಚಿತ್ರಗಳು ಅಲ್ಲದೇ ಆ ದ್ವೀಪದಲ್ಲಿ ನಡೆಯುವ ವಾರ್ಷಿಕ ದೋಣಿ ಸ್ಪರ್ಧೆಯಲ್ಲಿ ಬಳಸುವ ದೋಣಿಯನ್ನು ಸಿಂಗರಿಸಿ ಇಡಲಾಗಿತ್ತು. ಇಲ್ಲಿನ ಬಹುತೇಕರು ಇಸ್ಲಾಂ ಜನಾಂಗದವರು, ಆದರೂ ಕ್ರಿಸ್ತಶಕ ೧೫೦೦ಕ್ಕೂ ಹಿಂದೆಯೇ ಮಾನವನ ಆಳ್ವಿಕೆಗೆ ಈ ದ್ವೀಪ ಒಳಪಟ್ಟಿತ್ತು, ಶತ ಶತಮಾನಗಳಿಂದ ಮುಸ್ಲಿಂ ಜನಾಂಗದವರು ನೆಲೆಸಿದ್ದರೂ ಇಲ್ಲಿನ ಮೂಲ ಜನಾಂಗ ಯಾವುದು ಎಂದು ಗುರುತಿಸುವುದು ತಸು ಕಷ್ಟ. ಆದರೆ ಬಹುತೇಕ ದ್ವೀಪವಾಸಿಗಳು ಸ್ನೇಹಪ್ರಿಯರು ಮತ್ತು ಭಾರತವನ್ನು ತಮ್ಮ ಮಾತೃ ದೇಶ ಎಂದು ಒಪ್ಪಿರುವುದು ಎಂಬುದು ಮಾತ್ರ ಸತ್ಯ .                                                                                                                                                                       

ಇಲ್ಲಿ ಹಳ್ಳಿಗಳ ಗಡಿ ಇಲ್ಲವೇ ಇಲ್ಲ ಎಲ್ಲವೂ ಒಂದೇ ರೀತಿಯೆಂದು ಭಾಸವಾಗುತ್ತದೆ  ಬಹುಶ ಮನೆಗಳೇ ಗಡಿಗಳಾಗಿವೆ . ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿ ಸಂಪರ್ಕಿಸಲು ಇರುವ ರಸ್ತೆಗಳೆಲ್ಲ ಹಾವು ಹರಿದಂತೆ ಕಾಣುವ ಸಿಮೆಂಟಿನ ರಸ್ತೆಗಳು, ಈ ರಸ್ತೆಗಳಲ್ಲಿ ರಾಜ ರೋಷವಾಗಿ ಓಡಾಡುವ ಮೋಟಾರು ವಾಹನಗಳು, ರಸ್ತೆ  ಬದಿಯಲ್ಲಿ ಪ್ರಯಾಣಿಕನಿಗೆ ಪ್ರಾಮಾಣಿಕವಾಗಿ ನೆರಳು ನೀಡುವ ಕಲ್ಪ ಋಕ್ಷಗಳು , ಅವಿರತವಾಗಿ ಆಹಾರ ಹುಡುಕುವ ಕುಕ್ಕುಟಗಳು , ಅತಿಥಿಗಳನ್ನು ಮನೆಗೆ ಆಹ್ವಾನಿಸುವ ವಾಯಸಗಳು ಸರ್ವೇ ಸಾಮಾನ್ಯ. ಅದರಲ್ಲೂ ಕುಕ್ಕುಟವೊಂದು ನಮ್ಮ ವಾಹನದ ಜೊತೆ ಪೈಪೋಟಿಗೆ ಬಿದ್ದಂತೆ ಓಡುತ್ತಲೇ  ವಿಮಾನ ರನ್ ವೆಯಿಂದ ಹೇಗೆ ಹಾರುತ್ತದೆಯೂ ಹಾಗೆ ಹಾರಿ ನಮ್ಮ ವಾಹನದ ಎಡದಿಂದ ಬಲಕ್ಕೆ ಹಾರಿ ಅಲ್ಲೇ ಇದ್ದ ಗಿಡದ ಮೇಲೆ ಕುಳಿತ ದೃಶ್ಯ ಮಾತ್ರ ಕಣ್ಣಿಗೆ ಅಚ್ಚಳಿಯದೆ ಉಳಿದು ಹುಬ್ಬೇರಿಸುವಂತೆ ಮಾಡಿತು . 

ಇಲ್ಲಿನ ವಿಶೇಷ ಎಂದರೆ ವರ್ಷಕ್ಕೊಮ್ಮೆ ನವೆಂಬರ್ ಇಲ್ಲವೇ ಡಿಸೇಂಬರ್ ತಿಂಗಳಲ್ಲಿ ನಡೆಯುವ ‘ ನ್ಯಾಷನಲ್ ಮಿನಿಕಾಯ್ ಫೆಸ್ಟ್ ‘ . ಮಿನಿಕಾಯ್  ದ್ವೀಪದ ಸಂಸ್ಕೃತಿ ಹಾಗು ಆಚರಣೆಗಳ ಮಹಾಮೇಳದಲ್ಲಿ ದ್ವೀಪದ ಹತ್ತು ಹಳ್ಳಿಗಳು ಭಾಗಿಯಾಗುತ್ತವೆ. ಒಂದೊಂದು ಹಳ್ಳಿಗೂ ತಮ್ಮದೇ ಅದೇ ಜಲ ದೋಣಿ ಇರುತ್ತದೆ. ಈ ದೋಣಿ ಸ್ಪರ್ಧೆಯ ವೀಕ್ಷಣೆಗೆ  ರಾಷ್ಟ್ರೀಯ ಹಾಗು ಅನಂತರ ರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ದೋಣಿ ಸ್ಪರ್ಧೆಯಲ್ಲಿ ಗೆದ್ದ ಹಳ್ಳಿಯು ಉಳಿದ  ಹಳ್ಳಿಗೂ  ಔತಣಕೂಟ ಏರ್ಪಡಿಸುತ್ತಾರೆ. ಹಾಗಾಗಿ ಇಲ್ಲಿ ಎಲ್ಲವರು ನಮ್ಮವರೇ… 

ಈ ಎಲ್ಲಾ ಮಾಹಿತಿ ಪಡೆಯುತ್ತಿದ್ದಾಗಲೇ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗಲು ಆತುರನಾಗಿದ್ದ, ಇದಲ್ಲದೇ ನಮ್ಮ ರಾತ್ರಿಯ ನೆಲೆಯು ಮತ್ತೆ ಹಡಗಿನಲ್ಲೇ ಆಗಿದ್ದರಿಂದ ಮತ್ತೆ ನೀರಿನಲ್ಲಿಸುಮಾರು  ಅರ್ಧ ಗಂಟೆಯ ಜಲ ಪ್ರಯಾಣ  ಹಾಗಾಗಿ ಟೂರ್ ಮ್ಯಾನೇಜರ್ ಎಲ್ಲರೂ ಹೊರಡೋಣ ಜೆಟ್ಟಿಗೆ ಹೋಗಲು ವಾಹನ ತಯಾರಿದೆ ಎಂದು ಆದೇಶವಿತ್ತ. ಮೊದಲ ದಿನ ತಸು ತ್ರಾಸದಾಯಕವಾಗಿತ್ತಾದಾರು ಒಮ್ಮೆ ಸಂಪೂರ್ಣ ದ್ವೀಪವನ್ನು ಸಂದರ್ಶಿಸಿ ಹೊರಟಿದ್ದರೆ  ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ಭಾರವಾದ ಮನಸಿನ್ನಿದ  ಮಿನಿಕಾಯ್ ಮಾಯೆಗೆ  ವಿದಾಯ ಹೇಳುತ್ತಲೇ ಜೆಟ್ಟಿ ಕಡೆಗೆ ಹೊರಟೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೭

ಲೈಟ್ ಹೌಸ್ ಮೇಲೆ ಇದ್ದಾಗ ಸಮುದ್ರದ ಮೇಲಿನ ಗಾಳಿ ಬಿಸುತ್ತಿದ್ದರಿಂದ ಆಯಾಸವೆಲ್ಲ ಹೋಗಿ ಹೊಸ ಚೈತನ್ಯ ಬಂದಿತ್ತು ಆದರೆ  ಲೈಟ್ ಹೌಸ್ ನಿಂದ  ಇಳಿದು  ಹೊರಗೆ ಬರುವ ಹೊತ್ತಿಗಾಗಲೇ  ರವಿಯು  ಉಗ್ರಪ್ರತಾಪನಾಗಿದ್ದ , ಮೈಯಲ್ಲಿ ಗಂಗೆಯ ಪ್ರವಾಹ ಅಲ್ಲಲ್ಲಿ ಸಣ್ಣ ಝರಿಯ ರೂಪದಲ್ಲಿ ಜಲಪಾತಗಳನ್ನು ಸೃಷ್ಟಿಸಿದ್ದಳು,  ಗಂಗೆಯನ್ನು ಸಾಗರಕ್ಕೆ ಲೀನಾ ಮಾಡುವ ಭಗೀರಥ ಪ್ರಯತ್ನ  ಮಾಡಿ  ನಮ್ಮ ದೇಹದ ತಾಪ ಕಡಿಮೆ ಮಾಡಿಕೊಳ್ಳುವ  ಅವಶ್ಯಕತೆಯಿತ್ತು , ಹಾಗಾಗಿ  ನಾವು ತುಂಡಿ ಬೀಚ್ ಗೆ ಯಾವಾಗ ತಲುಪುತ್ತೇವೋ ಎಂದು ಕಾಯುತ್ತಿದ್ದೇವು. 

ನಮ್ಮನ್ನು ಹೊತ್ತ ವಾಹನ ತೆಂಗಿನ ಮರಗಳ ಸಾಲ ನೆರಳಲ್ಲಿ ತುಂಡಿ ಬೀಚ್ ಕಡೆಗೆ  ಹೊರಟಿತ್ತು, ಮಿನಿಕಾಯ್ ದ್ವೀಪದಲ್ಲಿ  ಹಲವಾರು ಬೀಚ್ ಗಳಿವೆ, ಅವುಗಳಲ್ಲಿ ತುಂಡಿ ಬೀಚ್ ಪ್ರಸಿದ್ಧವಾದದು, ಈ ಬೀಚ್ ಇತ್ತೀಚೆಗೆ  ಅಂತರ ರಾಷ್ಟ್ರೀಯ  ನೀಲಿ ಧ್ವಜ ಟ್ಯಾಗ್ ಮಾನ್ಯತೆ ಪಡೆದಿದೆ. ಒಂದು ಸಮುದ್ರ ಕಿನಾರೆಯನ್ನು ನೀಲಿ ಧ್ವಜ ಟ್ಯಾಗ್ ಬೀಚ್ ಪ್ರಮಾಣಕರಿಸಿದ್ದಾರೆ  ಅಂದರೆ ಆ  ಸಮುದ್ರ ಕಿನಾರೆಯು  ವಿಶ್ವದ ಅತ್ಯಂತ ಸ್ವಚ್ಛ ಹಾಗು ಪರಿಸರ ಸ್ನೇಹಿ ಕಿನಾರೆಯೆಂದು. 

ಬ್ಲೂ ಫ್ಲಾಗ್ ಪ್ರೋಗ್ರಾಂ ಅನ್ನು ಕೋಪನ್ ಹ್ಯಾಗನ್, ಡೆನ್ಮಾರ್ಕ್-ಪ್ರಧಾನ ಕಛೇರಿಯ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ನಡೆಸುತ್ತದೆ. ನೀಲಿ ಧ್ವಜಕ್ಕೆ ಅರ್ಹತೆ ಪಡೆಯಲು, ಕಠಿಣ ಪರಿಸರ, ಶೈಕ್ಷಣಿಕ, ಸುರಕ್ಷತೆ ಮತ್ತು ಪ್ರವೇಶದ ಮಾನದಂಡಗಳ ಸರಣಿಯನ್ನು ಪೂರೈಸಬೇಕು ಮತ್ತು ನಿರ್ವಹಿಸಬೇಕು. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸಮುದ್ರ ತೀರಗಳಿದ್ದರು ಕೇವಲ ೧೩ ಕಿನಾರೆಗಳು ಮಾತ್ರ ಬ್ಲೂ ಫ್ಲಾಗ್ ಕಿನಾರೆಯೆಂದು ಮಾನ್ಯತೆ ಪಡೆದಿವೆ. ಒರಿಸ್ಸಾದ  ಕೋನಾರ್ಕ್ ಕರಾವಳಿಯಲ್ಲಿರುವ ಚಂದ್ರಭಾಗ ಕಡಲತೀರವು ನೀಲಿ ಧ್ವಜ ಪ್ರಮಾಣೀಕರಣವನ್ನು ಪಡೆದ ಭಾರತದ ಹಾಗು ಏಷ್ಯಾ ಖಂಡದ ಮೊದಲ ಕಡಲ ಕಿನಾರೆಯಾಗಿದೆ. 

ನಾವು ಸಮುದ್ರ ತೀರಕ್ಕೆ ಬರುವ ಹೊತ್ತಿಗಾಗಲೇ ನಮ್ಮ ಜೊತೆಯಲ್ಲಿ ಬಂದಿದ್ದ ಪ್ರವಾಸಿಗರು ಅದರಲ್ಲೂ ೭೦ರ ತರುಣ ತರುಣಿಯರು ಸಮುದ್ರದ  ಆಳ ಅಳೆಯಲು  ಸುಮಾರು ಅರ್ಧ ಕಿಲೋಮೀಟರು ನಡೆಯುತ್ತಾ ಮುಂದೆ ಸಾಗಿದ್ದರು.  ನಾವು ನೀರಿಗಿಳಿದಾಗಲೇ ಗೊತ್ತಾಗಿದ್ದು ಇಲ್ಲಿ ಪಾಪಿ ಸಮುದ್ರ ಹೊಕ್ಕರು ಮೊಣಕಾಲು ನೀರು ಎನ್ನುವ ಗಾದೆ ಇಲ್ಲಿ ಶುದ್ಧ ಸುಳ್ಳು ಅಂತ , ನೀವು  ನೀರಿನಲ್ಲಿ ಸುಮಾರು ೨ ಕಿಲೋಮೀಟರು ನಡೆದರೂ ಸಹ ಸಮುದ್ರದ ಸ್ಪಟಿಕದಷ್ಟು ಶುಭ್ರವಾದ ತಳ ಸ್ಪಷ್ಟವಾಗಿ ನಿಮಗೆ ಕಾಣುತ್ತಲೇ ಇರುತ್ತದೆ. ಅಬ್ಬಬಾ ಎಂದರೆ ನಮ್ಮ ದೇಹದ ಮುಖ ಭಾಗದ ವರೆಗೂ ನೀರು ಬರುತ್ತದೆ, ಹಾಗಂತ ಬಹಳ ದೂರದ ವರೆಗೂ ನಡೆಯುವುದಕ್ಕೆ ಆಗುವುದಿಲ್ಲ. ಪ್ರಕೃತಿಯ ಈ  ಅದ್ಭುತ ರಚನೆಯ ಹಿನ್ನಲೆ ತಿಳಿಯಬೇಕಾದ ಅವಶ್ಯಕತೆಯಿದೆ. 

ನಾವೆಲ್ಲ ಭೂಮಿಯ ಮೇಲೆ ಲಾವಾ ರಸವನ್ನು ಉಗಿಯುವ ಅಗ್ನಿಪರ್ವತಗಳ ಬಗ್ಗೆ ತಿಳಿದಿದ್ದೇವೆ ಹಾಗೆಯೇ ಸಮುದ್ರ ಒಳಗೂ ಸಹ ಇದೆ ರೀತಿಯ ಲಾವಾರಸವನ್ನು ಉಗುಳುವ  ಹಲವಾರು ಅಗ್ನಿಪರ್ವತಗಳಿವೆ, ಈ ಅಗ್ನಿಪರ್ವತಗಳು ಹೊಸ ದ್ವೀಪ ಇಲ್ಲವೇ ಹೊಸ ಭೂಭಾಗದ ರಚನೆಗೆ ಕಾರಣವಾಗುತ್ತವೆ.  ಸಮುದ್ರದ ಒಳಗಿನ ಅಗ್ನಿ ಪರ್ವತಗಳನ್ನು ನಾವು ಸೀ ಮೌಂಟ್ ಎನ್ನುತ್ತೇವೆ ,  ಮೊದಲ ಹಂತದಲ್ಲಿ ಸಮುದ್ರ ಒಳಗಿನಿಂದ ಲಾವಾರಸ ಸತತವಾಗಿ ಉಕ್ಕಿದಾಗ ಸಮುದ್ರದ ಮೇಲ್ಬಾಗವನ್ನು ತಲುಪುತ್ತದೆ,  ಅದು ಲಾವಾವನ್ನು ಇನ್ನೂ ಉಕ್ಕುತ್ತಿದ್ದರೆ..  ಸೀ ಮೌಂಟ್ ಇನ್ನು ಎತ್ತರಕ್ಕೆ ಬೆಳೆಯುತ್ತಲೇ ಹೋಗುತ್ತದೆ, ಮುಂದೆ ಇದೆ ಒಂದು ದ್ವೀಪವಾಗುತ್ತದೆ. ದ್ವೀಪದ ಸುತ್ತಲೂ  ಜಲಚರಗಳ  ಬೆಳವಣಿಗೆಯಾಗುತ್ತದೆ, ನಂತರ ಕೊರಲ್ ಬಂಡೆಗಳು ಸೃಷ್ಟಿಯಾಗುತ್ತದೆ. ಮುಂದೆ ಈ ಭೂಮಿಯ ಮೇಲೆ ಸೃಷ್ಟಿಯಾದ ಅಗ್ನಿಪರ್ವತ  ಸಾಗರದ ಅಲೆಗಳು ಮತ್ತು ಪರಿಸರದಲ್ಲಿ ಆಗುವ ಬದಲಾವಣೆಗಳಿಂದ ನಿಧಾನವಾಗಿ ನೀರಿನಲ್ಲಿ ನೀರಿನಲ್ಲಿ ಕರಗುತ್ತಾ ನೀರಿನ ಒಳಗೆ ಆಳವಿಲ್ಲದ ಸಮತಟ್ಟಾದ ಜಾಗ ರಚನೆಯಾಗುತ್ತದೆ , ಸುತ್ತಲೂ ಇರುವ ಕೊರಲ್ ಬಂಡೆಗಳ ಸುತ್ತಲೂ ಬಟ್ಟಲಿನ ಆಕಾರದ  ಸಣ್ಣ ಕೆರೆಯ ರಚನೆ ಸೃಷ್ಟಿಯಾಗುತ್ತದೆ ಇದನ್ನೇ ನಾವು ಲಗೊನ್ ಎನ್ನುತ್ತೇವೆ, ಈಗ ನಾವು ನಿರ್ಭಯವಾಗಿ ಓಡಾಡುತ್ತಿದ್ದದು ಇದೆ ಮಿನಿಕಾಯ್ ಲಗೊನ್ ನಲ್ಲಿ.  ಸುತ್ತಲೂ ಇರುವ ಹವಳ ಬಂಡೆಗಳು ಈ ಲಾಗೊನ್ ಅನ್ನು ಸಮುದ್ರದಲ್ಲಿ ಆಗುವ ವೈಪರೀತ್ಯಗಳಿಂದ ದ್ವೀಪವನ್ನು ರಕ್ಷಿಸುತ್ತವೆ. 

ಈ ಸಂಪೂರ್ಣ ರಚನೆಯನ್ನು ಲೈಟ್ ಮೇಲೆ ನಿಂತಾಗ ಕಾಣ ಸಿಗುತ್ತದೆ, ಎಲ್ಲಿ ರಿಫ್ ಇರುತ್ತದೆ ಅದು ಸಮುದ್ರದ ಅಲೆಗಳ ತೀವ್ರತೆಯನ್ನು ನಿಷ್ಕ್ರಿಯಗೊಳಿಸಿ ಸಣ್ಣ ಕೆರೆಯಲ್ಲಿ ಯಾವ ರೀತಿಯ ಅಲೆಗಳು ಇರುತ್ತದೋ ಆ ಸ್ಥಿತಿಗೆ ತರುತ್ತದೆ. 

ಹಾಗಾಗಿ ಈ ಮಿನಿಕಾಯ್ ಲಗೊನ್ ಸಂಪೂರ್ಣ ಸೇಫ್ ಅಂತ ಹೇಳ ಬಹುದು,  ಹಾಗಾಗಿ ಸ್ನೋರ್ಕೆಲ್ಲಿಂಗ್ , ಕಯಾಕಿಂಗ್ , ಸ್ಕೂಬಾ , ಜೆಟ್ ರೈಡ್  ಯಾವುದೇ ಭಯವಿಲ್ಲದೆ ಮಾಡಬಹುದು. ಬ್ಲೂ ಫ್ಲಾಗ್ ಪಡೆದ ಕಿನಾರೆಯಾಗಿದ್ದರಿಂದ ಸಹಜವಾಗಿಯೇ ಅತ್ಯಂತ ಶುಚಿಯಾಗಿ , ಪರಿಸರ ಸ್ನೇಹಿಯಾಗಿತ್ತು, ಕಿನಾರೆಯೂ ಸಹ ಸ್ಪಟಿಕದಷ್ಟು ಶುದ್ಧವಾದ ಮರಳಿನಿಂದ ಆವೃತವಾಗಿದೆ, ತುಂಡಿ ಬೀಚ್ ಅಲ್ಲಿ ಬೀಚ್ ರೆಸಾರ್ಟ್ ಇದ್ದು ಇಲ್ಲಿಯೇ ನಮಗೆ ಮಧ್ಯಾಹ್ನದ ಊಟದ ವ್ಯವಸ್ಥೆಯಾಗಿತ್ತು, ಸ್ವಲ್ಪ ಸಮಯ ಮಗ, ಮಡದಿಯ ಜೊತೆ ಫ್ಯಾಮಿಲಿ ಕಯಾಕಿಂಗ್ ಮಾಡಿ ಸಾಗರವನ್ನು ಅಳವನ್ನು ಅಳೆದು  ಬಂದೆವು.  ನೀರಲ್ಲಿ ಬಿದ್ದರೆ ಮೇಲೇಳಲು ಮನಸ್ಸು ಆಗುವುದಿಲ್ಲ ಹಾಗಾಗಿ ಸಮಯ ಕಳೆದದ್ದು ಗೊತ್ತು ಆಗುವುದಿಲ್ಲ.  ಟೂರ್ ಮ್ಯಾನೇಜರ್ ಫಾಲ್ಲಸರಿ ಹಳ್ಳಿಗೆ ನಾವು ಭೇಟಿ ನೀಡಬೇಕು ಹಾಗಾಗಿ ನಾವೆಲ್ಲ ಹೋರಡಬೇಕು ಎಂದು ತಿಳಿಸಿದ್ದರಿಂದ ನಾವು ಒಲ್ಲದ ಮನಸಿನ್ನಿಂದ ನೀರಿನಿಂದ ಮೇಲೆದ್ದು ಹಳ್ಳಿಯ ಭೇಟಿಗೆ ಅಣಿಯಾದೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೬

ದೊರದಲ್ಲಿ ನಮ್ಮಲ್ಲಿ ಲಗೇಜ್ ಸಾಗಿಸುವ ಆಟೋಗಳ ತರಹ ಇರುವ ವಾಹನಗಳು ಒಂದೊಂದಾಗಿ ಬರತೊಡಗಿದವು. ನಾವು ನಮ್ಮ ಲಗೇಜ್ ಸಾಗಿಸಲು ಇಷ್ಟು ಆಟೋಗಳು ಏಕೆ ಎಂದು ಸುಮ್ಮನೆ ನೋಡುತ್ತಾ ನಿಂತೆವು.  ಅಷ್ಟರಲ್ಲೇ ನಮ್ಮ ಟೂರ್ ಮ್ಯಾನೇಜರ್ ಹತ್ತಿ ಹತ್ತಿ ತಡವಾಗಿದೆ ನಾವು ಇನ್ನು ಲೈಟ್ ಹೌಸ್ ಗೆ ಹೋಗಬೇಕು, ಸುಮಾರು ೧೫ ನಿಮಿಷ ಪ್ರಯಾಣ ಅಂತ ಹೇಳಿ ನಮ್ಮನ್ನು ಲಗೇಜ್ ಆಟೋ ಹತ್ತಿಸಿದ.  ಈ ಆಟೋಗಳು ನಮ್ಮ ಕಡೆ ಸಂಚಾರಿ ತರಕಾರಿ ಮಾರುವ ಆಟೋಗಳ ಗಾತ್ರದಲ್ಲಿದ್ದವು.  ಆದರೆ  ಆಟೋ ಹತ್ತಲು ಸಣ್ಣ ಕುರ್ಚಿ ಹಾಗು ಹಿಂದೆ ಕೂರಲು ಬೆಂಚ್ ಹಾಕಿ ಆಸನದ ವ್ಯವಸ್ಥೆ ಮಾಡಿದ್ದರು.  ಹೆಚ್ಚು ಕಡಿಮೆ ಎಲ್ಲ ರೀತಿಯ ವಾಹನಗಳಲ್ಲಿ ಓಡಾಡಿದ್ದ ನಮಗೆ  ಈ ಓಪನ್ ಆಟೋದಲ್ಲಿ ಮಿನಿಕಾಯ್  ದ್ವೀಪದ ಸಹಜ ಸೌಂದರ್ಯ ಸವಿಯುವ ಭಾಗ್ಯವನ್ನು ಒದಗಿಸಿತ್ತು ಎಂದರೆ ತಪ್ಪಾಗಲಾರದು.  ಸುತ್ತ ಮುತ್ತಲಿನ ಪ್ರಕೃತಿಯ ಆರಾಧಿಸುತ್ತ ನಾವು ಲೈಟ್ ಹೌಸ್ ತಲುಪಿದೆವು. 

ಲೈಟ್ ಹೌಸ್ ಅಂದರೆ  ಅತ್ಯಂತ ಪ್ರಖರವಾದ ಬೆಳಕನ್ನು ಮಸೂರದ ಮೂಲಕ ಎತ್ತರವಾರದ ಸ್ಥಳದ  ಮೇಲೆ ಹೊರಸೂಸುವ ಬಳಸುವ ಕಟ್ಟಡ. ಹೆಚ್ಚಾಗಿ ಜಲಯಾನದಲ್ಲಿ ಹಡಗು ಇಲ್ಲವೇ ದೋಣಿಗಳ  ಸುರಕ್ಷಿತ ಪ್ರವೇಶ ಇಲ್ಲವೇ ನಿಲುಗಡೆಗೆ ಅವಕಾಶಕ್ಕಾಗಿ ಬಳಸುತ್ತಾರೆ. 

ವಾಸ್ಕೋ ಡಾ ಗಾಮ ಭಾರತಕ್ಕೆ ಹೊಸ ಸಮುದ್ರ ಮಾರ್ಗ ಕಂಡು ಹಿಡಿದಾಗ ಈ ದ್ವೀಪ ಬಳಸಿ ಭಾರತ ಕಡೆ ಬರುತ್ತಿದ್ದರಂತೆ , ಮುಂದೆ ಪೋರ್ಚುಗಲ್ ನಾವಿಕರು ಇದೆ ಮಾರ್ಗ ಬಳಸಿದರಂತೆ ,  ಆ ಸಮಯದಲ್ಲಿ  ಹಡಗುಗಳು ಸಾಗರದ ಆಳ ಅರಿಯದೆ ಹವಳ ದಂಡೆಗೆ ಬಡಿದು  ಹಿಂದಕ್ಕೂ ಮುಂದಕ್ಕೂ ಹೋಗಲಾಗದೆ ಸಿಕ್ಕಿ  ಅವಶೇಷವಾದವಂತೆ.  ಭಾರತವನ್ನು ಆಂಗ್ಲರ ಆಳ್ವಿಕೆ ಆರಂಭವಾದ ನಂತರ  ಮಿನಿಕಾಯ್ ದ್ವೀಪವನ್ನು ತಮ್ಮ ಸುಪರ್ಧಿಗೆ ಆಂಗ್ಲರು ಪಡೆದು , ನಾವಿಕರ ಅನುಕೂಲಕ್ಕಾಗಿ ಈ  ಲೈಟ್ ಹೌಸ್ ಅನ್ನು ೧೮೮೫ ಆಂಗ್ಲ ಸರ್ಕಾರ ಇಲ್ಲಿ ಸ್ಥಾಪಿಸಿತು. ಅಂದು ಆರಂಭಿಸಿದ  ಲೈಟ್ ಹೌಸ್ ಇಂದಿಗೂ ಸಹ  ಯಾವುದೇ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದೆ. 

ನೆಲಮಟ್ಟದಿಂದ ಸುಮಾರು ೧೫೭ ಅಡಿ ಎತ್ತರದ ಈ ಲೈಟ್ ಹೌಸ್ ಅನ್ನು ಲಂಡನ್ ಇಂದ ತಂದ ಇಟ್ಟಿಗೆಗಳಿಂದ ಕಟ್ಟಿದ್ದಾರೆ, ಅಂದು ಕಟ್ಟಿದ ಲೈಟ್ ಹೌಸ್ ಇಂದಿಗೂ ಸುಭದ್ರವಾಗಿದೆ ,  ಲೈಟ್ ಹೌಸ್ ತಳಭಾಗ  ನಾ ನೋಡಿದ ಬೇರೆ ಎಲ್ಲಾ ಲೈಟ್ ಹೌಸ್ ಗಳಿಗಿಂತ ವಿಶಾಲವಾಗಿದೆ. ಸುಮಾರು ೨೨೦ ಮೆಟ್ಟಿಲುಗಳನ್ನು ಹತ್ತಿ ಲೈಟ್ ಹೌಸ್ ತುದಿಯನ್ನು ತಲುಪ ಬೇಕು. ಮೆಟ್ಟಿಲು ಹತ್ತುವ ಮೊದಲೇ ಅಲ್ಲಿನ ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಸಣ್ಣ ಸಣ್ಣ ಝರಿ ಹರಿಯತೊಡಗಿದವು ಹಾಗಾಗಿ ಹೇಗೆ ಹತ್ತುವುದು ಎಂದು ಯೋಚಿಸುತ್ತ ಇದ್ದೆವು.  ಆದರೆ ನಮ್ಮೊಂದಿಗೆ ನನ್ನ ನಾಲ್ಕು ವರ್ಷದ  ಮಗನ ಜೊತೆ ಸುಮಾರು ಎಪ್ಪತ್ತು ವರ್ಷದ ತರುಣರು ಸಹ ನಾ ಮೊದಲು ತಾ ಮೊದಲು ಎಂದು ಮೆಟ್ಟಿಲನ್ನು ಎರ ತೊಡಗಿದರು.  

                                         

ದ್ವೀಪದ  ಭೂಭಾಗವನ್ನು ಕಾಣದಂತೆ  ಮರೆಮಾಚುವ ಸಾಲು ಸಾಲು ತೆಂಗಿನ ಮರಗಳು, ಶಾಂತವಾಗಿ  ಸಾಲಾಗಿ ಬಂದು ತೀರಕ್ಕೆ ಅಪ್ಪಳಿಸುವ ತೆರೆಗಳು, ಅಲೆಗಳೇ ಇಲ್ಲದೆ ಸ್ತಬ್ದವಾಗಿ ಅಳವನ್ನು ಅರಿಯುವಂತೆ ಕೈಬೀಸಿ ಕರೆಯುವ ಶರಧಿಯು ಒಂದು ಕಡೆ,  ಸ್ಪಟಿಕದಷ್ಟು ಶುಭ್ರವಾದ ಬಿಳಿ ಮರಳಿನ ಕಿನಾರೆ ಕಣ್ಣು ಹಾಯಿಸಿದಷ್ಟು ಅಂತರಕ್ಕೆ  ನೀಲಿ, ಬಿಳಿ, ಪಚ್ಚೆ, ತಿಳಿ ಹಸಿರು, ತಿಳಿನೀಲಿ  ಬಣ್ಣಕ್ಕೆ ಕಾಣುವ ಸಾಗರ. ಸಾಗರ ಹಾಗು ದ್ವೀಪದ ಭೂ ಭಾಗದ  ಪರಿಧಿಯ ವಿಸ್ತಾರವನ್ನು ಕಣ್ಣಳತೆಯಲ್ಲಿ ಕಾಣಬಹುದು, ಅದಲ್ಲದೆ ದ್ವೀಪದ ಏರಿಯಲ್ ವ್ಯೂ ನಿಜಕ್ಕೂ ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಮೆಟ್ಟಿಲು ಏರುತ್ತಿದ್ದಾಗ ಆಯಾಸ ಕ್ಷಣಮಾತ್ರದಲ್ಲಿ ತುದಿ ತಲುಪಿದಾಗ ಮಾಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇಲ್ಲಿ ನಾವು ಸ್ವಲ್ಪ ಜಾಸ್ತಿ ಸಮಯ ಕಳೆಯಬಹುದು ಏಕೆಂದರೆ ಇಲ್ಲಿ ಇದ್ದದ್ದು ಕೆಲವೇ ಪ್ರವಾಸಿಗರು ಮಾತ್ರ. ಹಾಗಾಗಿ ಎಷ್ಟು ಸಮಯವಾಗುತ್ತೋ ಅಲ್ಲಿಯವರೆಗೂ ಕಣ್ಣತುಂಬಿಕೊಂಡು ನಿಧಾನವಾಗಿ ಅತ್ಯಂತ ಹುಷಾರಿನಿಂದ  ಲೈಟ್ ಹೌಸ್ ಕೆಳಗೆ  ಇಳಿದು ಬಂದು  ಮಿನಿಕಾಯ್ ತುಂಡಿ ಬೀಚ್ ಕಡೆಗೆ ನಮಗಾಗಿ ಕಾಯುತ್ತಿದ್ದ ಗಾಡಿ ಹತ್ತಿದೇವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೫

ಸಾಗರಕ್ಕೆ ಸ್ನೇಹ ಹಸ್ತ ಚಾಚುವಂತೆ ಕಾಣುವ ಕಲ್ಪ ವೃಕ್ಷಗಳು , ಸ್ಪಟಿಕದಷ್ಟು ಶುಭ್ರವಾದ  ಬಿಳಿ ಮರಳಿನ ಕಡಲ ಕಿನಾರೆ, ಅಲ್ಲೊಂದು ಇಲ್ಲೊಂದು ಕಡೆ ಲಂಗರು ಹಾಕಿದ ನಾವಿಕನಿಲ್ಲದ ದೋಣಿಗಳು, ಸಾಗರದ ಸಣ್ಣ ಸಣ್ಣ ಅಲೆಗಳ ಇಂಚರ,  ದಡದಲ್ಲಿ ಸುಲಭವಾಗಿ  ಸಿಗುವ ಉಭಯವಾಸಿಗಳನ್ನು ಭೇಟೆಯಾಡುವ ಒಂದಿಷ್ಟು ಕಡಲಹಕ್ಕಿಗಳು, ಮೊಣಕಾಲು  ಆಳದ ಸಮುದ್ರದಲ್ಲಿ  ಸಾಗರವಾಸಿಗಳು ನಮಗೆ ಸ್ವಾಗತ  ಕೋರುತ್ತಾ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಅದಾಗಲೇ  ಮಟ ಮಟ ಮಧ್ಯಾಹ್ನವಾಗಿದ್ದರಿಂದ ದ್ವೀಪವಾಸಿಗಳಾರು ಕಣ್ಣಿಗೆ ಬೀಳಲಿಲ್ಲ.  ಈ ಎಲ್ಲ ದೃಶಗಳನ್ನು ಸ್ಮೃತಿಪಟಲದಲ್ಲಿ ಅಚ್ಚಿಡುತ್ತಾ  ಲಕ್ಷದ್ವೀಪ ಪ್ರವಾಸದ ಮೊದಲ ದ್ವೀಪವಾದ ‘ಮಿನಿಕಾಯ್ ‘  ದ್ವೀಪಕ್ಕೆ ಕಾಲಿಟ್ಟೆವು. 

ದ್ವೀಪದ ಬಗ್ಗೆ ನಾಲ್ಕು ಮಾತನಾಡಬೇಕು, ಏಕೆಂದರೆ  ಹಡಗಿನಲ್ಲಿ ಮೊದಲ ಬಾರಿಗೆ ಈ ದ್ವೀಪದ ನಿವಾಸಿಗಳನ್ನು ನೋಡಿದಾಗ ಅವರು  ಎಲ್ಲಿಯೂ ಭಾರತೀಯರ ರೀತಿ ಕಾಣುತ್ತಲೇ ಇರಲಿಲ್ಲ ಅದಕ್ಕಿಂತ ಹೆಚ್ಚಾಗಿ ಮಾತನಾಡಲು ಪ್ರಯತ್ನಿಸಿದರೆ  ಅವರಿಂದ ಪ್ರತಿಕ್ರಿಯೆಯೂ ಬರಲಿಲ್ಲ. ದೈಹಿಕವಾಗಿಯೂ  ಸದೃಢ ಎನಿಸಿದರೂ ಎಲ್ಲಿಯೂ ಬೊಜ್ಜುವಿಲ್ಲದೆ ಚಪ್ಪಟೆಯಾಗಿದ್ದರು . ಭಾರತ ಭೂಪ್ರದೇಶದ ಬಹುತೇಕ ರಾಜ್ಯಗಳ ಜನರನ್ನು ನೋಡಿರುವುದರಿಂದ ಇವರು ದೈಹಿಕವಾಗಿಯೂ  ಎಲ್ಲೋ ಅನ್ಯ ದೇಶದ ನಿವಾಸಿಗಳಂತೆ ಕಾಣುತಿದ್ದರು. 

ಮಿನಿ ಕಾಯ್  ದ್ವೀಪ  ಲಕ್ಷದ್ವೀಪದ  ದಕ್ಷಿಣ ತುದಿಯಲ್ಲಿರುವ ಕಟ್ಟ ಕಡೆಯ ಜನವಸತಿರುವ ಎರಡನೇ ವಿಶಾಲವಾದ ದ್ವೀಪ, ಇಲ್ಲಿಂದ ಮಾಲ್ಡಿವ್ ದೇಶದ  ಉತ್ತರದಲ್ಲಿನ ತುರಾಕುನು ದ್ವೀಪಕ್ಕೆ ಸುಮಾರು ೧೨೦ ಕಿಲೋಮೀಟರು ದೊರವಿದೆ.  ಇಲ್ಲಿನ ಮುಖ್ಯ ಆಡುಭಾಷೆ  ‘ ದಿವೇಹಿ’, ಇದು ಮಾಲ್ಡಿವ್ ದ್ವೀಪದ ರಾಷ್ಟೀಯ ಭಾಷೆ ಕೂಡ. ಇದಲ್ಲದೆ ಮಲಯಾಳಂ, ಅಲ್ಪ ಸ್ವಲ್ಪ ಹಿಂದಿ ಸಹ ಮಾತನಾಡುತ್ತಾರೆ.

ಮಿನಿಕಾಯ್ ದ್ವೀಪಕ್ಕೆ ಮೊದಲು ಮಾಲಿಕು ಎಂಬ ಹೆಸರಿತ್ತು , ಮಾಲಿಕು ಯಿಂದ  ಮಿನಿಕಾಯ್  ಎಂಬುದಕ್ಕೆ ಬದಲಾವಣೆಯ  ಹಿಂದಿನ ಸ್ವಾರಸ್ಯ ನಾವು ತಿಳಿಯಲೇಬೇಕು. ಮಾನವನ ವಲಸೆಯ ಆರಂಭದ ಪೂರ್ವದಲ್ಲಿ ಈ  ದ್ವೀಪದ ನಿವಾಸಿಗಳು  ಬಂಗಾಳ ಕೊಲ್ಲಿಯ ನಿಕೋಬಾರ್  ದ್ವೀಪದಲ್ಲಿ ನೆಲೆಸಿದ್ದರು.  ಅಂಡಮಾನ್  ಮತ್ತು ನಿಕೋಬಾರ್ ದ್ವೀಪದಲ್ಲಿ ನರಭಕ್ಷಕರು ಹಿಂದೆ ನೆಲೆಸಿದ್ದರು, ಅವರು ಅಲ್ಲಿಂದ ಮಿನಿಕಾಯ್ ದ್ವೀಪಕ್ಕೆ  ವಲಸೆ ಬಂದರು. ಹಾಗಾಗಿ ಅಂಡಮಾನ್  ಮತ್ತು ನಿಕೋಬಾರ್ ದ್ವೀಪಗಳನ್ನು  ‘ಮಿನಿಕ ರಜ್ಜೆ’ ಅಂದರೆ  ‘ನರಭಕ್ಷಕರ ಸಾಮ್ರಾಜ್ಯ’ ಎಂದು  ಕರೆಯುತ್ತಿದ್ದರು, ಹಾಗಾಗಿ  ಮಿನಿಕಾಯ್ ದ್ವೀಪಕ್ಕೆ ಮಾಲಿಕು ಎಂಬ ಹೆಸರು ಪಡೆಯಿತು. 

ಒಮ್ಮೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯು ಈ ದ್ವೀಪಕ್ಕೆ ಭೇಟಿ ನೀಡಿದ  ಸಂದರ್ಭದಲ್ಲಿ ಈ ದ್ವೀಪದ ಹೆಸರು ಏನು  ಎಂದು ಇಲ್ಲಿನ ದ್ವೀಪವಾಸಿಯನ್ನು ಕೇಳುತ್ತಾನೆ. ಆಗ ನಾನು ಮಾಲಿಕು ದ್ವೀಪದವನು , ಇದಕ್ಕೂ ಮುನ್ನ ಮಿನಿಕ ರಜ್ಜೆಯಲ್ಲಿ ನೆಲೆಸಿದವನು ಎಂದು ತಿಳಿಸುತ್ತಾನೆ. ಇದೆ ಪದಗಳು ಪದಾಂತರವಾಗಿ ಮಿನಿಕವಾಗಿ ಕಡೆಗೆ ಮಿನಿಕಾಯ್ ಆಯಿತು ಎನ್ನುವುದು ಇತಿಹಾಸ.  

ಈ ಇತಿಹಾಸ  ಮೊದಲೇ ತಿಳಿದಿದ್ದ ನನಗೆ  ದ್ವೀಪವಾಸಿಗಳು ಯಾರು ಕಾಣದೇ ಇದ್ದದು ಹಾಗು ಹಡಗಿನಿಂದ ಮೊದಲ ಸರದಿಯಲ್ಲಿ ಬಂದಿದ್ದ ಪ್ರವಾಸಿಗರು ವಾರ್ಫ್ ಪಾಯಿಂಟ್ ಅಲ್ಲಿ ಇಲ್ಲದಿದ್ದದು     ‘ ಇನ್ನೂ ನರಭಕ್ಷಕರು ಇದ್ದಾರಾ ‘ ಎಂಬ ಆತಂಕಕ್ಕೆ  ಕಾರಣವಾಯಿತು.  ಸ್ವಲ್ಪ ಸಮಯದಲ್ಲೇ ಪ್ರವಾಸಿಗರನ್ನು ಲೈಟ್ ಹೌಸ್ಗೆ ಕರೆದುಕೊಂಡು ಹೋಗುವ ವಾಹನ ಒಂದೊಂದಾಗಿ ಬರ ತೊಡಗಿರುವುದನ್ನು ಕಂಡು ಸ್ವಲ್ಪ ನಿರಾತಂಕನಾದೆನು…

Uncategorized

ಲಕ್ಷ ದ್ವೀಪಗಳ ಮಹಾ ಯಾನ – ದೋಣಿ ಸಾಗಲಿ.. ಮುಂದೆ ಹೋಗಲಿ.. ದೂರ ದ್ವೀಪವ ಸೇರಲಿ – ೪

ದಿನವೆಲ್ಲಾ ದಣಿದಿದ್ದ ದೇಹಕ್ಕೆ ನಿದ್ದೆಯೇನು ಕ್ಷಣ ಮಾತ್ರದಲ್ಲೇ ಆವರಿಸಿತು, ಆದರೆ ದೇಹ ನಿದ್ರಾವಸ್ಥೆಯಲ್ಲಿದ್ದರೂ  ಮನಸ್ಸು ಮಾತ್ರ  ಜಾಗೃತವಾಗಿತ್ತು. ಜಾಗೃತ ಮನ ಎಚ್ಚರಗೊಂಡಾಗ ಕೆಲ ಕ್ಷಣದಲ್ಲೇ  ಅಗಾಧ ನೀಲ ಸಾಗರದ ಮಧ್ಯದಲ್ಲಿ ಹುಣ್ಣಿಮೆಯ ಚಂದಿರನ ಬೆಳಕಿನ ಅಡಿಯಲ್ಲಿ ಪುಟ್ಟ ತೊಟ್ಟಿಲಿನಲ್ಲಿ ಒಂದೆಡೆ ಒಡಲಿನ  ನಿನಾದ  ಮತ್ತೊಂದಡೆ  ಹಡಗಿನ  ಹೃದಯದಿಂದ  ಬರುತ್ತಿದ್ದ   ಸಪ್ಪಳದ ಕಛೇರಿಯಲ್ಲಿ ಹಾಸಿಗೆಯೂ  ೩೬೦ ಡಿಗ್ರಿ  ತಿರುಗುತ್ತಾ ಮಲಗಿದ ಅನುಭವವಾಗ ತೊಡಗಿತು.  

ನಿಜ ಹೇಳಬೇಕೆಂದರೆ ಇದೊಂದು ಅನನ್ಯ ಅನುಭವ, ಎಲ್ಲೋ ನನಗೊಬ್ಬನಿಗೇ ಈ ರೀತಿ ಕನಸು ಬಿದ್ದಿರ ಬಹುದೇ  ಇಲ್ಲವೇ  ಅನುಭವವಾಗಿರಬಹುದೇ  ಎಂದು ಬೆಳಗ್ಗೆ ಎದ್ದು ನಮ್ಮನೆಯವರ ಹತ್ತಿರ ಕೇಳಿದೆ ಅವರಿಗೂ  ಸಹ ಇದೆ ಅನುಭವವಾಗಿತ್ತು. ಈ ಅನುಭವ ನಾವು ಲಕ್ಷದ್ವೀಪ ಪ್ರವಾಸ ಮುಗಿಸಿ ಒಂದು ವಾರವಾದ ಮೇಲೆ ಅಂತ್ಯಗೊಂಡಿತ್ತು, ಲಕ್ಷದ್ವೀಪ ಪ್ರವಾಸ ಎಷ್ಟು ಪ್ರಭಾವ ಬೀರಿತೆಂದರೆ ತಪ್ಪಾಗಲಾರದು. ಊರಿಗೆ ಮರಳಿ ಹಾಸಿಗೆಯೇ ಮೇಲೆ ಮಲಗಿದರೆ ಸಾಕು  ಹಾಸಿಗೆಯೂ  ಸಹ ನೀರಿನಲ್ಲಿ ತಿರುಗುತ್ತಾ ಸಮುದ್ರದ ಕಛೇರಿಯಲ್ಲಿ ಮುಳುಗಿದ ಅನುಭವ  ಸುಮಾರು ಒಂದು ವಾರವಿತ್ತು ಇದು ವಿಚಿತ್ರವೆನಿಸದರೂ ಅಸಾಧಾರಾಣವಾದದು ವರ್ಣನೆಗೆ ನಿಲುಕದ್ದು.  

ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನುಸಾಗರದ ಮಧ್ಯದಲ್ಲಿ ನಿಂತು ಹಡಗಿನಲ್ಲಿ ನೋಡುವ  ವಾಂಛೆ ಬಹುದಿನದಾಗಿತ್ತು.  ಹಾಗಾಗಿ  ಹಿಂದಿನ ದಿನ ಸೂರ್ಯಾಸ್ತವನ್ನು ತುಂಬಿಕೊಂಡಿದ್ದ ಕಣ್ಣುಗಳು ನಾಳಿನ ಸೂರ್ಯೋದಯಕ್ಕೆ ಸಾಕ್ಷಿಯಾಗಲು ಕಾತರದಿಂದ  ಕ್ಷಣಗಣನೆಯಲ್ಲಿ ತೊಡಗಿದ್ದವು. ಬೆಳಗಿನ ಐದು ಗಂಟೆಗೆ ಅಲಾರಂ ಮೊದಲ  ಬಾರಿಗೆ ಸದ್ದು ಮಾಡುವುದಕ್ಕೆ ಮುಂಚೆ ಜಾಗೃತ ಮನಸ್ಸು ಹಾಸಿಗೆಯಿಂದ ಬಡಿದೆಬ್ಬಿಸಿತ್ತು. ನಿತ್ಯ ಕರ್ಮ ಮುಗಿಸಿ,  ಎಲ್ಲಡೆಯೂ  ಕತ್ತಲೆ  ಇರಬಹುದೆಂದು ಭಾವಿಸಿ ಹಡಗಿನ ಮೇಲಿನ ಡೆಕ್ಕ ಕಡೆಗೆ ಗಗನ ವೀಕ್ಷಣೆಗೆ ಹೊರಟೆ. ಅದಾಗಲೇ ಹಡಗಿನ ಅಡುಗೆಕೋಣೆಯ ಸಿಬ್ಬಂದಿ  ಬೆಳಗಿನ ಚಹಾ ತಯಾರಿಸಿ ನಮಗಾಗಿ ಕಾಯುತ್ತ ಇದ್ದರು. ಒಂದಿಷ್ಟು ಚಹಾ ಲೋಟಕ್ಕೆ ಸುರಿದುಕೊಂಡು ಸೀದಾ ಮೇಲಿನ ಡೆಕ್ ಹೊರಟೇ ಆದರೆ ಅಲ್ಲಿ ಹೇಳಿ ಕೊಳ್ಳುವಷ್ಟು ಕತ್ತಲು ಇರಲಿಲ್ಲ. ನೆತ್ತಿಯ ಮೇಲೆ ಅಗಸವೂ ಶುಭ್ರವಾಗಿತ್ತು ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಇಣುಕಿ ಮಿಣಕಿ ಮರೆಯಾಗುತ್ತಿದ್ದವು. ಹುಣ್ಣಿಮೆಯ ಚಂದಿರ ಇಳೆಯ ತಂಪಿಳಿಸಿ ಮರೆಯಾಗುವ ಉತ್ಸಾಹದಲ್ಲಿದ್ದ, ಸಾಗರದ ಮೇಲಿನ ತಣ್ಣನೆ ಗಾಳಿ ಮಂದವಾಗಿ ಬೀಸುತಿತ್ತು, ಸುತ್ತಲೂ ಅಗಾಧ  ಜಲರಾಶಿ, ಬಹು ದೊರದಲ್ಲಿ ನಮ್ಮ ರೀತಿಯ ಹಡಗು ಇಲ್ಲವೇ ಸಿನಿಮಾದಲ್ಲಿ ತೋರಿಸುವ ದಾರಿ ತಪ್ಪಿದ ದೋಣಿಯಾದರು , ಹಾರುವ ಡಾಲ್ಫಿನ್ , ಶಾರ್ಕ್ , ತಿಮಿಂಗಿಲ, ಮೆಗಾಲಾಡನ್ ಎಲ್ಲಾದರೂ ಕಾಣಿಸಿತೇ ಎಂದು ಕಣ್ಣು ಹಾಯಿಸಿದೆ ಅದಾವುದಾರೂ ಸುಳಿವು ಸಹ ಇಲ್ಲ. 

ಮೂಡಣದಲ್ಲಿ ಹಿಂದಿನ ದಿನ  ಶರಧಿಯಲ್ಲಿ ಮುಳುಗಿದ್ದ ಸೂರ್ಯ ಅಂಬರ ಚುಂಬಿಸಲು ಮೇಲೇರುತ್ತಿದ್ದ ಆದರೆ ಈ ದೃಶ್ಯಕ್ಕೆ ಸೆನ್ಸಾರ್  ಕಟ್ ಮಾಡಲು ಮೇಘ ರಾಜನು  ಕಣ್ಣಿಗೆ ಕಾಣುವಂತೆ ಅಡ್ಡಗಾಲು ಹಾಕಿದ್ದನು. ಸುಮಾರು ಸಮಯ ಕಳೆಯಿತು ಸೂರ್ಯನ ಸುಳಿವೇ ಇಲ್ಲ. ಎಲ್ಲೋ ನನಗೆ ಸಾಕ್ರಟೀಸನ  ಋಣದ ಹುಂಜದ  ಪದ್ಯವು ಸಹ ಹೊಳೆಯಿತು  ಆದರೆ ಸಾಕ್ರಟೀಸನಾಗಲಿ ಇಲ್ಲವೇ ಹುಂಜವೇ ಆಗಲಿ ಇರಲಿಲ್ಲ, ಮೂಡಣವು  ಸಂಪೂರ್ಣ ಬಂಗಾರಮಾಯವಾಗಿತ್ತು , ನೆತ್ತಿಯ ಮೇಲೆ ಶುಭ್ರವಾದ ನೀಲಿ ಬಣ್ಣದ ಅಗಸವು ಗೋಚರಿಸುತ್ತಿತ್ತು. ಅದಾಗಲೇ ರವಿಯು ಸಾಗರದಿಂದ ಮೇಲೆದ್ದಾಗಿತ್ತು ಮೋಡಗಳು ಮರೆಯಾಗಲು ಆರಂಭಿಸಿದ್ದವು ಬಹುದಿನದ ಅತಿ ಮುಖ್ಯ ದೃಶ್ಯವನ್ನು ಸವಿಯುವ ಭಾಗ್ಯ ಸ್ವಲ್ಪದರಲ್ಲೇ ತಪ್ಪಿತು.  ಸುಮಾರು  ನೆಲ ಬಿಟ್ಟು ೩೫೦ ಕಿಲೋಮೀಟರ್ ಬಂದರು ಸುತ್ತಲೂ ಯಾವದೇ  ಯಾವುದೇ ದ್ವೀಪದ ಕುರುಹುಗಳ ಸುಳಿವಿರಲಿಲ್ಲ ಕಡೆಗೆ  ಭಾರವಾದ ಮನಸ್ಸಿನಿಂದ ನಿಧಾನವಾಗಿ ಕೋಣೆಗೆ ಹಿಂತಿರುಗಿದೆ. 

ಬೆಳಗಿನ ತಿಂಡಿ ಮುಗಿಸಿ ಹಡಗಿನ ಮೊದಲ ಡಿಸ್ ಎಂಬಾರ್ಕಷನ್  ಕರೆಗೆ ಕಾಯುತ್ತಿದ್ದೆ (ಹಡಗಿನಿಂದ ಇಳಿಯುವಿಕೆ),  ಹಡಗು ಸುಮಾರು ಎರಡು ಗಂಟೆ ತಡವಾಗಿ ಮಿನಿಕಾಯ್  ದ್ವೀಪ ತಲುಪಿತ್ತು.  ದ್ವೀಪದ ಹತ್ತಿರ ಎಂದರೆ ಸುಮಾರು ಮೂರರಿಂದ ನಾಲ್ಕು ಕಿಲೋ ಮೀಟರ್ ದೊರದ ಆಳದ ಸಮುದ್ರದಲ್ಲಿ ಲಂಗುರು ಹಾಕಲಾಯಿತು. ಹಡಗಿನಿಂದ ಇಳಿಯುವುದನ್ನು ಮೊದಲ ಡೆಕ್ಕಿನ ಬಾಗಿಲಿನಲ್ಲಿ ವ್ಯವಸ್ಥೆ ಮಾಡಿರುತ್ತಾರೆ  ಅಲ್ಲಿಂದ ಸುಮಾರು ೨೫ ರಿಂದ  ೪೦ ಜನ ಕೂರಬಹುದಾದ ಸಣ್ಣ ಸಣ್ಣ ದೋಣಿಯಲ್ಲಿ ಮೊದಲಿಗೆ ದ್ವೀಪದ ನಿವಾಸಿಗಳು  ನಂತರ ಪ್ರವಾಸಿಗರನ್ನು ತಂಡ ತಂಡವಾಗಿ ದ್ವೀಪಕ್ಕೆ ವರ್ಗಾಯಿಸುತ್ತಾರೆ. ಹಡಗಿನಿಂದ ಸಣ್ಣ ದೋಣಿಯಲ್ಲಿ ಮಿನಿಕಾಯ್ ದ್ವೀಪ ತಲುಪಲು ಸುಮಾರು ೨೦ ರಿಂದ ೩೦ ನಿಮಿಷದ ಪ್ರಯಾಣ.

ಹಡಗು ಲಂಗುರು ಹಾಕಿದಂತೆ, ದ್ವೀಪದ ದೋಣಿಗಳು ಒಂದೊಂದಾಗಿ  ಡಿಸ್ ಎಂಬಾರ್ಕಷನ್ ಬಾಗಿಲಿನ ಹತ್ತಿರ ನಿಂತು ದೋಣಿ ತುಂಬಿದ ತಕ್ಷಣ ಹೊರಡ ತೊಡಗಿದವು. ಪ್ರವಾಸಿಗರು ದೋಣಿ ಏರುವುದಕ್ಕೋ ಸ್ಥಳೀಯರು ದೋಣಿ ಏರುವುದಕ್ಕೋ ಬಹಳ ವ್ಯತ್ಯಾಸವಿದೆ. ಪ್ರವಾಸಿಗರಿಗೆ ಲೈಫ್ ಜಾಕೇಟ್ ಕೊಟ್ಟರೇ ಸ್ಥಳೀಯರಿಗೆ ದೇಹವೇ ಲೈಫ್ ಜಾಕೇಟ್ ಹಾಗೂ ಸ್ಥಳೀಯರು ದಿನ ಬಳಕೆಯ ವಸ್ತುಗಳ ಜೊತೆ ದೋಣಿ ಏರಬೇಕು, ಪ್ರವಾಸಿಗರ ದೋಣಿಯಲ್ಲಿ ಕೇವಲ ಪ್ರವಾಸಿಗರಿಗಷ್ಟೇ ಸೀಮಿತ ಎಲ್ಲೋ ಇದು ತಾರತಮ್ಯ ಎಂದು ಅನಿಸಿದರೂ ಮೀನಿಗೆ ಸಮುದ್ರವಾದರೂ ಸರಿಯೇ ಸಣ್ಣ ಬಾವಿಯಾದರೂ ಸರಿ ಎಂಬ ಭಾವನೆ ಮಾಡುತ್ತದೆ.  ನಮ್ಮನ್ನು ಎಲ್ಲಿ ಹಡಗಿನಲ್ಲಿಯೇ ಬಿಟ್ಟಾರೋ ಎಂದು ಪ್ರವಾಸಿಗರು ನಾ ಮುಂದು ತಾ ಮುಂದು ದೋಣಿ ಏರಲು ಆರಂಭಿಸಿದರು. ಕಡೆಗೆ ನಾವೂ ಸಹ ಏರಿಯಾಯಿತು.  

ದೋಣಿಯು ದ್ವೀಪದ ಕಡೆಗೆ ಸಾಗಿದಂತೆ  ತಸು ದೂರದಲ್ಲಿ ಸಾಗರದ ಬಣ್ಣವು ಕಡು ನೀಲಿಯಿದ್ದದ್ದು ಮೆಲ್ಲನೇ ತಿಳಿ ನೀಲಿಗೆ ಬದಲಾಯಿತು, ಮತ್ತೆ ಮುಂದೆ ಗಾಢ ಪಚ್ಚೆ ಬಣ್ಣಕ್ಕೆ ತಿರುಗಿ, ಸ್ವಲ್ಪ ಸಮಯದಲ್ಲೇ  ತಿಳಿ ಹಸಿರು ವರ್ಣಮಯವಾಯಿತು, ದ್ವೀಪ ಸಮೀಪಿಸಿದಂತೆ  ಮತ್ತೆ ತಿಳಿ ನೀಲಿಗೆ ತಿರುಗಿ ಸ್ಪಟಿಕದಷ್ಟು ಶುಭ್ರವಾಗಿ ಸಾಗರದ ತಳ ಕಾಣಲ್ಪಟ್ಟಿತು. ಈ ವರ್ಣಮಯದ ರಂಜನೀಯ ೩೦ ನಿಮಿಷ ಪಯಣ ಮನಸಿಗೆ ಮುದ ನೀಡಿತು ಎಂದರೇ ತಪ್ಪಾಗಲಾರದು.  

ಅದೇ ಸಮಯಕ್ಕೆ ನೆನಪಾಗಿದ್ದು ಸರ್ ಸಿ ವಿ ರಾಮನ್ ಅವರು ಇಂಗ್ಲೆಂಡ್ ನಿಂದ ಭಾರತಕ್ಕೆ ಮೆಡಿಟರೇನಿಯನ್ ಸಮುದ್ರದ ಮೇಲೆ ಸಮುದ್ರಯಾನ  ಮಾಡುವಾಗ  ಬೆಳಕಿನ  ಸಂಶೋಧನೆಗೆ ಬಳಸುವ ಉಪಕರಣಗಳಿಂದ  ಕ್ಷಣ ಕ್ಷಣಕ್ಕೂ ಸಮುದ್ರದ ರಂಜನೀಯ  ಬದುಕಿನ ಮೇಲೆ  ಪ್ರಯೋಗ ಮಾಡಿ ಭಾರತಕ್ಕೆ ಕಾಲಿಡುವುದರಲ್ಲೇ ಮೊದಲು ಸಂಶೋಧನಾ ಪ್ರಬಂಧವನ್ನು ಬೆಳಕಿನ ಚದುರುವಿಕೆಯ ಮೇಲೆ ಬರೆದು ನೇಚರ್ ಪತ್ರಿಕೆ ಕಳುಹಿಸಿ ಕೊಟ್ಟದ್ದು ಎಂಬ ಬಾಲ್ಯದ ಪಠ್ಯದಲ್ಲಿದ್ದ ಪಾಠ. 

ಅದಾಗಲೇ  ರವಿಯು ಎಂದಿನಂತೆ ಪ್ರಖರವಾಗಿ ಬೆಳಗುತ್ತಿದ್ದರೂ ಪ್ರಕೃತಿಯ ವಿಸ್ಮಯವನ್ನು ಆಸ್ವಾದಿಸುತ್ತಲೇ ತೀರ ತಲುಪಿದ್ದು ಒಂದು ರೀತಿ ಸಮಾಧಾನವನ್ನು ತಂದಿತ್ತು , ಹಡಗು ಹತ್ತಿ ಸುಮಾರು ೩೦ ಗಂಟೆಗಳ ನಂತರ ನಾವು ಧರೆಯ ಸ್ಪರ್ಶ ಮಾಡಿದ್ದೆವು ಎಲ್ಲೂ ನಿಲ್ ಆರ್ಮ್ ಸ್ಟ್ರಾಂಗ್ ಚಂದಿರನ ಮೇಲೆ ಕಾಲಿಟ್ಟಾಗ , ಕೊಲಂಬಸ್ ಅಮೇರಿಕಾ ಖಂಡವನ್ನು ಅನ್ವೇಷಣೆ ಮಾಡಿದಷ್ಟೇ, ವಾಸ್ಕೊ ಡಾ ಗಾಮಾ ಭರತ ಖಂಡಕ್ಕೆ ಹೊಸ ಸಮುದ್ರ ಮಾರ್ಗ ಕಂಡು ಹಿಡಿದಷ್ಟೇ, ಆರ್ಕಿಮಿಡಿಸ್ ಬೆತ್ತಲೆಯಾಗಿ ಯುರೇಕಾ ಎಂದು ಬಾತ್ ಟಬ್ನಿಂದ ಎದ್ದಾಗ ಅದ ಖುಷಿ ನನಗಾಗಿತ್ತು.   

ಮುಂದಿನ ವಾರ : ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ..

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಸಾಗರದಲ್ಲಿನ ನಾಲ್ಕು ಗೋಡೆಗಳ ಮಧ್ಯೆ – ೩

ನಾವು ಯಾವುದೇ ಎರಡು ಚಕ್ರಕ್ಕಿಂತ ಹೆಚ್ಚು ಗಾಲಿಗಳು ಇರುವ  ವಾಹನವನ್ನು ಹತ್ತುವಾಗ ಕಿಟಕಿ ಪಕ್ಕ ಕೂರುವುದು ಸಹಜ, ಅದರಲ್ಲೂ ಬಸ್, ರೈಲು , ವಿಮಾನದಲ್ಲಿಯೂ ಸಹ ಹಾಗೆ ಮಾಡುತ್ತೇವೆ. ವಿಮಾನ ಹತ್ತಲು ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ ಹಲವರು ವಿಮಾನದ ಸಿಬ್ಬಂದಿ ಹತ್ತಿರ ‘ ದಯವಿಟ್ಟು , ಕಿಟಕಿ ಕಡೆ ಇರುವ  ಆಸನ ಕೊಡಿ’ ಎಂದು ಬೇಡುವುದನ್ನು ನೋಡಿರುತ್ತೇವೆ ಇಲ್ಲವೇ ನಾವೇ ಬೇಡಿರುತ್ತವೆ. 

ಹಾಗೆಯೇ  ಹಡಗೇರುವ  ಸಮಯದಲ್ಲಿ ನಮ್ಮ ಕ್ಯಾಬಿನ್ಗೆ ಕಿಟಕಿ ಇದ್ದರೆ  ಚೆನ್ನ , ಹಾಗಾಗಿ ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ  ಸಾಗರದ ವಿಹಂಗಮ ದೃಶ್ಯ ಕಾಣುವ ಕಿಟಕಿ ಇದ್ದರೆ ಎಷ್ಟು ಚೆನ್ನ ಎಂದು ಆಲೋಚಿಸಿ, ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ದಯವಿಟ್ಟು ನಮಗೂ ಸಹ ಒಂದು ಕ್ಯಾಬಿನ್ ಕೊಡಿ ಎಂದು ಕೇಳಬೇಕೆಂದು ಇದ್ದೆ,  ಆದರೆ ಅದೇ ಗಡಿಬಿಡಿಯಲ್ಲಿ ಮರೆತು ಬೋರ್ಡಿಂಗ್ ಪಾಸ್ ಪಡೆದಿದ್ದೆ. ಮತ್ತೆ ಅದು ನೆನಪಿಗೆ ಬಂದದ್ದು  ಹಡಗನ್ನು ಏರಿದಾಗ, ಹಾಗಾಗಿ ನಮ್ಮ ಪಾಸ್ನಲ್ಲಿದ್ದ ಕ್ಯಾಬಿನ್ ಅನ್ನು ಹುಡುಕುತ್ತ ಮೊದಲು  ನಮ್ಮ ಕ್ಯಾಬಿನ್  ಹಾಗು ವಿಂಡೋ ಹೇಗಿದೆ ಎಂಬುದಕ್ಕೆ ತೆರೆ ಬಿದ್ದದ್ದು ನಮ್ಮ ಕ್ಯಾಬಿನ್ ಪ್ರವೇಶಿಸಿದಾಗಲೇ. 

ಕ್ಯಾಬಿನ್ ಒಳಗೆ ಹೋಗುತ್ತಿದ್ದಂತೆ  ಕಂಡದ್ದು ,  ಕೋಣೆಯು ಸುಮಾರು ೧೦ * ೧೮ ಅಡಿ ಇರಬಹುದು,  ಒಂದು ಮೂಲೆಗೆ ಪುಟ್ಟದಾದ  ಶೌಚಾಲಯ , ಒಂದು ಪುಟ್ಟ ಕಿಟಕಿ,  ಒಬ್ಬರು ಮೇಲಿನ ಬರ್ತ ನಲ್ಲಿ ಮತ್ತೊಬ್ಬರು ಕೆಳಗಿನ ಬರ್ತ ನಲ್ಲಿ ಒಂದು ರೀತಿ  ಮಕ್ಕಳು ಮಲಗುವ ಹಾಸಿಗೆ ರೀತಿಯ ಹಾಸಿಗೆ, ಪುಟ್ಟದಾದ  ಮೇಜು, ಎರಡು ಕುರ್ಚಿ,  ಮೇಜಿನ ಮೇಲೆ ಎರಡು ಬಾಟಲ್ ನೀರು, ಸೇಬು ಮತ್ತು ಕಿತ್ತಳೆ ಹಣ್ಣು ಅದಾಗಲೇ ಆಸೀನವಾಗಿತ್ತು.  ನಮ್ಮ ಪರಿಕರಗಳನ್ನು ಸುರಕ್ಷಿತವಾಗಿ ಇಡಲು ಒಂದು ಕಪಾಟು ,  ಒಂದು ಫ್ಯಾನ್ ,  ನಾಲ್ಕು ಲೈಫ್  ಜಾಕೇಟ್ , ಎರಡನ್ನು ದಿನ ಬಳಕೆಗೆ , ಮತ್ತೆರಡನ್ನು  ಅಪಾಯದ ಸಂದರ್ಭದಲ್ಲಿ ಅಂದರೆ ಹಡಗಿಗೆ ಅಪಾಯವಾದಾಗ  ಬಳಸಲು ಎಂಬರ್ಥ.  ಒಂದು ಸ್ಪೀಕರ್ ( ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೂಚನೆ ಕೊಟ್ಟಂತೆ  ಇನ್ಫಾರ್ಮಶನ್ ರೂಮ್ ನಿಂದ  ಆಗಾಗ ನಮಗೆ ಅಗತ್ಯದ ಸಂದೇಶ ಕೊಡಲು).  ಎಲ್ಲವೂ ಅಚ್ಚುಕಟ್ಟಾಗಿತ್ತು.  ಹಾಗಾಗಿ  ಎ ಸಿ ಸರಿಯಿದೆಯೇ, ನೀರು ಬರುತ್ತಿದೆಯೇ,  ಬಿಸಿ ನೀರು ಬರುತ್ತದೆಯೇ,  ದೀಪ , ಫ್ಯಾನ್ ಉರಿಯುತ್ತಿದೆಯೇ ಎಂದು  ಪರೀಕ್ಷಿಸಿ ಮುಂದೆ ಕ್ಯಾಬಿನ್  ಬೀಗ  ಎಲ್ಲಿ ಸಿಗುತ್ತಿಲ್ಲ ಎಂಬ ಆತಂಕ ಎದುರಾಯಿತು. 

ಅಕ್ಕ ಪಕ್ಕದ ಕ್ಯಾಬಿನ್ ಸಹ ಪ್ರವಾಸಿಗರನ್ನು ಕೇಳಿದಾಗ ನಮಗೆ ಬೀಗ ಸಿಕ್ಕಿದೆ ಎನ್ನುವ ಉತ್ತರ ಬರಬೇಕೆ, ಬೀಗವಿಲ್ಲದೆ ಪರಿಕರಗಳು ಇಲ್ಲಿ  ಅಸುರಕ್ಷಿತ ಎಂಬ ಭಯದಿಂದ  ಟೂರ್ ಮ್ಯಾನೇಜರ್ ಹುಡುಕಿ ಕೊಂಡು ಕೇಳಿದ್ದಾಯಿತು. ಬೀಗಗಳು ಇವೆ ಆದರೆ ಅವು ಯಾವು  ಕೆಲಸ ಮಾಡುವುದಿಲ್ಲ ಅದು ನಿಮ್ಮ ಸಹ ಪ್ರಯಾಣಿಕರಿಗೆ ಗೊತ್ತಿಲ್ಲ, ನಿಮ್ಮ ವಸ್ತುಗಳನ್ನು ಬೀರುವಿನ ಒಳಗೆ ಇಟ್ಟು ಚೀಲಕಕ್ಕೆ ಬೀಗ ಹಾಕಿ, ಬೀಗವು ಇಲ್ಲದಿದ್ದರೆ ಕೆಳಗೆ ಸ್ಟೋರ್ ಅಲ್ಲಿ ಸಿಗುತ್ತದೆ . ಇಲ್ಲಿ ಎಲ್ಲವೂ ಸೇಫ್ , ಯೋಚನೆ ಮಾಡಬೇಡಿ ಎಂದು ಹೇಳಿ ಕಳುಸಿದ. ನಾವು ಹೇಗಿದ್ದರೂ ನಾಲ್ಕು ಬೀಗ ತಂದಿದ್ದೆವು ಹಾಗಾಗಿ ಜಾಸ್ತಿ ಯೋಚನೆ ಮಾಡದೇ ಕ್ಯಾಬಿನ್ ಕಡೆ ಮುಖ ಮಾಡಿದೆ. ಕ್ಯಾಬಿನ್ ಕಡೆ ಬರುತ್ತಿದ್ದಂತೆ ನಮ್ಮ ಸಹ ಪ್ರಯಾಣಿಕರು ಬೀಗ ಕೆಲಸ ಮಾಡುತ್ತಿಲ್ಲ ಎಂಬ ಅಸಹಾಯಕತೆ ಪ್ರದರ್ಶಿಸಿದರು. ನಾನು ಟೂರ್ ಮ್ಯಾನೇಜರ್ ಹೇಳಿದ ಉತ್ತರವನ್ನೇ ಅವರಿಗೂ ನೀಡಿದೆ, ನಾನೂ ಒಮ್ಮೆ ಕೇಳಿ ಬರುತ್ತೇನೆ ಎಂದು ಆತ ಅವನನ್ನು ಹುಡುಕಿಕೊಂಡು ಹೋದ. 

ಸ್ವಲ್ಪ ಸಮಯದಲ್ಲಿ ಊಟ ತಯಾರಾಗಿದೆ, ಮೊದಲಿಗೆ ಮೂರು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು ಬನ್ನಿ ಎಂದು  ಕೋಣೆಯ ಸ್ಪೀಕರ್ ನಲ್ಲಿ ಘೋಷಣೆ ಮೊಳಗಿತು. ನಾಲ್ಕನೇ ಡೆಕ್ಕಿನಲ್ಲಿ ಹೆಚ್ಚು ಕೋಣೆಗಳು ಇವೆ ನಮ್ಮದು ನಾಲ್ಕನೆಯ ಡೆಕ್ ಆಗಿದ್ದರಿಂದ ನಮ್ಮ ಸರದಿಗಾಗಿ ಕಾದೆವು, ಸಲ್ಪ ಸಮಯದಲ್ಲಿ ನಾಲ್ಕನೇ ಡೆಕ್ಕಿನ ಪ್ರವಾಸಿಗರು ಊಟದ ಕೋಣೆಗೆ ಬನ್ನಿ ಎಂಬ ಕರೆಗೆ ಓಗುಟ್ಟು, ನಾವು  ಧಾವಿಸಿದಾಗ ತಿಳಿದಿದ್ದು ಮೊದಲ ಕರೆ ಬಂದಾಗಲೇ  ಒಟ್ಟಿಗೆ  ಮೂರು, ನಾಲ್ಕು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು  ಊಟದ ಕೋಣೆಗೆ ಒಟ್ಟಿಗೆ ಧಾಳಿ ಇಟ್ಟಿದ್ದರು  ಎಂಬ ಸಂಗತಿ. ಒಂದು ಕಡೆಗೆ ಸಸ್ಯ ಹಾರದ  ಊಟದ ಕೋಣೆ ಮತ್ತೊಂದು ಕಡೆಗೆ ಮಾಂಸಾಹಾರದ  ಊಟದ ಕೋಣೆಯೆಂದು ಫಲಕವಿತ್ತು, ಸಾಲಾಗಿ ಸರತಿಯಲ್ಲಿ ನಿಂತು ಬಡಿಸಿಕೊಂಡು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಣೆ ಮಾಡಿದ್ದಾಯಿತು.    

ಹಡಗು ಇನ್ನು ಬಂದರಿನಿಂದ ಹೊರಟಿರಲಿಲ್ಲ, ಹಾಗಾಗಿ ಹಡಗಿನ ಓಪನ್ ಡೆಕ್ ಕಡೆಗೆ ಒಮ್ಮೆ ಹೋಗಿಬರೋಣ ಎಂದು ಹೋದರೆ  ಸೂರ್ಯ ಉಗ್ರ ನರಸಿಂಹನ ಅವತಾರದಲ್ಲಿ ಬೆಳಗುತ್ತಿದ್ದ ಅದೇ ಸಮಯಕ್ಕೆ  ವಾಯು ನಮ್ಮನ್ನು ತಣ್ಣನೆ ಗಾಳಿಯಿಂದ ಸಂತಯಿಸುತ್ತಿದ್ದ. ಇದಾದ ಸ್ವಲ್ಪ ಸಮಯದಲ್ಲೇ ಹಡಗು ನಿಧಾನವಾಗಿ  ಸಾಗರವನ್ನು ಸೀಳಿ ದಾರಿ ಮಾಡಿಕೊಂಡು ಬಂದರನ್ನು ಬಿಟ್ಟು ಪಶ್ಚಿಮದಡೆ ಪ್ರಯಾಣವನ್ನು ಆರಂಭಿಸಿತ್ತು.  ಹಡಗಿನ ಓಪನ್ ಡೆಕ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಇದ್ದಾಗ ಪ್ರವಾಸಿಗರೆಲ್ಲ ಮನೋರಂಜನ ಕೋಣೆಗೆ ಬರಬೇಕು ಎಂದು ಅಲ್ಲಿ  ಟೂರ್ ಮ್ಯಾನೇಜರ್ ನಿಮಗಾಗಿ ಕಾಯುತ್ತಿದ್ದರೆಂದು ಹಾಗಾಗಿ ಬರಬೇಕೆಂದು ಅಪ್ಪಣೆಯಾಯಿತು. 

ಸುಮಾರು ೮೦ ರಿಂದ ೧೦೦ ಜನ ಒಟ್ಟಿಗೆ ಕೋರಬಹುದಾದ ಒಂದು ಚಿಕ್ಕ ಸಿನಿಮಾ ಮಂದಿರದ ತರಹದ ಕೋಣೆ ಅದು, ಯಾಸಿರ್  ನಗು ಮುಖದಿಂದ ಸ್ವಾಗತಿಸಿ, ಕೋಣೆ ತುಂಬುತ್ತಿದ್ದಂತೆ ಮುಂದಿನ ಪ್ರವಾಸದ ವೇಳಾಪಟ್ಟಿಯನ್ನು ಮುಂದಿಟ್ಟು ಹಾಗೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ಒಂದೊಂದು ದ್ವೀಪದ ಬಗ್ಗೆ ಮಾಹಿತಿ ನೀಡುತ್ತಿದ್ದನು..  

ಹಡಗು ಮುಳುಗಿದರೇ ಏನು ಕತೆ, ನನಗೆ ಎಪ್ಪತ್ತು ವರ್ಷ ಸ್ಕೂಬಾ  ಡೈವ್ ಮಾಡಬಹುದಾ,  ಧೂಮಪಾನ ಮತ್ತು ಸುರಪಾನ ಮಾಡಬಹುದಾ, ಹುಷಾರ್ ತಪ್ಪಿದರೇ ಏನು ಕತೆ, ನಾವು ಯಾವ ಲೈಫ್ ಜಾಕೆಟ್ ಬಳಸಬೇಕು, ರೂಮ್ಗಳಿಗೆ ಬೀಗಗಳು ಇಲ್ಲ ಕಳ್ಳತನವಾದರೇ ಯಾರು ಜವಾಬ್ದಾರಿ, ಸೀ ಸಿಕ್ನೆಸ್ ಬಂದರೆ, ಮೇಲೆ ಸ್ವಿಮಿಂಗ್ ಪೂಲ್ ಅಲ್ಲಿ ನೀರು ಯಾಕಿಲ್ಲ, ನೀರು ಖಾಲಿಯಾದರೆ ಎಲ್ಲಿ ಸಿಗುತ್ತೆ , ಮೆಡಿಸಿನ್ ಎಲ್ಲಿ ಸಿಗುತ್ತೆ ,  ಜಿಮ್ ಇದೆಯಾ?,  ಟೀವಿಲಿ ಐಪಿಎಲ್ ಬರುತ್ತಾ ಎಂದು ಕ್ರಿಕೆಟ್ ಅಭಿಮಾನಿಗಳು, ಅತ್ತ ಭಾಗ್ಯ ಲಕ್ಷ್ಮಿ ಬರುತ್ತಾ ಅಂತ ನಮ್ಮ ಮನೆಯವರು, ಹೀಗೆ  ಪ್ರಶ್ನೆಗಳು ಅವನತ್ತ ತೇಲಿ ಬರುತ್ತಿದ್ದವು ಇವಕ್ಕೆಲ್ಲ ಅನುಭವಿ ಯಾಸಿರ್ ಲೀಲಾಜಾಲವಾಗಿ ಉತ್ತರಿಸುತ್ತಾ ಪ್ರಯಾಣಿಕರ ಸಮಾವೇಶವನ್ನು  ಉದ್ದೇಶಿ ಅನುಭವವವನ್ನು ಹಂಚಿಕೊಳ್ಳುತ್ತಿದ್ದನು. ಏನಾದರು ತೊಂದರೆ ಇದ್ದರೆ ನನ್ನನ್ನು ಸಂಪರ್ಕಿಸಲು ತಿಳಿಸಿ , ಪ್ರಯಾಣ ಸುಖಮಯವಾಗಲಿ ಎಂದು ಹಾರೈಸಿ ತನ್ನ ಸಂಭಾಷಣೆಯನ್ನು ಮುಗಿಸಿದನು. 

ಯಾಸೀರನ ಸಮಾವೇಶದಲ್ಲಿದ್ದರೂ ಮನಸ್ಸು ಮಾತ್ರ ಬೀಗವಿಲ್ಲದ  ನಮ್ಮ ಕೋಣೆಯ ಕಡೆಯಿತ್ತು, ಹಾಗಾಗಿ  ಮನೋರಂಜನ ಕೋಣೆಯಿಂದ ನೇರವಾಗಿ ನಾವು ನಮ್ಮ ಕೋಣೆಗೆ ಬಂದು ಎಂದಿನಂತೆ ನಮ್ಮ ಪರಿಕರಗಳು ಸುರಕ್ಷಿತವಾಗಿವೆ ಎಂದು ಖಾತ್ರಿ ಮಾಡಿಕೊಂಡೆವು. ಆಗಲೇ ಉಪಹಾರದ  ಕೋಣೆಯಲ್ಲಿ  ಸಂಜೆಯ ಕಾಫಿ ಮತ್ತು ಚಹಾ ತಯಾರಿದೆ ಎಂಬ ಸಂದೇಶ ಬಂತು. ಒಂದು ಕಪ್ಪು ಟೀ ಹಿಡಿದು ಸೀದಾ ಹಡಗಿನ ಮೇಲಿನ ಡೆಕ್ಕ ಕಡೆಗೆ ಸೂರ್ಯಾಸ್ತ ನೋಡಲು ಹೊರಟೆವು.  ದಿನವೆಲ್ಲ ಉಗ್ರವಾಗಿ ಬೆಳಗಿದ್ದ ರವಿಯು ತಸು ದಣಿದಂತೆ ಕಂಡರೂ ಶಾಂತನಾಗಿ ಸಾಗರದ ಅಂಚಿನಲ್ಲಿ ಮರೆಯಾಗ ತೊಡಗಿದ್ದ, ಹಡಗು ರವಿಯನ್ನು ಸಂತಯಿಸಲು ಸಾಗರವನ್ನು ಸೀಳಿ ಮುನ್ನುಗುತ್ತಿತ್ತು, ಬಾನಲ್ಲಿ ಹುಣ್ಣಿಮೆಯ ಚಂದ್ರ ಅದಾಗಲೇ ಮೂಡಿದ್ದ ಜೊತೆಗೆ ಒಂದಿಷ್ಟು ಬೆಳ್ಳಿ ಚುಕ್ಕೆಗಳನ್ನು ಕರೆ ತಂದಿದ್ದ, ದಿನವೆಲ್ಲ ಶಾಂತವಾಗಿದ್ದ ಸಾಗರವು ಪೂರ್ಣ ಶಶಾಂಕನ  ಕಂಡೊಡನೇ  ಸಂತೋಷ ತಡೆಯಲಾಗದೇ ಉಬ್ಬರಿಸಿ ಅಬ್ಬರಿಸ ತೊಡಗಿದ, ವಾಯುವು ಸಹ ತನ್ನ ಶಕ್ತಿಯನ್ನು ಕ್ಷಣಕ್ಷಣಕ್ಕೂ ವೃದ್ಧಿಸಿಕೊಳ್ಳುತ್ತಿದ್ದ ಹಾಗಾಗಿ ಬೀಸುವ ಗಾಳಿಗೆ ಎಲ್ಲಿ ನಾವು ಸಮುದ್ರ ಪಾಲಾದೆವೋ ಎಂದು ನಿಧಾವಾಗಿ ಕ್ಯಾಬಿನ್ ಕಡೆಗೆ ವಿಶ್ರಮಿಸಲು ಹೊರಟೆವು. 

ಅದಾಗಲೇ  ಸುಮಾರು ಹೊತ್ತಾಗಿತ್ತು ‘ಊಟ ತಯಾರಿದೆ’ ಎಂಬ ಸಂದೇಶವು ಸ್ಪೀಕರ್ ಮೂಲಕ ಬಂತು, ಊಟ ಮುಗಿಸಿ , ಮತ್ತೊಂದು  ಬಾರಿ ಹಡಗಿನ ಓಪನ್ ಡೆಕ್ ಅಲ್ಲಿ ವಾಯು ವಿಹಾರ ಮಾಡಿ, ವಾಪಾಸ್ ಕೋಣೆಗೆ ಹಿಂತಿರುಗಿದೇವು. ನಾಳೆ  ಭೇಟಿ ನೀಡಲಿರುವ  ದ್ವೀಪಕ್ಕೆ ಅಗತ್ಯವಿರುವ  ವಸ್ತುಗಳನ್ನು ಒಂದು ಚೀಲಕ್ಕೆ ಹಾಕಿ, ರೂಮಿನ ಚೀಲಕ ಜಡಿದು ಹಾಸಿಗೆ ಮೇಲೆ ಮಲಗುತ್ತಿದ್ದಂತೆ, ನಾಳೆಯ ಮಿನಿ ಕಾಯ್ ದ್ವೀಪದ ಚಿತ್ರಗಳು ಒಂದೆಡೆ , ಇತ್ತ ಕಡೆ ಬೀಗವಿಲ್ಲದೇ ಪರಿಕರಗಳು ಸುರಕ್ಷಿತವೇ ಎಂಬ ವಾದಗಳು ಮನದಲ್ಲಿ ಮೂಡುತ್ತಿದ್ದಂತೆ ನಿದ್ರಾದೇವಿಯ ಪರವಶವಾದೆವು….

ಮುಂದಿನ ವಾರ : ದೋಣಿ ಸಾಗಲಿ ಮುಂದೆ ಹೋಗಲಿ ದೂರ  ದ್ವೀಪವ ಸೇರಲಿ…