Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೭

ಲೈಟ್ ಹೌಸ್ ಮೇಲೆ ಇದ್ದಾಗ ಸಮುದ್ರದ ಮೇಲಿನ ಗಾಳಿ ಬಿಸುತ್ತಿದ್ದರಿಂದ ಆಯಾಸವೆಲ್ಲ ಹೋಗಿ ಹೊಸ ಚೈತನ್ಯ ಬಂದಿತ್ತು ಆದರೆ  ಲೈಟ್ ಹೌಸ್ ನಿಂದ  ಇಳಿದು  ಹೊರಗೆ ಬರುವ ಹೊತ್ತಿಗಾಗಲೇ  ರವಿಯು  ಉಗ್ರಪ್ರತಾಪನಾಗಿದ್ದ , ಮೈಯಲ್ಲಿ ಗಂಗೆಯ ಪ್ರವಾಹ ಅಲ್ಲಲ್ಲಿ ಸಣ್ಣ ಝರಿಯ ರೂಪದಲ್ಲಿ ಜಲಪಾತಗಳನ್ನು ಸೃಷ್ಟಿಸಿದ್ದಳು,  ಗಂಗೆಯನ್ನು ಸಾಗರಕ್ಕೆ ಲೀನಾ ಮಾಡುವ ಭಗೀರಥ ಪ್ರಯತ್ನ  ಮಾಡಿ  ನಮ್ಮ ದೇಹದ ತಾಪ ಕಡಿಮೆ ಮಾಡಿಕೊಳ್ಳುವ  ಅವಶ್ಯಕತೆಯಿತ್ತು , ಹಾಗಾಗಿ  ನಾವು ತುಂಡಿ ಬೀಚ್ ಗೆ ಯಾವಾಗ ತಲುಪುತ್ತೇವೋ ಎಂದು ಕಾಯುತ್ತಿದ್ದೇವು. 

ನಮ್ಮನ್ನು ಹೊತ್ತ ವಾಹನ ತೆಂಗಿನ ಮರಗಳ ಸಾಲ ನೆರಳಲ್ಲಿ ತುಂಡಿ ಬೀಚ್ ಕಡೆಗೆ  ಹೊರಟಿತ್ತು, ಮಿನಿಕಾಯ್ ದ್ವೀಪದಲ್ಲಿ  ಹಲವಾರು ಬೀಚ್ ಗಳಿವೆ, ಅವುಗಳಲ್ಲಿ ತುಂಡಿ ಬೀಚ್ ಪ್ರಸಿದ್ಧವಾದದು, ಈ ಬೀಚ್ ಇತ್ತೀಚೆಗೆ  ಅಂತರ ರಾಷ್ಟ್ರೀಯ  ನೀಲಿ ಧ್ವಜ ಟ್ಯಾಗ್ ಮಾನ್ಯತೆ ಪಡೆದಿದೆ. ಒಂದು ಸಮುದ್ರ ಕಿನಾರೆಯನ್ನು ನೀಲಿ ಧ್ವಜ ಟ್ಯಾಗ್ ಬೀಚ್ ಪ್ರಮಾಣಕರಿಸಿದ್ದಾರೆ  ಅಂದರೆ ಆ  ಸಮುದ್ರ ಕಿನಾರೆಯು  ವಿಶ್ವದ ಅತ್ಯಂತ ಸ್ವಚ್ಛ ಹಾಗು ಪರಿಸರ ಸ್ನೇಹಿ ಕಿನಾರೆಯೆಂದು. 

ಬ್ಲೂ ಫ್ಲಾಗ್ ಪ್ರೋಗ್ರಾಂ ಅನ್ನು ಕೋಪನ್ ಹ್ಯಾಗನ್, ಡೆನ್ಮಾರ್ಕ್-ಪ್ರಧಾನ ಕಛೇರಿಯ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ನಡೆಸುತ್ತದೆ. ನೀಲಿ ಧ್ವಜಕ್ಕೆ ಅರ್ಹತೆ ಪಡೆಯಲು, ಕಠಿಣ ಪರಿಸರ, ಶೈಕ್ಷಣಿಕ, ಸುರಕ್ಷತೆ ಮತ್ತು ಪ್ರವೇಶದ ಮಾನದಂಡಗಳ ಸರಣಿಯನ್ನು ಪೂರೈಸಬೇಕು ಮತ್ತು ನಿರ್ವಹಿಸಬೇಕು. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸಮುದ್ರ ತೀರಗಳಿದ್ದರು ಕೇವಲ ೧೩ ಕಿನಾರೆಗಳು ಮಾತ್ರ ಬ್ಲೂ ಫ್ಲಾಗ್ ಕಿನಾರೆಯೆಂದು ಮಾನ್ಯತೆ ಪಡೆದಿವೆ. ಒರಿಸ್ಸಾದ  ಕೋನಾರ್ಕ್ ಕರಾವಳಿಯಲ್ಲಿರುವ ಚಂದ್ರಭಾಗ ಕಡಲತೀರವು ನೀಲಿ ಧ್ವಜ ಪ್ರಮಾಣೀಕರಣವನ್ನು ಪಡೆದ ಭಾರತದ ಹಾಗು ಏಷ್ಯಾ ಖಂಡದ ಮೊದಲ ಕಡಲ ಕಿನಾರೆಯಾಗಿದೆ. 

ನಾವು ಸಮುದ್ರ ತೀರಕ್ಕೆ ಬರುವ ಹೊತ್ತಿಗಾಗಲೇ ನಮ್ಮ ಜೊತೆಯಲ್ಲಿ ಬಂದಿದ್ದ ಪ್ರವಾಸಿಗರು ಅದರಲ್ಲೂ ೭೦ರ ತರುಣ ತರುಣಿಯರು ಸಮುದ್ರದ  ಆಳ ಅಳೆಯಲು  ಸುಮಾರು ಅರ್ಧ ಕಿಲೋಮೀಟರು ನಡೆಯುತ್ತಾ ಮುಂದೆ ಸಾಗಿದ್ದರು.  ನಾವು ನೀರಿಗಿಳಿದಾಗಲೇ ಗೊತ್ತಾಗಿದ್ದು ಇಲ್ಲಿ ಪಾಪಿ ಸಮುದ್ರ ಹೊಕ್ಕರು ಮೊಣಕಾಲು ನೀರು ಎನ್ನುವ ಗಾದೆ ಇಲ್ಲಿ ಶುದ್ಧ ಸುಳ್ಳು ಅಂತ , ನೀವು  ನೀರಿನಲ್ಲಿ ಸುಮಾರು ೨ ಕಿಲೋಮೀಟರು ನಡೆದರೂ ಸಹ ಸಮುದ್ರದ ಸ್ಪಟಿಕದಷ್ಟು ಶುಭ್ರವಾದ ತಳ ಸ್ಪಷ್ಟವಾಗಿ ನಿಮಗೆ ಕಾಣುತ್ತಲೇ ಇರುತ್ತದೆ. ಅಬ್ಬಬಾ ಎಂದರೆ ನಮ್ಮ ದೇಹದ ಮುಖ ಭಾಗದ ವರೆಗೂ ನೀರು ಬರುತ್ತದೆ, ಹಾಗಂತ ಬಹಳ ದೂರದ ವರೆಗೂ ನಡೆಯುವುದಕ್ಕೆ ಆಗುವುದಿಲ್ಲ. ಪ್ರಕೃತಿಯ ಈ  ಅದ್ಭುತ ರಚನೆಯ ಹಿನ್ನಲೆ ತಿಳಿಯಬೇಕಾದ ಅವಶ್ಯಕತೆಯಿದೆ. 

ನಾವೆಲ್ಲ ಭೂಮಿಯ ಮೇಲೆ ಲಾವಾ ರಸವನ್ನು ಉಗಿಯುವ ಅಗ್ನಿಪರ್ವತಗಳ ಬಗ್ಗೆ ತಿಳಿದಿದ್ದೇವೆ ಹಾಗೆಯೇ ಸಮುದ್ರ ಒಳಗೂ ಸಹ ಇದೆ ರೀತಿಯ ಲಾವಾರಸವನ್ನು ಉಗುಳುವ  ಹಲವಾರು ಅಗ್ನಿಪರ್ವತಗಳಿವೆ, ಈ ಅಗ್ನಿಪರ್ವತಗಳು ಹೊಸ ದ್ವೀಪ ಇಲ್ಲವೇ ಹೊಸ ಭೂಭಾಗದ ರಚನೆಗೆ ಕಾರಣವಾಗುತ್ತವೆ.  ಸಮುದ್ರದ ಒಳಗಿನ ಅಗ್ನಿ ಪರ್ವತಗಳನ್ನು ನಾವು ಸೀ ಮೌಂಟ್ ಎನ್ನುತ್ತೇವೆ ,  ಮೊದಲ ಹಂತದಲ್ಲಿ ಸಮುದ್ರ ಒಳಗಿನಿಂದ ಲಾವಾರಸ ಸತತವಾಗಿ ಉಕ್ಕಿದಾಗ ಸಮುದ್ರದ ಮೇಲ್ಬಾಗವನ್ನು ತಲುಪುತ್ತದೆ,  ಅದು ಲಾವಾವನ್ನು ಇನ್ನೂ ಉಕ್ಕುತ್ತಿದ್ದರೆ..  ಸೀ ಮೌಂಟ್ ಇನ್ನು ಎತ್ತರಕ್ಕೆ ಬೆಳೆಯುತ್ತಲೇ ಹೋಗುತ್ತದೆ, ಮುಂದೆ ಇದೆ ಒಂದು ದ್ವೀಪವಾಗುತ್ತದೆ. ದ್ವೀಪದ ಸುತ್ತಲೂ  ಜಲಚರಗಳ  ಬೆಳವಣಿಗೆಯಾಗುತ್ತದೆ, ನಂತರ ಕೊರಲ್ ಬಂಡೆಗಳು ಸೃಷ್ಟಿಯಾಗುತ್ತದೆ. ಮುಂದೆ ಈ ಭೂಮಿಯ ಮೇಲೆ ಸೃಷ್ಟಿಯಾದ ಅಗ್ನಿಪರ್ವತ  ಸಾಗರದ ಅಲೆಗಳು ಮತ್ತು ಪರಿಸರದಲ್ಲಿ ಆಗುವ ಬದಲಾವಣೆಗಳಿಂದ ನಿಧಾನವಾಗಿ ನೀರಿನಲ್ಲಿ ನೀರಿನಲ್ಲಿ ಕರಗುತ್ತಾ ನೀರಿನ ಒಳಗೆ ಆಳವಿಲ್ಲದ ಸಮತಟ್ಟಾದ ಜಾಗ ರಚನೆಯಾಗುತ್ತದೆ , ಸುತ್ತಲೂ ಇರುವ ಕೊರಲ್ ಬಂಡೆಗಳ ಸುತ್ತಲೂ ಬಟ್ಟಲಿನ ಆಕಾರದ  ಸಣ್ಣ ಕೆರೆಯ ರಚನೆ ಸೃಷ್ಟಿಯಾಗುತ್ತದೆ ಇದನ್ನೇ ನಾವು ಲಗೊನ್ ಎನ್ನುತ್ತೇವೆ, ಈಗ ನಾವು ನಿರ್ಭಯವಾಗಿ ಓಡಾಡುತ್ತಿದ್ದದು ಇದೆ ಮಿನಿಕಾಯ್ ಲಗೊನ್ ನಲ್ಲಿ.  ಸುತ್ತಲೂ ಇರುವ ಹವಳ ಬಂಡೆಗಳು ಈ ಲಾಗೊನ್ ಅನ್ನು ಸಮುದ್ರದಲ್ಲಿ ಆಗುವ ವೈಪರೀತ್ಯಗಳಿಂದ ದ್ವೀಪವನ್ನು ರಕ್ಷಿಸುತ್ತವೆ. 

ಈ ಸಂಪೂರ್ಣ ರಚನೆಯನ್ನು ಲೈಟ್ ಮೇಲೆ ನಿಂತಾಗ ಕಾಣ ಸಿಗುತ್ತದೆ, ಎಲ್ಲಿ ರಿಫ್ ಇರುತ್ತದೆ ಅದು ಸಮುದ್ರದ ಅಲೆಗಳ ತೀವ್ರತೆಯನ್ನು ನಿಷ್ಕ್ರಿಯಗೊಳಿಸಿ ಸಣ್ಣ ಕೆರೆಯಲ್ಲಿ ಯಾವ ರೀತಿಯ ಅಲೆಗಳು ಇರುತ್ತದೋ ಆ ಸ್ಥಿತಿಗೆ ತರುತ್ತದೆ. 

ಹಾಗಾಗಿ ಈ ಮಿನಿಕಾಯ್ ಲಗೊನ್ ಸಂಪೂರ್ಣ ಸೇಫ್ ಅಂತ ಹೇಳ ಬಹುದು,  ಹಾಗಾಗಿ ಸ್ನೋರ್ಕೆಲ್ಲಿಂಗ್ , ಕಯಾಕಿಂಗ್ , ಸ್ಕೂಬಾ , ಜೆಟ್ ರೈಡ್  ಯಾವುದೇ ಭಯವಿಲ್ಲದೆ ಮಾಡಬಹುದು. ಬ್ಲೂ ಫ್ಲಾಗ್ ಪಡೆದ ಕಿನಾರೆಯಾಗಿದ್ದರಿಂದ ಸಹಜವಾಗಿಯೇ ಅತ್ಯಂತ ಶುಚಿಯಾಗಿ , ಪರಿಸರ ಸ್ನೇಹಿಯಾಗಿತ್ತು, ಕಿನಾರೆಯೂ ಸಹ ಸ್ಪಟಿಕದಷ್ಟು ಶುದ್ಧವಾದ ಮರಳಿನಿಂದ ಆವೃತವಾಗಿದೆ, ತುಂಡಿ ಬೀಚ್ ಅಲ್ಲಿ ಬೀಚ್ ರೆಸಾರ್ಟ್ ಇದ್ದು ಇಲ್ಲಿಯೇ ನಮಗೆ ಮಧ್ಯಾಹ್ನದ ಊಟದ ವ್ಯವಸ್ಥೆಯಾಗಿತ್ತು, ಸ್ವಲ್ಪ ಸಮಯ ಮಗ, ಮಡದಿಯ ಜೊತೆ ಫ್ಯಾಮಿಲಿ ಕಯಾಕಿಂಗ್ ಮಾಡಿ ಸಾಗರವನ್ನು ಅಳವನ್ನು ಅಳೆದು  ಬಂದೆವು.  ನೀರಲ್ಲಿ ಬಿದ್ದರೆ ಮೇಲೇಳಲು ಮನಸ್ಸು ಆಗುವುದಿಲ್ಲ ಹಾಗಾಗಿ ಸಮಯ ಕಳೆದದ್ದು ಗೊತ್ತು ಆಗುವುದಿಲ್ಲ.  ಟೂರ್ ಮ್ಯಾನೇಜರ್ ಫಾಲ್ಲಸರಿ ಹಳ್ಳಿಗೆ ನಾವು ಭೇಟಿ ನೀಡಬೇಕು ಹಾಗಾಗಿ ನಾವೆಲ್ಲ ಹೋರಡಬೇಕು ಎಂದು ತಿಳಿಸಿದ್ದರಿಂದ ನಾವು ಒಲ್ಲದ ಮನಸಿನ್ನಿಂದ ನೀರಿನಿಂದ ಮೇಲೆದ್ದು ಹಳ್ಳಿಯ ಭೇಟಿಗೆ ಅಣಿಯಾದೆವು.