Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. ೮

ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕ್ಷಣದಿಂದ ನಾವು ಪ್ರಕೃತಿ ಮಾತೆಗೆ ಸಂಪೂರ್ಣ ಶರಣಾಗಿದ್ದೆವು, ಆದರೆ ಮಿನಿಕಾಯ್ ದ್ವೀಪದ ಪ್ರಕೃತಿಯಲ್ಲಿನ ಮಾನವರ ಬಗ್ಗೆ ಹಿಂದಿನ ಇತಿಹಾಸ ಕೇಳಿ ತಸು ಬೆಚ್ಚಿಬಿದ್ದಿದೆವು. ಮಿನಿಕ ರಜ್ಜೆ ಬಗ್ಗೆ ತಿಳಿದು ಕೊಳ್ಳಲು ಅವರ ನಿವಾಸಗಳಿಗೆ ಭೇಟಿ ಅವರ ಜೀವನ ಶೈಲಿ ಆಚಾರ ವಿಚಾರಗಳ ಬಗ್ಗೆ ಮಾಹಿತಿ ತಿಳಿಯುವ  ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಹಾಗಾಗಿ  ಮಿನಿಕಾಯ್ ದ್ವೀಪದ ಪ್ರಮುಖ ಹಳ್ಳಿಯಾದ ಫಾಲೆಸ್ಸೆರಿಗೆ ಭೇಟಿಯ ಸಲುವಾಗಿ ಹೊರಟೆವು. 

ಮಿನಿಕಾಯ್ ದ್ವೀಪದಲ್ಲಿ ಸುಮಾರು ಹತ್ತು ಹಳ್ಳಿಗಳಿವೆ , ಅವುಗಳು  ಬಡ , ಆಗುಮಾಗು , ಬೋಡುತೀರಿ , ಸೆಡಿವಲು , ಅಲೋಡಿ , ಫನ್ ಹಿಲಾಲ್ , ಕುದೇಹಿ, ಫಾಲೆಸ್ಸೆರಿ  ಮತ್ತು ಕೇಂಡಿಪಾರ್ಟಿ.  ಮಿನಿಕಾಯ್  ದ್ವೀಪದ ಬೌಗೋಳಿಕವಾಗಿ  ಲಕ್ಷದ್ವೀಪಕ್ಕೆ ಸೇರಿದ್ದರೂ ಸಾಂಸ್ಕೃತಿಕವಾಗಿ, ಆಚಾರ ವಿಚಾರಗಳಲ್ಲಿ ಲಕ್ಷದ್ವೀಪದಿಂದ ಸಂಪೂರ್ಣವಾಗಿ ಬೇರ್ಪಟ್ಟು  ಮಾಲ್ಡಿವ್  ದ್ವೀಪವನ್ನು ಅನುಸರಿಸುತ್ತದೆ.  ೧೯೪೭ರಲ್ಲಿ  ಭಾರತ ಸ್ವತಂತ್ರವಾದ ನಂತರ ಮಿನಿಕಾಯ್ ದ್ವೀಪ ಮಾಲ್ಡಿವ್  ದ್ವೀಪ ಬ್ರಿಟೀಷರ ಅಧೀನದಲ್ಲಿತ್ತು, ನಂತರ ೧೯೫೬ ಭಾರತಕ್ಕೆ ಹಸ್ತಾಂತರವಾಯಿತು ಆದರೂ ಮಾಲ್ಡಿವ್  ಸ್ವತಂತ್ರ ಪಡೆದ ನಂತರ ೧೯೭೬ ರಲ್ಲಿ ಮಿನಿಕಾಯ್ ಹಾಗು ಮಾಲ್ಡಿವ್ ಗಡಿಯನ್ನು ಗುರುತಿಸಿ ಮಾನ್ಯ ಮಾಡಿತು ಹಾಗಾಗಿ ಇಂದಿನವರೆಗೂ ಮಿನಿಕಾಯ್ ಮತ್ತು ಮಾಲ್ಡಿವ್ ಸಾಂಸ್ಕೃತಿಕವಾಗಿ  ಸಹೋದರರಿದ್ದಂತೆ. 

ಇಲ್ಲಿನ ಪ್ರತಿಯೊಂದು ಹಳ್ಳಿಯನ್ನು ‘ಅವ’ ಎಂದು ಕರೆಯುತ್ತಾರೆ, ಇಲ್ಲಿನ ಹಳ್ಳಿಗಳ ಆಡಳಿತ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿದೆ. ನಮ್ಮಲ್ಲಿ ಪ್ರತಿಯೊಂದು ಗ್ರಾಮಕ್ಕೂ ಪಂಚಾಯಿತಿ ಇದ್ದಂಗೆ ಇಲ್ಲಿ ಆವ ವ್ಯವಸ್ಥೆಯಿದ್ದಂತೆ. ಪ್ರತಿಯೊಂದು ಹಳ್ಳಿಗೂ ಮುಖಂಡನು ಒಬ್ಬ ಇರುತ್ತಾನೆ , ಅವನನ್ನು ಮೊಪೇನ್ ಎಂದು ಕರೆಯುತ್ತಾರೆ , ಗ್ರಾಮದ ಜನತೆಯು ತಮ್ಮ ಜೊತೆಗಿರುವ ಅತ್ಯಂತ ಸಮರ್ಥವಾಗಿರುವವನ್ನು  ಮೊಪೇನ್ ಎಂದು  ತಾವೇ ಆರಿಸುತ್ತಾರೆ.  ಸಂಪೂರ್ಣ ಹಳ್ಳಿಯ ಜವಾಬ್ದಾರಿಯನ್ನು ಮೊಪೇನ್ ಕೈಗೆ ನೀಡುತ್ತಾರೆ, ಮೊಪೇನ್ ಸಹಾಯಕ್ಕೆ ಮತ್ತೆ ಮೂವರನ್ನು ನೇಮಿಸುತ್ತಾರೆ. 

ನಾವು ಫಾಲೆಸ್ಸೆರಿಗೆ ಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮೋಪತಿ(ಮಹಿಳಾ ಮುಖಂಡೆ) ನಮಗೆ ಸ್ವಾಗತಿಸಿ ತಮ್ಮ ಹಳ್ಳಿ ಮನೆ ಬಗ್ಗೆ ವಿವರ ನೀಡಿ ತಮ್ಮ ಸ್ಪರ್ಧಾ ದೋಣಿಯನ್ನು ತೋರಿಸಿ ತಮ್ಮ ಸಂಸ್ಕೃತಿ ಹಾಗು ಆಚಾರ ವಿಚಾರಗಳನ್ನು ತಿಳಿಸಿ ಕೊಟ್ಟು ತಮ್ಮ ಜವಾಬ್ದಾರಿಯ ಬಗ್ಗೆ ತಿಳಿಸಿದಾಗ ನಮ್ಮೊಡನೆ ಬಂದಿದ್ದ ಪ್ರವಾಸಿಗರು ಮೊಪತಿಯ ಬಗ್ಗೆ ಅಭಿಮಾನ ತೋರಿಸಿ ನೀವು ಅತ್ಯಂತ ಧೈರ್ಯ ಶಾಲಿ ಹೆಣ್ಣು ಹೀಗೆಯೇ ಮುಂದುವರೆಯಿರಿ ಎಂದು ಆಶಿಸಿದರು. 

ನಿಮಗೂ ಒಂದು ಅನುಮಾನ ಬರಬಹುದು ಮೊಪೇನ್ ಮತ್ತು ಮೊಪೇನ್  ಗಂಡ ಹೆಂಡ್ತಿಯರಾ ಅಂತ, ಆ ಹುದ್ದೆಯನ್ನು ಸಂಭಾಳಿಸಲು ಯಾರು ಬೇಕಾದರೂ ಅರ್ಹರು ಹಾಗಾಗಿ ಇಬ್ಬರೂ ಗಂಡ ಹೆಂಡತಿ ಆಗಿರಬೇಕಿಲ್ಲ.  ಮೋಪತಿಯ  ಹತ್ತಿರ ಸಂಭಾಷಣೆ ನಡೆಯುವಾಗ ಅಲ್ಲಿನ ಮೊಪೇನ್ ಆಗಲಿ ದ್ವೀಪದ ಗಂಡಸರಾರು ಕಣ್ಣಿಗೆ ಬೀಳಲಿಲ್ಲ ನಮಗೆ  ಹಳ್ಳಿಗೆ ಸ್ವಾಗತ ಕೋರಿದಾಗಿನಂದಲೂ ಚಹಾ ಕುಡಿದು ಹಡಗಿಗೆ ಹೋರಡುವ ಸಮಯ ಸಮೀಪಿಸುತ್ತಿದ್ದರೂ ಸುತ್ತಲೂ  ಅಲ್ಲಿ ದ್ವೀಪದ ಒಬ್ಬರೋ ಇಬ್ಬರೂ ಗಂಡಸರೂ ಬಿಟ್ಟರೆ ಬೇರಾರೂ ಕಾಣಲಿಲ್ಲ.  

ಈ ಹಳ್ಳಿ ಮನೆಯು ಊರಿನಲ್ಲಿರುವ ಎಲ್ಲರೂ ಒಂದು ಕಡೆ ಸಭೆ ಸೇರುವ ಸ್ಥಳ ಹಾಗಾಗಿ ನಮಗೆ ಇಲ್ಲಿಯೇ  ಸಂಜೆಯ ಚಹಾ ಕೂಟಕ್ಕೆ ವ್ಯವಸ್ಥೆ ಮಾಡಿದ್ದರು. ಹಳ್ಳಿಯ ಮನೆಯಲ್ಲಿ ಕೆಲವು ಇತಿಹಾಸದ ಬಗೆಗಿನ ಮಾಹಿತಿಯ ಚಿತ್ರಪಟಗಳು, ದ್ವೀಪಕ್ಕಾಗಿ ದುಡಿದ ಹಿರಿಯರ ಭಾವಚಿತ್ರಗಳು ಅಲ್ಲದೇ ಆ ದ್ವೀಪದಲ್ಲಿ ನಡೆಯುವ ವಾರ್ಷಿಕ ದೋಣಿ ಸ್ಪರ್ಧೆಯಲ್ಲಿ ಬಳಸುವ ದೋಣಿಯನ್ನು ಸಿಂಗರಿಸಿ ಇಡಲಾಗಿತ್ತು. ಇಲ್ಲಿನ ಬಹುತೇಕರು ಇಸ್ಲಾಂ ಜನಾಂಗದವರು, ಆದರೂ ಕ್ರಿಸ್ತಶಕ ೧೫೦೦ಕ್ಕೂ ಹಿಂದೆಯೇ ಮಾನವನ ಆಳ್ವಿಕೆಗೆ ಈ ದ್ವೀಪ ಒಳಪಟ್ಟಿತ್ತು, ಶತ ಶತಮಾನಗಳಿಂದ ಮುಸ್ಲಿಂ ಜನಾಂಗದವರು ನೆಲೆಸಿದ್ದರೂ ಇಲ್ಲಿನ ಮೂಲ ಜನಾಂಗ ಯಾವುದು ಎಂದು ಗುರುತಿಸುವುದು ತಸು ಕಷ್ಟ. ಆದರೆ ಬಹುತೇಕ ದ್ವೀಪವಾಸಿಗಳು ಸ್ನೇಹಪ್ರಿಯರು ಮತ್ತು ಭಾರತವನ್ನು ತಮ್ಮ ಮಾತೃ ದೇಶ ಎಂದು ಒಪ್ಪಿರುವುದು ಎಂಬುದು ಮಾತ್ರ ಸತ್ಯ .                                                                                                                                                                       

ಇಲ್ಲಿ ಹಳ್ಳಿಗಳ ಗಡಿ ಇಲ್ಲವೇ ಇಲ್ಲ ಎಲ್ಲವೂ ಒಂದೇ ರೀತಿಯೆಂದು ಭಾಸವಾಗುತ್ತದೆ  ಬಹುಶ ಮನೆಗಳೇ ಗಡಿಗಳಾಗಿವೆ . ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿ ಸಂಪರ್ಕಿಸಲು ಇರುವ ರಸ್ತೆಗಳೆಲ್ಲ ಹಾವು ಹರಿದಂತೆ ಕಾಣುವ ಸಿಮೆಂಟಿನ ರಸ್ತೆಗಳು, ಈ ರಸ್ತೆಗಳಲ್ಲಿ ರಾಜ ರೋಷವಾಗಿ ಓಡಾಡುವ ಮೋಟಾರು ವಾಹನಗಳು, ರಸ್ತೆ  ಬದಿಯಲ್ಲಿ ಪ್ರಯಾಣಿಕನಿಗೆ ಪ್ರಾಮಾಣಿಕವಾಗಿ ನೆರಳು ನೀಡುವ ಕಲ್ಪ ಋಕ್ಷಗಳು , ಅವಿರತವಾಗಿ ಆಹಾರ ಹುಡುಕುವ ಕುಕ್ಕುಟಗಳು , ಅತಿಥಿಗಳನ್ನು ಮನೆಗೆ ಆಹ್ವಾನಿಸುವ ವಾಯಸಗಳು ಸರ್ವೇ ಸಾಮಾನ್ಯ. ಅದರಲ್ಲೂ ಕುಕ್ಕುಟವೊಂದು ನಮ್ಮ ವಾಹನದ ಜೊತೆ ಪೈಪೋಟಿಗೆ ಬಿದ್ದಂತೆ ಓಡುತ್ತಲೇ  ವಿಮಾನ ರನ್ ವೆಯಿಂದ ಹೇಗೆ ಹಾರುತ್ತದೆಯೂ ಹಾಗೆ ಹಾರಿ ನಮ್ಮ ವಾಹನದ ಎಡದಿಂದ ಬಲಕ್ಕೆ ಹಾರಿ ಅಲ್ಲೇ ಇದ್ದ ಗಿಡದ ಮೇಲೆ ಕುಳಿತ ದೃಶ್ಯ ಮಾತ್ರ ಕಣ್ಣಿಗೆ ಅಚ್ಚಳಿಯದೆ ಉಳಿದು ಹುಬ್ಬೇರಿಸುವಂತೆ ಮಾಡಿತು . 

ಇಲ್ಲಿನ ವಿಶೇಷ ಎಂದರೆ ವರ್ಷಕ್ಕೊಮ್ಮೆ ನವೆಂಬರ್ ಇಲ್ಲವೇ ಡಿಸೇಂಬರ್ ತಿಂಗಳಲ್ಲಿ ನಡೆಯುವ ‘ ನ್ಯಾಷನಲ್ ಮಿನಿಕಾಯ್ ಫೆಸ್ಟ್ ‘ . ಮಿನಿಕಾಯ್  ದ್ವೀಪದ ಸಂಸ್ಕೃತಿ ಹಾಗು ಆಚರಣೆಗಳ ಮಹಾಮೇಳದಲ್ಲಿ ದ್ವೀಪದ ಹತ್ತು ಹಳ್ಳಿಗಳು ಭಾಗಿಯಾಗುತ್ತವೆ. ಒಂದೊಂದು ಹಳ್ಳಿಗೂ ತಮ್ಮದೇ ಅದೇ ಜಲ ದೋಣಿ ಇರುತ್ತದೆ. ಈ ದೋಣಿ ಸ್ಪರ್ಧೆಯ ವೀಕ್ಷಣೆಗೆ  ರಾಷ್ಟ್ರೀಯ ಹಾಗು ಅನಂತರ ರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ದೋಣಿ ಸ್ಪರ್ಧೆಯಲ್ಲಿ ಗೆದ್ದ ಹಳ್ಳಿಯು ಉಳಿದ  ಹಳ್ಳಿಗೂ  ಔತಣಕೂಟ ಏರ್ಪಡಿಸುತ್ತಾರೆ. ಹಾಗಾಗಿ ಇಲ್ಲಿ ಎಲ್ಲವರು ನಮ್ಮವರೇ… 

ಈ ಎಲ್ಲಾ ಮಾಹಿತಿ ಪಡೆಯುತ್ತಿದ್ದಾಗಲೇ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗಲು ಆತುರನಾಗಿದ್ದ, ಇದಲ್ಲದೇ ನಮ್ಮ ರಾತ್ರಿಯ ನೆಲೆಯು ಮತ್ತೆ ಹಡಗಿನಲ್ಲೇ ಆಗಿದ್ದರಿಂದ ಮತ್ತೆ ನೀರಿನಲ್ಲಿಸುಮಾರು  ಅರ್ಧ ಗಂಟೆಯ ಜಲ ಪ್ರಯಾಣ  ಹಾಗಾಗಿ ಟೂರ್ ಮ್ಯಾನೇಜರ್ ಎಲ್ಲರೂ ಹೊರಡೋಣ ಜೆಟ್ಟಿಗೆ ಹೋಗಲು ವಾಹನ ತಯಾರಿದೆ ಎಂದು ಆದೇಶವಿತ್ತ. ಮೊದಲ ದಿನ ತಸು ತ್ರಾಸದಾಯಕವಾಗಿತ್ತಾದಾರು ಒಮ್ಮೆ ಸಂಪೂರ್ಣ ದ್ವೀಪವನ್ನು ಸಂದರ್ಶಿಸಿ ಹೊರಟಿದ್ದರೆ  ಇನ್ನು ಚೆನ್ನಾಗಿ ಇರುತ್ತಿತ್ತು ಎಂದು ಭಾರವಾದ ಮನಸಿನ್ನಿದ  ಮಿನಿಕಾಯ್ ಮಾಯೆಗೆ  ವಿದಾಯ ಹೇಳುತ್ತಲೇ ಜೆಟ್ಟಿ ಕಡೆಗೆ ಹೊರಟೆವು. 

Leave a comment