Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೩ – ಉಲಕಮುತ್ತು – ಬೊಂಬಿನ ತಾಳಕ್ಕೆ ನಲಿದಂತೆ!!!

ನಾವು ಸ್ಕೂಬಾಗೆ ಹೋಗ ಬಂದ್ಮೇಲೆ ಸುಮ್ಮನೆ ದೋಣಿ ಹತ್ತ್ಕೊಂಡು ಜನ ಹೋಗುತ್ತಾನೆ ಇದ್ದರೂ ಆ ಕಡೆಯಿಂದ ಸ್ಕೂಬಾ ಮುಗಿಸಿ ಕೊಂಡು ಬಂದವರು ಯಾರು ಇರಲಿಲ್ಲ. ಹಾಗಾಗಿ ಜಾನಪದ ಕಾರ್ಯಕ್ರಮ ಒಂದು ಗಂಟೆ ಮುಂದೊಡಿದ್ದರು. ಕಡೆಗೆ ಸ್ಕೂಬಾಗೆ ಹೋದ ೬೦ರ ಮರಳಿ ಅರಳಿದವರು  ನೀರಿಗಿಳಿದ ಮೇಲೆ ಸಮಸ್ಯೆ ಎದುರಿಸಿ ಅದನ್ನು ಸ್ಕೂಬಾ ತರಬೇತುದಾರರು ಬಗೆಹರಿಸುವುದರಲ್ಲೇ ಹರಸಾಹಸ ಪಟ್ಟು ಸಮಯ ಕಳೆದಿದ್ದರು. ಅವರಲ್ಲಿ ಕೆಲವರ ಸಮಸ್ಯೆ ಬಗೆ ಹರಿದು ಡೈವ್ ಮಾಡಿದರೆ ಮತ್ತೆ ಕೆಲವರ ಸಮಯಹರಣವಾಗಿ ಉಳಿದ ಡೈವಿಂಗ್ ಆಕಾಂಕ್ಷಿಗಳಿಗೆ ಪಿತ್ತ ನೆತ್ತಿಗೇರಿತ್ತು. ಅತ್ತ ಸೂರ್ಯ ಜಾರುತ್ತಿದ್ದ ಹಾಗೂ ನೀರಿನ ಒಳಗಿನ ಪ್ರಪಂಚದ ವೀಕ್ಷಣೆಗೆ ಸಮಯವೂ ಜಾರುತ್ತಿತ್ತು. ಹಾಗಾಗಿ ಇತ್ತೀಚೆಗೆ ಹೋದ ದೋಣಿಯವರಿಗೆ ಸ್ಕೂಬಾ ಸಾಧ್ಯವಿಲ್ಲ ಎಂದು ನಿರಾಕರಿಸಿ ನಿಮ್ಮ ಹಣ ವಾಪಾಸ್ ಮಾಡುತ್ತೇವೆ ಎಂಬ ಮಾಹಿತಿ ನೀಡಿದ್ದರು. ಹಾಗಾಗಿ ಮೊದಲ ಡೈವ್ ಆಸೆಯಲ್ಲಿದ್ದ ಕೆಲವರ ಕೋಪದ ಲಹರಿ ಶಿವನು ಮೂರನೇ ಕಣ್ಣು ಬಿಟ್ಟ ಸಂದರ್ಭವನ್ನು ಮೀರಿಸುತ್ತಿತ್ತು. ಕಡೆಗೆ ನಮ್ಮ ಟೂರ್ ಮ್ಯಾನೇಜರ್  ಯಾಸಿರ್ ಅರಾಫತ್ ಮಧ್ಯಸ್ಥಿಕೆಯಿಂದ  ಲಕ್ಷದ್ವೀಪ ಸಮುದ್ರದಲ್ಲಿ ಆಗಬಹುದಾದ ದೊಡ್ಡ ಯುದ್ದವನ್ನು ಸಂಧಾನದ ಮೂಲಕ ಬಗೆ ಹರಿಸಿ ಉಳಿದ ಸ್ಕೂಬಾ   ಡೈವ್ ಆಕಾಂಕ್ಷಿಗಳನ್ನು ಬೇರೆ ಡೈವ್ ಸೆಂಟರ್ ಗೆ ಕರೆದೊಯ್ದು ಡೈವ್ ಮಾಡಿಸಿಕೊಂಡು ಬರಲಾಗುವುದು ಎಂಬ ಮಾಹಿತಿ ತಲುಪಿತು. ಹಾಗಾಗಿ ಜಾನಪದ ಕಾರ್ಯಕ್ರಮವನ್ನು ಆರಂಭಿಸಿ ಎಂಬ ಮಾಹಿತಿಯು ರವಾನೆಯಾಗುತ್ತಿದ್ದಂತೆ ನಾವು ಕಾರ್ಯಕ್ರಮ ನಡೆಯುವ ಪೆಂಡಾಲ್ ಕಡೆಗೆ  ಹೆಜ್ಜೆ ಹಾಕಿದೆವು. ಸುಮಾರು ೧೧ ಗಂಟೆಗೆ   ೮ ಜನರನ್ನು ಹೊತ್ತು  ಡೈವಿಂಗಾಗಿ ಹೋದ ದೋಣಿ ೪ ಗಂಟೆಗೆ ಹಿಂತಿರುಗಿತು ಎಂದರೆ ನಿಮಗೆ ಅರ್ಥವಾಗಬೇಕು ಹೇಗಿತ್ತು ಮರಳಿ ಅರಳಿದವರ ಡೈವ್ ಎಂದು.  

ಉಲಕ್ಕಮುತ್ತು..

ಈ ನೃತ್ಯ ಶೈಲಿಯನ್ನು ‘ಪೋಲ್ ಸ್ಟ್ರೈಕಿಂಗ್’ ನೃತ್ಯ ಎಂದೂ ಕರೆಯುತ್ತಾರೆ. ಇದನ್ನು ನೃತ್ಯ ರೂಪಕ್ಕಿಂತ ದೈಹಿಕ ವ್ಯಾಯಾಮ ಎಂದು ಹೇಳಬಹುದು. ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ನರ್ತಕರು ನುರಿತವರು ಮತ್ತು ಅವರ ಕೈ ಚಲನೆಗಳಲ್ಲಿ ನಿಖರವಾಗಿರುತ್ತದೆ. ಮೊದಲಿಗೆ ಬೊಂಬಿನ ಮಧ್ಯದಲ್ಲಿರುವ  ನರ್ತಕನು ಬೊಂಬಿನ ಚಲನೆ ಆಧರಿಸಿ ಬೊಂಬಿನ ಕಂಬಕ್ಕೆ ತಾಗದಂತೆ ತನ್ನ ಪಾದ ಚಲನೆ ಮಾಡಬೇಕು. ಈ ಬೊಂಬುಗಳು ಒಂದಕ್ಕೊಂದು ಒಟ್ಟಿಗೆ ಬಡಿದಾಗ ಉಂಟಾಗುವ ಶಬ್ದವೇ ಈ ನೃತ್ಯಕ್ಕೆ ಹಿನ್ನಲೆಯ ಸಂಗೀತ ಇದಲ್ಲದೆ  ಭಜನೆಯ ಗಂಟೆಯ ಲಹರಿ ಕೂಡ ಸೇರಿರುತ್ತದೆ. ಇದಕ್ಕೆ ತಕ್ಕಂತೆ ನರ್ತಕನು ಚಪ್ಪಾಳೆ ಹೊಡೆಯುತ್ತ  ಹೊ ಕಾರ ಹಾಡಿ ಕುಣಿಯಬೇಕು. 

ನರ್ತಕರು ಬಿದಿರಿನ ಕಂಬಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಪಾದ ಚಲನೆಯ ದೋಷಕ್ಕೆ  ಅವಕಾಶವಿಲ್ಲ. ಏಕೆಂದರೆ ಇದು ಬಿದಿರಿನ ಕಂಬಗಳ  ನಡುವೆ ವೇಗವಾಗಿ ಪಾದದ ಚಲನೆಯನ್ನು ಮಾಡುವ ನೃತ್ಯಗಾರರಿಗೆ ಗಾಯವಾಗಬಹುದು. ಈ ನೃತ್ಯ ಪ್ರಕಾರವು ಕೇವಲ ಪುರುಷ ಆಧಾರಿತವಾಗಿದೆ. ‘ಉಲಕ’ ಎಂದರೆ ಉದ್ದವಾದ ಬಿದಿರಿನ ಕಂಬ ಆದ್ದರಿಂದ ಕಲೆಗೆ ಹೆಸರು ಬಂದಿದೆ. ಇದನ್ನು ಎರಡು ಶೈಲಿಗಳಲ್ಲಿ ನಡೆಸಲಾಗುತ್ತದೆ.  ಒಂದು ಸುತ್ತಿನಲ್ಲಿ ಮತ್ತು ಇನ್ನೊಂದು ನರ್ತಕರು  ಸುಸ್ತಾಗುವರೆಗೂ ಕುಣಿಯಬಹುದು  ಹಾಗಾಗಿ ಅನುಭವಿ ವ್ಯಕ್ತಿಗಳು ಮಾತ್ರ ಈ ನೃತ್ಯವನ್ನು ಮಾಡಬಹುದು. ಲಕ್ಷದ್ವೀಪ ದ್ವೀಪದಲ್ಲಿ ಕೇವಲ ತೆಂಗು ಬಿಟ್ಟರೆ ಬೇರಾವುದೂ ಕಾಣಸಿಗುವುದಿಲ್ಲ ಹಾಗಾಗಿ  ಉಲಕಮುತ್ತು ಕಲೆಗೆ ಬಿದಿರನ್ನು ಕೇರಳದಿಂದ ರವಾನೆಯಾಗುತ್ತದೆ.  

                                                 

ಲಕ್ಷದ್ವೀಪ ಕೇವಲ ದ್ವೀಪವಲ್ಲ ಅದೊಂದು ಜಾನಪದ ಲೋಕ ಕೂಡ,  ಲಕ್ಷದ್ವೀಪದಲ್ಲಿ ಪ್ರದರ್ಶಿಸಲಾಗುವ  ವಿವಿಧ ಜಾನಪದ ನೃತ್ಯಗಳು ಕೋಲ್ಕಲಿ, ಪರಿಚ್ಚಾಕಲಿ, ಲವ, ದಂಡಿ, ಭಂಡಿಯಾ, ಫುಲಿ, ಅಟ್ಟಂ, ಉಲಕ್ಕಮುತ್ತು, ಓಪಣ್ಣ, ಅಟ್ಟಂ, ಇತ್ಯಾದಿ. ಈ ಪ್ರದೇಶದ ಐತಿಹಾಸಿಕ ಹಿನ್ನೆಲೆಯಿಂದಾಗಿ ಹೆಚ್ಚಿನವು ನೃತ್ಯ ಪ್ರಕಾರಗಳು ಕೇರಳ ಅಥವಾ ಇಸ್ಲಾಮಿಕ್ ಸಂಸ್ಕೃತಿಯಿಂದ ಪ್ರೇರಿತವಾಗಿವೆ. ಈ ಕಲಾ ಪ್ರಕಾರಗಳನ್ನು ಸಾಮಾನ್ಯವಾಗಿ ಜನ್ಮ, ಮದುವೆ ಮತ್ತು ಹಬ್ಬಗಳ ಶುಭ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. 

ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಜಾನಪದ ಕಲೆಗಳ ಪರಿಚಯ ನೀಡಲು ಪ್ರವಾಸ ಆಯೋಜಿಸುವ ಸಂಸ್ಥೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಪ್ರಕಾರದ ನೃತ್ಯಗಳನ್ನು  ಏರ್ಪಡಿಸುವ ಸಂಪ್ರದಾಯ ಆಚರಣೆಯಲ್ಲಿದೆ. 

ಈ ನೃತ್ಯದಲ್ಲಿ ನನ್ನದು ಕೈ ನೋಡುಲಿ  ಎಂದು ಪ್ರವಾಸಿಗರು ತಾವು ತಮ್ಮ ಪಾದ ಚಲನೆ ತೋರಿಸಿ  ನೃತ್ಯದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲಾವಿದರು ಸಹ ಕಲ್ಪಿಸಿ ಆಮಂತ್ರಿಸುತ್ತಾರೆ. ಪ್ರವಾಸಿಗರು ಬೊಂಬಿನ ಮಧ್ಯ ನೃತ್ಯ ಮಾಡುವಾಗ ಬೊಂಬು ಹಿಡಿದವರು ತಸು ಮೆಲ್ಲಗೆ ಕಂಬಗಳ ಚಲನೆ ಮಾಡುತ್ತಾರೆ ಹಾಗಾಗಿ ಖುಷಿಗಾಗಿ ನಾವು ಒಂದು ಈ ನೃತ್ಯಕ್ಕೆ ಒಂದು ಹೆಜ್ಜೆ ಹಾಕಿದೆವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೦ – ಅಗಟ್ಟಿ ಲಗೋನಿನ ಮುತ್ತಿಡುವ ಮತ್ಸ ರಾಣಿಯ ಜಾಡು ಅರಸುತ್ತಾ !!!

ನಮಗೆ ಮಿನಿಕಾಯ್ ದ್ವೀಪದ ದರ್ಶನವನ್ನು  ಸರಕು ಸಾಮಾನು ಸಾಗಿಸುವ  ಗಾಡಿಯಲ್ಲಿ(ಲಗೇಜ್  ಆಟೋ) ಕುರಿಗಳಂತೆ ಹಿಂದೆ ಹತ್ತಿಸಿ ಮಾಡಿಸಿದ್ದರು. ಹಾಗಾಗಿ ಅಗಟ್ಟಿಯಲ್ಲಿ ಯಾವ ವಾಹನದಲ್ಲಿ ಮಾಡಿಸುತ್ತಾರೋ ಎನ್ನುವ ಕುತೂಹಲದ ಜೊತೆ ಭಯವಿತ್ತು. ಪ್ರವಾಸಿಗರ ದೋಣಿಗಳು ಅಗಟ್ಟಿ ಬಂದರು ತಲುಪುತ್ತಿದ್ದಂತೆ ನಮ್ಮೂರಿನ  ಬಸ್ ಮತ್ತು ರೈಲು ನಿಲ್ದಾಣದ ಹೊರಗೆ ಕಾಣುವ ಆಟೋ ರಿಕ್ಷಾಗಳು  ಸಾಲಾಗಿ ನಿಂತಿದ್ದವು . ಅಬ್ಬಾ ಅಂತೂ ನಮ್ಮನ್ನು ಈ  ಬಾರಿ ಮಧ್ಯಕಾಲೀನ ಆಧುನಿಕ ಮಾನವರ ರೀತಿಯಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಅಗಟ್ಟಿ ದರ್ಶನ ಮಾಡಿಸುತ್ತಾರೆ ಎಂಬ ಖುಷಿಯಾಯಿತು. ನಾವೆಲ್ಲಾ ಖುಷಿಯಿಂದಲೇ ಆಟೋ ಹತ್ತಿ ಅಗಟ್ಟಿ ಬೀಚ್ ರೆಸಾರ್ಟ್ಗೆ ಕಾಲಿಟ್ಟೆವು. 

ಸುಮಾರು ಬೆಳಗಿನ ಎಂಟೂವರೆ ಗಂಟೆಗೆ ನಾವು ಅಗಟ್ಟಿ ಲಾಗೊನ್ ತಲುಪಿದ್ದೆವು. ಹಿಂದಿನ ರಾತ್ರಿ ಮಲಗಿದ್ದ ಸಾಗರವು ನಿದ್ದೆಯಿಂದ ಆಗತಾನೇ ಕಣ್ಣುಜ್ಜಿ ನಮ್ಮನ್ನು ಎದಿರುಗೊಂಡಿತ್ತು ಎಂದರೇ ತಪ್ಪಾಗಲಾರದು. ಕಡಲ ತೀರದಲ್ಲಿ ಹಲವಾರು ಕಡಲ ಹಕ್ಕಿಗಳು ತಮ್ಮ ಮುಂಜಾವಿನ ಉಪಹಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದವು. ದೈತ್ಯ ಕಡಲ ಆಮೆಗಳು ಕಡಲ ಕಿನಾರೆಯಲ್ಲಿ ನಮ್ಮನ್ನು ಮುಟ್ಟುವವರು ಯಾರು ಇಲ್ಲ ಎಂದು ನಿರಂತರವಾಗಿ ಈಜುತ್ತಿದ್ದವು. ಸಮುದ್ರ ತಟದಲ್ಲಿ ಆಧುನೀಕತೆ ಎನ್ನುವ ಪದಗಳನ್ನು ಗುರುತಿಸಲು ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಿಟ್ಟರೇ ಸ್ಪಟಿಕದಷ್ಟು ಶುಭ್ರವಾದ ಬಿಳಿ ಕಣದ  ಮರಳು  ತೀರದ ಉದ್ದಕ್ಕೂ ಚಾಚಿಕೊಂಡಿತ್ತು. ಒಂದಡೆ ಅಬ್ಬರವಿಲ್ಲದ ಪ್ರಶಾಂತತೆ, ಪಿನ್  ಡ್ರಾಪ್ ಸೈಲೆನ್ಸ್ ಶಬ್ದದ ಅಲೆಗಳು ಸಮುದ್ರದಲ್ಲಿ ಲೀನವಾಗಿದ್ದ ಅವಶೇಷಗಳನ್ನು ಹೊತ್ತು ತೀರಕ್ಕೆ ಸಾಗ ಹಾಕುತ್ತಿತ್ತು. ಅಗಟ್ಟಿ ಸಮುದ್ರ ಕಿನಾರೆ ಒಂದರ್ಥದಲ್ಲಿ ಸ್ವರ್ಗದಿಂದ  ಬಿದ್ದ ಒಂದು ತುಣುಕು ಎನ್ನಬಹುದು ಹಾಗಾಗಿ ನಮ್ಮನ್ನು ವಿಸ್ಮಯಗೊಳಿಸುತ್ತದೆ. 

ಸಮುದ್ರ ತೀರದ ಕಡೆ ಹೋಗುತ್ತಿದ್ದಂತೆ, ಯಾರು ಸ್ಕೂಬಾ ಡೈವಿಂಗ್ ಹೋಗುವಿರೋ ದಯವಿಟ್ಟು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ನಮ್ಮ ಟೂರ್ ಗೈಡ್ ಹೇಳುತ್ತಿದ್ದಂತೆ, ಎಲ್ಲರೂ ಒಂದೇ ಬಾರಿಗೆ ಸ್ಕೂಬಾ ಡೈವ್ ಕೌಂಟರ್ ಮುಂದೆ ಸಾಲುಗಟ್ಟಿ ತಮ್ಮ ತಮ್ಮ ಹೆಸರು ನೋಂದಾಯಿಸಿಕೊಂಡರು. ಒಂದು ವಿಷಯ ಹೇಳಲೇ ಬೇಕು ನಮ್ಮ ಜೊತೆ ಬಂದ ಸಹ ಪ್ರವಾಸಿಗರಲ್ಲಿ ರೈಲ್ವೆ ಇಲಾಖೆಯ ನಿವೃತ್ತ ನೌಕರರ ಸುಮಾರು ೫೦ ಜನರ ತಂಡ ಇತ್ತು, ಅವರೆಲ್ಲೂ ಸುಮಾರು ೬೦ ರಿಂದ ೭೦ರ ವಯೋಮಾನದ ತರುಣ ತರುಣಿಯರು. ಹೆಚ್ಚು ಕಡಿಮೆ ಅವರೆಲ್ಲರೂ ಸ್ಕೂಬಾ ಡೈವಿಂಗ್ಗೆ ನೋಂದಾಯಿಸಿ ಕೊಂಡರು  ಎಂದರೇ ಆಶ್ಚರ್ಯ ಆಗದೇ ಇರದು. ಎಂತಹವರಿಗೂ ಮೆಚ್ಚಲೇ ಬೇಕಾದ ಎದೆಗಾರಿಕೆ. ಅವರೆಲ್ಲಾ ಸ್ಕೂಬಾ ಡೈವಿಂಗ್ ಹೋದಾಗ ಅದ ಅನುಭವ ಆಮೇಲೆ ಹೇಳುತ್ತೇನೆ.

ಸ್ಕೂಬಾ ಡೈವಿಂಗ್ ಬಗ್ಗೆ ನಾಲ್ಕು ಮಾತು ಹೇಳಲೇ ಬೇಕು… 

ಮೊದಲು ಡೈವಿಂಗ್ ಆಸಕ್ತರು, ಡೈವಿಂಗ್ಗಾಗಿ ನೋಂದಣಿ ಮಾಡಿಸಿ ಕೊಳ್ಳಬೇಕು, ನೋಂದಣಿ ಸಮಯದಲ್ಲಿ ಯಾವುದಾದರು ಅರೋಗ್ಯ ಸಮಸ್ಯೆ ಇದ್ದರೆ ಮುಚ್ಚು ಮರೆಯಿಲ್ಲದೆ  ತಪ್ಪದೇ  ತಿಳಿಸಬೇಕು. ಹಾಗೂ ನಮಗೆ ಏನೇ ತೊಂದರೆ ಆದರೆ ಅದಕ್ಕೆ ನಾವೇ ಜವಾಬ್ದಾರರು ಎಂಬ ಕರಾರಿಗೆ ಸಹಿ ಹಾಕಿದರೆ ಮಾತ್ರ ಸ್ಕೂಬಾ ಡೈವಿಂಗ್ಗೆ ಅವಕಾಶ. ನಂತರ ಡೈವಿಂಗ್ ತಜ್ಞರು ಸ್ಕೂಬಾ ಬಗ್ಗೆ ಸಣ್ಣ ವಿವರಣೆ ನೀಡಿ, ಬಳಸುವ ಉಪಕರಣದ ಬಗ್ಗೆ ತಿಳಿಸುತ್ತಾರೆ. ಮುಂದೆ ಡೈವಿಂಗ್ ಸಮಯದಲ್ಲಿ ತಿಳಿದಿರಬೇಕಾದ  ಸಂಜ್ಞೆ ಅಥವಾ ಸಂಕೇತಗಳ ಬಗ್ಗೆ ವಿವರಿಸುತ್ತಾರೆ. 

ಸ್ಕೂಬಾ ಡೈವಿಂಗ್ ಎಂದರೇ ನೀರೊಳಗೆ ಈಜುವ ಒಂದು ವಿಧಾನವಾಗಿದ್ದು. ಈಜುಗಾರನು ಉಸಿರಾಟದ ಉಪಕರಣಗಳನ್ನು ಬಳಸುತ್ತಾರೆ, ಹಾಗಾಗಿ ನೀರೊಳಗೆ ಉಸಿರಾಡಲು ಉಸಿರಾಟದ ಉಪಕರಣಗಳನ್ನು ಬೆನ್ನಿಗೆ ಕಟ್ಟಿಕೊಂಡು  ಈಜುತ್ತಾರೆ, ಎಲ್ಲಿಯವರೆಗೆ ಉಪಕರಣದಲ್ಲಿ ಆಮ್ಲಜನಕ ಇರೋತ್ತದೆಯೋ ಅಲ್ಲಿಯವರೆಗೆ ನೀರಿನ ಒಳಗೆ ಜಲಚರಗಳಂತೆ ಈಜ ಬಹುದು.  ಅದು ಮೇಲ್ಮೈ ಗಾಳಿಯ ಪೂರೈಕೆಯಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರುತ್ತದೆ. ಹಾಗಾಗಿ ಈಜುವ ಅವಧಿಯು ಸಹ ಸೀಮಿತವಾಗಿರುತ್ತದೆ.  ಉಪಕರಣಗಳ ಜೊತೆ ಕ್ಷಿಪ್ರ  ತರಬೇತಿ ನೀಡಿ ಆಳವಾದ ನೀರಿನ ಜಾಗಕ್ಕೆ ಕರೆದೊಯ್ದು , ಡೈವಿಂಗ್ ಮುನ್ನ ಏನಾದರು ಅನುಮಾನವಿದ್ದರೆ , ಪರಿಹರಿಸಿ ನೀರಿನ ಒಳಗೆ ಕರೆದೊಯ್ದು ಜಲಚರಗಳ ಅದ್ಭುತ ಪರಿಸರವನ್ನು ಮೀನಿನಂತೆಯೇ  ಈಜುತ್ತಾ ತೋರಿಸುತ್ತಾರೆ, ನಮಗೆ ಸ್ಕೂಬಾ ಬರುವುದಿಲ್ಲದ ಕಾರಣ ನುರಿತ ಸ್ಕೂಬಾ ತಜ್ಞ ನಮ್ಮ ಕೈ ಹಿಡಿದು ಕೊಂಡಿರುತ್ತಾರೆ . ಮತ್ತೊಬ್ಬ ಸ್ಕೂಬಾ ಡೈವರ್ ಸಿಬ್ಬಂದಿ  ನಮ್ಮ ನೀರಿನೊಳಗಿನ ಹಾವಭಾವಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದು ಡೈವಿಂಗ್ ಮುಕ್ತಾಯವಾದ ನಂತರ ನಮಗೆ ಹಸ್ತಾಂತರಿಸುತ್ತಾರೆ. ನೀರಿನೊಳಗೆ ನಾವು ಹೇಗೆ ಹೊಂದಿಕೊಂಡಿದ್ದೇವೆ ಎಂದು ಆಗಾಗ ಸಂಜ್ಞೆಗಳ ಕೇಳುತ್ತ, ಏನಾದರೂ ತೊಂದರೆ ಇದ್ದರೆ ತಿಳಿಸಿ ಎಂದು ಕೇಳುತ್ತಾ ಮುನ್ನಡೆಯುತ್ತಾರೆ.  ಏನಾದರೂ ತೊಂದರೆ ಇದ್ದರೆ ಅಲ್ಲಿಯೇ ಸರಿಪಡಿಸುತ್ತಾರೆ , ಇಲ್ಲದಿದ್ದರೆ ಸೀದಾ ವಾಪಾಸ್ ಸಾಗರದ ಮೇಲ್ಮೆಗೆ ಕರೆ ತರುತ್ತಾರೆ.  

ಈ ಮಾಹಿತಿ ಕೊಟ್ಟ ನಂತರ ನಮ್ಮ ಜೊತೆ ಸ್ಕ್ಯೂಬಾಗೆ ನೋಂದಾಯಿಸಿದ  ಮರಳಿ ಅರಳಿದ ತರುಣ ತರುಣಿಯರು ಸ್ಕೂಬಾ ಮಾಡಿದರಾ ಇಲ್ಲವಾ ಅಂತ ಪ್ರಶ್ನೆ ತಮಗೆ ಮೂಡುತ್ತೆ… 

ಉತ್ತರ ಸಹ ನೀವು  ಹಾಗೆ ನಿರೀಕ್ಷಿಸಿ!!!

ನಾವು ಅಗಟ್ಟಿ ದ್ವೀಪದ ನಮ್ಮ ಅಸ್ಸೆಂಬಲ್ ಪಾಯಿಂಟ್ಗೆ ಬಂದಾಗಲೇ ನಾವು ಸ್ಕೂಬಾ ನೋಂದಾಯಿಸಿದ್ದರಿಂದ ನಮಗೆ ಎರಡನೇ ಸರದಿಗೆ ಅವಕಾಶ ಕೊಟ್ಟಿದ್ದರು. ಹಾಗಾಗಿ ಹೆಚ್ಚಾಗಿ ಕಾಯುವ ಸಮಯವಿರಲಿಲ್ಲ. ಡೈವಿಂಗ್ ಗೆ ಕರೆದೊಯ್ಯುವ ದೋಣಿ ಬರುತ್ತಿದ್ದಂತೆ ನಾವೆಲ್ಲರೂ All set for scuba , ಎಂದು ಜೈಕಾರ ಹಾಕಿ ಹೊರಟೆವು. ಸುಮಾರು  ೩೦ ನಿಮಿಷದ ಪ್ರಯಾಣದ ನಂತರ ನಾವು ಡೈವಿಂಗ್ ಪಾಯಿಂಟ್ ತಲುಪಿದಾಗ ನಮ್ಮನ್ನು ಅಲ್ಲೇ ನಿಂತಿದ್ದ ಡೈವಿಂಗ್ ದೋಣಿಗೆ ವರ್ಗಾಯಿಸಿ, ನಮ್ಮ ಸರದಿಗೆ ಮುನ್ನ ಡೈವಿಂಗ್ ಮುಗಿಸಿ ಬಂದಿದ್ದ ಮಂದಿಯನ್ನು ನಮ್ಮ ದೋಣಿಯಲ್ಲಿ ಹತ್ತಿಸಿಕೊಂಡರು. 

ಅವರೆಲ್ಲರಿಗೂ ಡೈವಿಂಗ್ ಹೇಗಿತ್ತು ಎನ್ನುವ ಪ್ರಶ್ನೆಗೆ ಬಂದ ಉತ್ತರ ” ಸೂಪರ್ , ವಾವ್ , ಅವೆ ಸಮ್ , ಗ್ರೇಟ್, ಎಂಜಾಯ್ ಯುವರ್ ಡೈವ್ ” ಎಂದು ತಿಳಿಸಿ ಹೊರಟರು.

ಸರಿ ಸುಮಾರು ದಶಕಗಳ ಮುನ್ನ ಅಂಡಮಾನ್ ಸಮುದ್ರದಲ್ಲಿ ಸ್ಕೂಬಾ ಮಾಡಿದ ಅನುಭವ ನನಗೆ ಇತ್ತು ಹಾಗಾಗಿ ಇಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಭಯವಿರಲಿಲ್ಲ.  ಆದರೆ ಮನದಲ್ಲಿ ಒಂದು ರೀತಿಯ ಅಂಜಿಕೆ ಇದ್ದೆ ಇತ್ತು .  ಅಂದು ನಮಗೆ  ಡೈವಿಂಗ್ ಮುನ್ನ ಸುಮಾರು ಅರ್ಧ ತಾಸು ನೀರಿನ ಒಳಗೆ ನಾವು ಸಮಾನತೆ , ಸಮನ್ವಯ ಸಾಧಿಸಿ, ಡೈವಿಂಗ್ ನಲ್ಲಿ ಪಕ್ವತೆ ಬರುವವರೆಗೂ ತರಬೇತಿ ನೀಡಿ ಅಂಜಿಕೆ ಇಲ್ಲದಂತೆ ಮಾಡಿ , ಆಳದ ಸಾಗರದಲ್ಲಿ ಡೈವಿಂಗ್ ಮಾಡಿಸಿದ್ದರು. ಆದರೆ ಅಗಟ್ಟಿಯಲ್ಲಿ ಆಗಿದ್ದೆ ಬೇರೆ.   

ನಮ್ಮನ್ನು ನೀರಿಗೆ ಇಳಿಸುವ ಮುನ್ನ ನಮಗೆ ಡೈವಿಂಗ್ ಜಾಕೆಟ್ ನೀಡಿ , ನೀರಿಗೆ ಇಳಿಸಿದ ಮೇಲೆ ಸ್ವಲ್ಪ ಸಮಯ ನಮಗೆ ತರಬೇತಿ ನೀಡಿ ನಮ್ಮನ್ನು ನೀರೊಳಗೆ ಕರೆದೊಯ್ಯುತ್ತಾರೆ ಎಂಬ ಭಾವನೆ ನನ್ನಲ್ಲಿ ಇತ್ತು. ಆದರೆ ಅವರು ನಾವು ಹಾಕಿದ್ದ ಬಟ್ಟೆಯಲ್ಲಿಯೇ ನೀರಿಗೆ ಇಳಿಸಿ ಬೆನ್ನಿಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿ , ಉಸಿರಾಡುವ ಉಪಕರಣ ಕೊಟ್ಟು , ಪೈಪ್ ಅಲ್ಲಿ ಉಸಿರಾಡಿ, ಏನಾದರೂ ತೊಂದರೆ ಇದೆಯೇ , ಓಕೆ ,  ನಿಮಗೆ ಎಲ್ಲ ಗೊತ್ತಲ್ಲ , ಒಳಗೆ ಹೋಗೋಣವೆ ಎನ್ನುವುದೇ.   

ಒಮ್ಮೆಲೇ ಜಂಘಾಬಲ ಬಲವೇ ಅಡಗಿತಂತಾಯಿತು, ತಕ್ಷಣವೇ ಅಣ್ಣ ಮತ್ತೊಮ್ಮೆ ಹೇಳಿ , ಅದು ಸರಿಯಿಲ್ಲ ಇದು ಯಾಕೂ ಸರಿಯಿಲ್ಲ, ಇದನ್ನು ಚೆಕ್ ಮಾಡಿ, ಅದನ್ನು ಒಮ್ಮೆ ಚೆಕ್ ಮಾಡಿ, ಎಲ್ಲವೂ ಸರಿ ಇದೆ ಎಂದು ಹೇಳಿ, ನಾನು ಒಮ್ಮೆ ನೀರಿನಲ್ಲಿ ಮುಳಗಿ  ಉಸಿರಾಟ ಮಾಡುತ್ತೇನೆ, ನಂತರ ಹೊರೋಡೋಣ ಎಂದು ಸಮಯ ಪಡೆದು. ಇದ್ದ ಬದ್ದ ದೇವರನ್ನು ನೆನೆದು ‘ಬಂದದ್ದೆಲ್ಲಾ ಬರಲಿ ನಿನ್ನ ದಯವೊಂದಿರಲಿ’ ಎಂದು ಹೊರಟೆ. 

ನನ್ನ ಜೊತೆಗಿದ್ದ ಸಿಬ್ಬಂದಿ ಎಲ್ಲವನ್ನು ಸಮಾಧಾನದಿಂದ ಆಲಿಸಿ ನನ್ನನ್ನು ನಿಧಾನವಾಗಿ ನೀರಿನ ಒಳಗೆ ಕರೆದೊಯ್ದನು. ಮೊದಲ ಐದು ನಿಮಿಷ ಕಿವಿಯೊಳಗೆ ನೀರು ಹೊಕ್ಕಾಗ ಸಾಕಪ್ಪ ಮೊದಲು ಡೈವಿಂಗ್ ಮುಗಿಸು ಎನ್ನುವ ಭಾವವಿತ್ತು, ನಂತರ ನೀರಿನ ಜೊತೆ ಸಮನ್ವಯ ಸಾಧಿಸಿದ ಮೇಲೆ ಮುಂದಿನ ೧೫ ನಿಮಿಷದ ಅದ್ಭುತ  ಯಾನ ಅದಾಗಿತ್ತು. ನನ್ನ ಜೊತೆ ಬಂದ ಸಿಬ್ಬಂದಿಯ ಹೆಸರು ಸಮೀರ್, ಒಂದೊಂದು  ಹವಳ ದಂಡೆಯ ಹತ್ತಿರ ಕರೆದೊಯ್ದು ಅಲ್ಲಿನ ಜಲಚರಗಳ ಪರಿಚಯ ಮಾಡಿಸಿದ, ಬಣ್ಣದ ಬಣ್ಣದ ಮೀನುಗಳ ಹತ್ತಿರ ಸುಳಿದಂತೆ ಅವುಗಳನ್ನು ಪರಿಚಯಿಸಿದ, ಅಲ್ಲಿ ಅದೊಂದು ಮಿನಿನ ಗುಂಪಿತ್ತು,  ಆತ ಅವುಗಳ ಹತ್ತಿರ ಕರೆದೊಯ್ದು ತನ್ನ ಮುಷ್ಠಿ ಹಿಡಿದ  ಆ ಗುಂಪಿನಿಂದ ಬಂದ ಒಂದೊಂದೇ ಮೀನುಗಳು ಮುತ್ತಿಟ್ಟು ವಾಪಾಸ್ ಆದವು. ನನಗೆ ಆತ ಹಾಗೆ ಮಾಡಲು ತಿಳಿಸಿದ ಯಾಕೂ ಹಿಂಜರಿದೆ ಮುಂದಿನ ಜಾಗಕ್ಕೆ ಹೊರಟೆ, ಮತ್ತೆ ಮನಸ್ಸು ಮಾಡಿ ಬೇರೆ ಮೀನುಗಳ ಹತ್ತಿರ ಅವನು ಹೇಗೆ ತಿಳಿಸಿದ್ದನು ಹಾಗೆ ಮುಷ್ಟಿ ಮಾಡಿ ಬೇರೆ ಮೀನಿನ ಹತ್ತಿರ ಕೈ ಒಡ್ಡಿದ , ಮೀನುಗಳು ಹತ್ತಿರ ಬರಲೇ ಇಲ್ಲ. 

ಎಂತಹ ಪ್ರಮಾದವಾಯಿತು , ಮುತ್ತಿಡುವ ಮೀನು ಮರೆಯಾಯಿತು ಎಂದು ಪಶ್ಚಾತ್ತಾಪ ಪಟ್ಟು ಸಿಬ್ಬಂದಿಯನ್ನು ಒಮ್ಮೆ ನೋಡಿದೆ. ಆತ ಬೇಸರ ಬೇಡ ನಾನು ನಿಮ್ಮನ್ನು ಮುತ್ತಿಡುವ ಮೀನಿಗೆ ಭೇಟಿ ಮಾಡಿಸುತ್ತೇನೆ ಎಂದು ಕೈಯಲ್ಲೇ ಅಭಯವಿತ್ತು, ಮತ್ತೆ ಹಿಂದಿನ ಜಾಗಕ್ಕೆ ಕರೆದೊಯ್ದು ಮೊದಲು ತಾನು ಕೈಯೊಡ್ಡಿದನು ಮೀನುಗಳು ಆತನನ್ನು ಹುಡುಕಿಕೊಂಡು ಬಂದು ಆತ್ಮೀಯತೆಯ ಅಭಿಪ್ರಾಯವನ್ನು ಕೈಗೆ ಚುಂಬಿಸುವ ಮೂಲಕ ತೋರಿಸಿದವು. ನಂತರ ನನಗೆ ಕೈಯೊಡ್ಡಲು ಹೇಳಿದಾಗ ಅದೇ ಮೀನುಗಳು ಒಂದೊಂದಾಗಿ ಬಂದು ಆತ್ಮೀಯತೆಯ ಅಭಿಪ್ರಾಯವನ್ನು ಕೈಗೆ ಚುಂಬಿಸುವ ಮೂಲಕ ತೋರಿಸ ತೊಡಗಿದವು. ಕೇವಲ ವಿಡಿಯೋಗಳಲ್ಲಿ ಇಂತಹ ಚಿತ್ರಗಳನ್ನು ನೋಡಿದ್ದ ನನಗೆ ಈ ಅದ್ಭುತ ಅನುಭವ ನೀಡಲು ಸಹಕರಿಸಿದ ನನ್ನ ಸಿಬ್ಬಂದಿಗೆ  ಕೋಟಿ ಕೋಟಿ ಪ್ರಣಾಮಗಳನ್ನು ನೀರಿಲ್ಲಿಯೇ ಸಲ್ಲಿಸಿದೆ. ಮುಂದೆ ನೀರಿನಲ್ಲಿರುವ ಹಲವಾರು ಜಲಚರಗಳನ್ನು ಆತ ತೋರಿಸಿದರು, ಹೀಗೆ ನೀರಿನ ಒಳಗೆ ಅಡ್ಡಾಡುತ್ತಿದ್ದಾಗ  ಮತ್ತೊಬ್ಬ ಸಿಬ್ಬಂದಿ ಕ್ಯಾಮೆರಾ ಹಿಡಿದು ನಿಂತು ನನ್ನ ಹಾವಭಾವಗಳನ್ನೂ ಚಿತ್ರೀಕರಿಸಿ, ಹಾಗೆ ಮಾಯವಾದನು.  ಅಷ್ಟರೊಳಗೆ ಸುಮಾರು ೨೦ ನಿಮಿಷವಾಗಿತ್ತು ಮತ್ಸಲೋಕವೆಂಬ ಮಾಯಾಲೋಕದಲ್ಲಿ ನಮ್ಮ ಪ್ರಯಾಣಕ್ಕೆ ತೆರೆ ಇಳಿಸಿ , ನಮ್ಮನ್ನು ಸಾಗರದ ಮೇಲ್ಮೆಯ್ಗೆ ಕರೆ ತಂದು ಮತ್ತೆ ಲಂಗೂರು ಹಾಕಿದ್ದ ದೋಣಿಗೆ ಹತ್ತಿಸಿದನು. ದೋಣಿ ಹತ್ತುವ ಮುನ್ನ ಆತನಿಗೆ ದೊಡ್ಡ ಧನ್ಯವಾದಗಳು, ಇದೊಂದು ಅನನ್ಯ ,  ಅವಿಸ್ಮರಣೀಯ  ಅನುಭವ ಎಂದು ತಿಳಿಸಿ ಒಲ್ಲದ ಮನಸ್ಸಿನಿಂದ ದೋಣಿ ಹತ್ತಿದೆ. 

ಒಂದು ಮಾತನ್ನು ತಿಳಿಸಬೇಕು , ನಾವು ಡೈವಿಂಗ್ ಹೋದಾಗ ನಮ್ಮ ಜೊತೆ ಬರುವ ಸಿಬ್ಬಂದಿಯ ವ್ಯಕ್ತಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ನನ್ನ ಜೊತೆ  ನನ್ನ ಮಡದಿ , ಹಾಗು ನನ್ನ ಮಿತ್ರ ಸಹ ನೀರಿಗೆ ಇಳಿದಿದ್ದ ಆದರೆ ಅವರಿಗೆ ನನಗೆ ಸಿಕ್ಕಂತಹ ಸಿಬ್ಬಂದಿ ಸಿಗದೇ ಸದಾ ಸ್ಕೂಬಾ ಡೈವ್ ಮಾಡಿ ಹಿಂತಿರುಗಿದ್ದರು. ಏನೇ ಆದರು ಜಲಚರೆಯ ಚುಂಬನ ಮರೆಯುವ ಹಾಗಿಲ್ಲ ಬಿಡಿ!!!

Uncategorized

ಅಂಡಮಾನ್ ನಾ ಕಂಡಂತೆ – ೫ – ಸಾಗರದ ಅಡಿಯಲ್ಲಿನ ಅ ಕ್ಷಣಗಳು.

ಹಿಂದಿನ ವಾರ :
ರಾಧ ನಗರ ಬೀಚಿನ ಪ್ರಶಾಂತತೆಗೆ  ಮನಸೋತ ನಂತರ ಎಂದಿನಂತೆ ನಾಳೆಯ ಬಗ್ಗೆ ಯೋಚಿಸಿತ ಹೊಟೇಲ್ ರೋಮಿಗೆ ಹಿಂದಿರುಗಿದೆವು. 

    ನಮ್ಮ ಟೂರ್ ಮ್ಯಾನೇಜರ್ “ ನೀಲ್ ಐಲಾಂಡ್ ಮತ್ತು ಎಲಿಫೆಂಟ್ ಬೀಚ್ಗೆ  ಹೈ ತೈಡೆ ಇರುವುದರಿಂದ ನಾಳೆ ನಾವು ಹೋಗುತ್ತಿಲ್ಲ, ಅದರ ಬದಲಿಗೆ ಇಲ್ಲೇ ಹತ್ತಿರದ ಲೈಟ್ ಹೌಸ್ ಬಳಿ ನಮ್ಮ ಕಡೆಯಿಂದ  ಸ್ನೋರ್ಕಲಿಂಗ್ ಸೇಶನ್ ಮತ್ತು ಮಂಗ್ರೋ ರೈಡ್  ಇರುತ್ತದೆ ಹಾಗೂ ಪೈಡ್ ವಾಟರ್ ಸ್ಪೋರ್ಟ್ ಆಕ್ಟಿವಿಟೀ ಸಹ ಇದೆ ಆಸಕ್ತಿ ಇದ್ದವರು ಹೋಗಬಹುದು “ ಎಂದು ಹೇಳಿ ನಮ್ಮ ನೀಲ್ ಮತ್ತು ಎಲಿಫೆಂಟ್ ಬೀಚ್ ಪ್ರವಾಸಕ್ಕೆ ವರುಣನ ಜೊತೆ ಸೇರಿ ಮಳೆನೀರು ಎರಚಿದನು. ಎಂದಿನಂತೆ ನಾಳೆ ಬೆಳಗ್ಗೆ ತಯಾರಿರಬೇಕೆಂದು ಹೇಳಿ ಹೊರನಡೆದ. ನಮ್ಮ ಟ್ರಿಪ್ ಪ್ಲಾನ್ನಲ್ಲಿ  ನೀಲ್ ಮತ್ತು ಎಲಿಫೆಂಟ್ ಬೀಚ್ ಇದ್ದರೂ ಇವರು ಕರೆದು ಕೊಂಡು ಹೋಗಲಿಲ್ಲ ಎನ್ನುವ ಸಿಟ್ಟಿನ ಜೊತೆ ನಾಳೆಯ ಸ್ನೋರ್ಕಲಿಂಗ್ ಸೇಶನ್ ಬಗ್ಗೆಯಾಗಲಿ ಮಂಗ್ರೋ ರೈಡ್ ಬಗ್ಗೆಯಾಗಲಿ ಅಷ್ಟೇನೂ ಆಸಕ್ತಿ ಮೂಡಲಿಲ್ಲ.  ಆದರೂ ಆ ಎರಡು ಸ್ಥಳಗಳು ಕೋರಲ್ ಮತ್ತು  ಪ್ರಕೃತಿಯ ಸೊಬಗಿಗೆ ಪ್ರಸಿದ್ದವಾದವು ಸುನಾಮಿಯ ಸಮಯದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು ಎಲಿಫೆಂಟ್ ಬೀಚ್ಗೆ ಹಾಗೂ ಮಳೆಗಾಲದಲ್ಲಿ ಎಲಿಫೆಂಟ್ ಬೀಚ್ಗೆ ಸಣ್ಣ ದೋಣಿಗಳು ಹೋಗುವುದನ್ನು ನಿರ್ಬಂಧಿಸುತ್ತಾರೆ. ಆದರೆ ನೀಲ್ ಐಲಾಂಡ್ಗೆ ಸರ್ಕಾರಿ ಫೆರ್ರಿ ಹೋಗುತ್ತದೆ ಎಂದು ನಮಗೆ ತಿಳಿದಿದ್ದು ಬಹಳ ತಡವಾಗಿ ನಮ್ಮ ಟೂರ್ ಮ್ಯಾನೇಜರ್ ಇವೆಲ್ಲವನ್ನೂ ನಮ್ಮಿಂದ ಬಚ್ಚಿಟ್ಟಿದ್ದ ನಮಗೆ ಗೊತ್ತಾದಗ ಅಲ್ಲೇನಿದೆ ಇಲ್ಲಿಯ ಹಾಗೆಯೇ ಇದೆ ಎನ್ನುವ ಹಾರಿಕೆಯ ಉತ್ತರ ಕೊಟ್ಟು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದನು. ಕಿತ್ತಾಡುವ ಮನಸ್ಸು ನಮಗಿಲ್ಲದಿದ್ದರಿಂದ ನಮ್ಮ ದುರ್ದೈವ ಎಂದು ಸುಮ್ಮನಾದೆವು.   

ಅಂದು ಸಂಜೆ ರಾಧ ನಗರ ಬೀಚಿನಲ್ಲಿ ಆರಂಭವಾದ ವರುಣನ ಅಬ್ಬರ ರಾತ್ರಿಯೆಲ್ಲ ಮುಂದುವರೆದು ಬೆಳಗ್ಗೆಯವರೆಗೂ ನಡೆಯಿತು. ಅಂತೂ ಇಂತೂ ನಾಳೆ ಮಳೆ ಬರದಿದ್ದರೆ ಸಾಕಪ್ಪ ಅನ್ನಿಸುವಷ್ಟು ನಮಗೆ ರೋಸಿ ಹೋಗಿತ್ತು. ನಾವಿದ್ದ ರಿಸಾರ್ಟ್ ರೂಂ ಮೊದಲೇ ಮರದಿಂದ ಮಾಡಿದ್ದು, ಮೇಲೆ ತಗಡಿನ ಆಸರೆ ಬೇರೆ ಕೊಟ್ಟಿದ್ದನು ಒಂದೊಂದು ಹನಿ ಬಿದ್ದಾಗಲೂ ಹೊರಗೆ ಮಹಾಯುದ್ದ  ನಡೆಯುತ್ತಿದ್ದೆಯೇನೂ ಎನ್ನುವಂತೆ ಭಾಸವಾಗುತ್ತಿತು. ಗುಡುಗು ಸಿಡಿಲು ಇದ್ದಿದ್ದರೇ ಇಸ್ರೇಲ್,  ಪಾಲೆಸ್ಟೈನ್ , ಇರಾಕ್  ದೇಶದ ಆಂತರಿಕ ಯುದ್ಧದ ಚಿತ್ರಣದ ನಮ್ಮ ಮುಂದೆ ಅನಾವರಣವಾಗುತ್ತಿತ್ತು ಎನ್ನುವಂತೆ ಭಾಸವಾಯಿತು. ನಮ್ಮ ಮೇಲೆ ಕೇವಲ ಮಳೆ ಹನಿ ಬೀಳುತ್ತಿದ್ದೆ ಎನ್ನುವ ನಂಬಿಕೆಯೊಂದಿಗೆ ನಿದ್ರೆಗೆ ಜಾರಿದೆವು.  ಮೊದಲು ನಿದ್ದೆ ಬಾರದಿದ್ದರೂ ಕಡೆಗೆ ನಾವೇ ಹೊಂದಿ ಕೊಂಡೆವು. ಹೊರಗೆ ವಟರು ಗಪ್ಪೆ, ಸೊಳ್ಳೆ ಇನ್ನಿತರ ಕೀಟಗಳ ನಾದಸ್ವರಗಳು ಬೇರೆ ರಾತ್ರಿಯೆಲ್ಲ ನಮಗೆ ಯಾರು ಲೈಟ್ ಆಗಿ ಮ್ಯೂಜಿಕ್ ಹಾಕಿ ಬಿಟ್ಟಿದ್ದಾರೆ ಎನ್ನುವಂತೆ ಕೇಳುತ್ತಿತು ಆದ್ರೂ ಪ್ರಕೃತಿಯ ಕೊಡುಗೆ ನಮ್ಮೊರ ಹಬ್ಬ ಹರಿದಿನಗಳಲ್ಲಿ ಹಾಕುವ ಕರ್ಕಶ ಶಬ್ಧಕ್ಕಿಂತ ಮಿಲ್ಲಿಯನ್ ಪಾಲು ವಾಸಿ ಕಣ್ರೀ.  ಮಲಗಿ ಸ್ವಲ್ಪ ಹೊತ್ತು ಆಗಿಲ್ಲ ಎಚ್ಚರ ಆದಾಗ ಸುಮ್ಮನೆ ಹೊರಗೆ ನೋಡಿದೆ ಅಷ್ಟೇ ಬೆಳಗಾಗಿ ಬಿಟ್ಟಿದೆ ನಾನು ಎಲ್ಲೋ ಏಳು ಎಂಟು ಗಂಟೆಯಿರಬೇಕು ಎಂದು ಗಡಿಯಾರ ನೋಡಿದೆ ಆದರೆ ಇನ್ನೂ ಬೆಳಗ್ಗೆ ನಾಲ್ಕು ಗಂಟೆ ತತ್ತ್ ಎಂದು ಮತ್ತೆ ಮಲಗಿದೆ. ನಿದ್ದೆ ಬಾರದಿದ್ದರೂ ಮತ್ತೆ ಎದ್ದು ನಿತ್ಯ ಕರ್ಮ ಮುಗಿಸಿ ರಿಸಾರ್ಟ್ ಹತ್ತಿರದ ಪ್ರೈವೇಟ್ ಬೀಚ್ ಕಡೆಗೆ ನಡೆದೇ. ಬೀಚಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೂ ಓಡಾಡಿ ಸಾಗರವು  ತನ್ನೊಡಲಿನಿಂದ ದಡಕ್ಕೆ ಏನು ತಂದು  ಹಾಕಿದೆ ಎನ್ನುತ್ತಾ  ಒಂದೊಂದೇ ವಸ್ತುಗಳನ್ನು ಕೈಗೆತ್ತು ಕೊಂಡು ಪರೀಕ್ಷಿಸುತ್ತಾ ಮತ್ತೆ ರಿಸಾರ್ಟ್ ಕಡೆಗೆ ನಡೆದೇ. ರೂಮ್ಗೆ ಹಿಂದಿರುಗಿದಾಗ ನನ್ನ ಮಡದಿ ಎದ್ದು ರೆಡೀಯಾಗಿದ್ದಳು. ಇಬ್ಬರು ಉಪಾಹಾರ ಸೇವಿಸಿ ಟೂರ್ ಮ್ಯಾನೇಜರ್ಗಾಗಿ ಕಾಯುತ್ತ ಕುಳಿತೇವು.

ಲೈಟ್ ಹೌಸ್ ಮತ್ತು ಸ್ನೋರ್ಕೆಲ್ಲಿಂಗ್

ಲೈಟ್ ಹೌಸ್ 

ನಮ್ಮ ಗಾಡಿ ಬಂದಂತೆ ವಾಹನವೇರಿ ಮತ್ತೆ ಹ್ಯಾವ್ ಲಾಕ್ ದ್ವೀಪದ ಜೆಟ್ಟಿಯತ್ತ ನಡೆದೆವು. ನಮ್ಮ ಟೂರ್ ಮ್ಯಾನೇಜರ್ ನಮಗಾಗಿ ಲೈಟ್ ಹೌಸ್ ಕಡೆಗೆ ಹೋಗುವ ಸಣ್ಣ ಮೋಟರ್ ದೋಣಿಯ ಟೀಕೆಟ್ ಕಾಯ್ದಿರಿಸಿದ್ದನು. ಆ ಮೋಟಾರ್ ದೋಣಿಯ ಹೆಸರು ರಿಯಾ ಪ್ರಿಯ ಟ್ರಿಯ, ದೋಣಿಯ ಹೆಸರು ಕೇಳಿದರೆ ಎಲ್ಲರಿಗೂ ನಗು ಬರುವುದು ಸಹಜ “ ರಿಯಾ ಪ್ರಿಯ ಟ್ರಿಯ “ ಅಂತ, ನಮಗೂ , ದೋಣಿಯ ನಾವಿಕನಿಗೂ ನಗು ಬಂತು, ಹಾಗೆ ನಿಮಗೂ ಸಹ ನಗು ಬಂದರೆ ಅಚ್ಚರಿಯೆನಿಲ್ಲ. ಕೇವಲ ಆರು ಜನರನ್ನು  ಮಾತ್ರ  ಹೊರಬಲ್ಲದು ಮತ್ತು ಅತಿವೇಗವಾಗಿ ಚಲಿಸುತ್ತದೆ ಎಂದು ನಮ್ಮ ಟೂರ್ ಮ್ಯಾನೇಜರ್ ನಮಗೆ ಕಾಗೆ ಹಾರಿಸಿದ. ಈ ದೋಣಿಯ ನಾವಿಕ ನಿಮಗೆ ಸ್ನೋರ್ಕ್ಲಿಂಗ್ ಸೆಷನ್ ನಡೆಸಿಕೊಡುತ್ತಾನೆ ನಾನು ಬೇರೆ ದೋಣಿಯಲ್ಲಿ ಬರುತ್ತೇನೆ ಎಂದು ಹೇಳಿ ಬೇರೆ ದೋಣಿ ಹತ್ತಿದ. ಅವನು ಹೇಳಿದ ಹಾಗೆ ನಮ್ಮ ಮೋಟಾರು ದೋಣಿ ಸಾಗರವನ್ನು ಭೇದಿಸಿ ಎಲ್ಲರಿಗಿಂತ ಮೊದಲೇ ಲೈಟ್ ಹೌಸ್ ತಲುಪಿತು.  ಲೈಟ್ ಹೌಸ್ ಸುಮಾರು ಹ್ಯಾವ್ ಲಾಕ್ ಜೆಟ್ಟಿಯಿಂದ ಸುಮಾರು 1.5 ಕಿಲೋ ಮೀಟರ್ ದೊರದಲ್ಲಿದೆ . ಹ್ಯಾವ್ ಲಾಕ್ ದ್ವೀಪಕ್ಕೆ ಬರುವ ಹಡಗುಗಳಿಗೆ ಇಲ್ಲಿ ಸಣ್ಣದೊಂದು ಲೈಟ್ ಹೌಸ್ ನಿರ್ಮಿಸಿದ್ದಾರೆ.

ನಮ್ಮ ದೋಣಿಯ ನಾವಿಕ ಮೊದಲು ಸ್ನೋರ್ಕೆಲ್ಲಿಂಗ್ ಶೇಷನ್ ಬೇಸಿಕ್ಸ ಹೇಳಿ ಕೊಟ್ಟು , ನಂತರ  ನಮ್ಮ ಬಾಯಿಗೆ ಪೈಪು ಕೊಟ್ಟು ಬಾಯಿಯಿಂದ ಉಸಿರಾಡುವಂತೆ ಹಾಗೂ ಮೂಗಿನಿಂದ ಯಾವುದೇ ಕಾರಣಕ್ಕೂ ಉಸಿರಾಡ್ಬೇಡಿ, ಯಾವಾಗಲೂ ನೀರಿನ ಒಳಗೆ ನೋಡುತ್ತೀರಿ ಏನಾದರೂ ಸಮಸ್ಯೆಯಾದರೆ ನನಗೆ ತಿಳಿಸಿ ಎಂದು ಹೇಳಿ ನಮಗೆ ಸ್ನೋಕೆಲ್ಲಿಂಗ್ ಕಿಟ್ಟು ಕೊಟ್ಟು ನಮ್ಮನ್ನು ನೀರಿನಲ್ಲಿ ಮುಂದೆ ತಳ್ಳುತ್ತಾ ಹವಳದ ದಂಡೆಗಳನ್ನು ವಿವಿಧ ರೀತಿಯ ಜಲಚರಗಳನ್ನು ತೋರಿಸುತ್ತಾ ನಮಗೆ ಸ್ನೋರ್ಕೆಲ್ಲಿಂಗ್ ಸೆಷನ್ ಮುಗಿಸಿದ. ಅದೇ ಸಮಯಕ್ಕೆ ಯಾರು ಒಬ್ಬರು ಸ್ನೋರ್ಕೆಲ್ಲಿಂಗ್ ಮಾಡುವಾಗ ಸೀ ಉರ್ಚಿನ್ ಮೇಲೆ ಕಾಲಿಟ್ಟು ಅದರ ಮುಳ್ಳನ್ನು ಚುಚ್ಚಿಸಿಕೊಂಡು ಒದ್ದಾಡುತ್ತಿದ್ದರು. ಆಗ ಅಲ್ಲಿದ್ದ ತಂಡವು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗಾಗಿ ವೈದ್ಯರ ಹತ್ತಿರ ತೆರಳುವಂತೆ ತಿಳಿಸಿದರು.

ಮಂಗ್ರೋ ರೈಡ್ 

ಗ್ಲಾಸ್ ಬೋಟ್ನಲ್ಲಿ ಮಾಗ್ನಿಫಯ್ ಗ್ಲಾಸ್ ಇದೆಯೆಂದು ಅದರಲ್ಲಿ ಇನ್ನೂ ಚೆನ್ನಾಗಿ ಜಲಚರ ಹಾಗೂ ಕೋರಲ್ ತೋರಿಸುತ್ತಾರೆ ಎಂದು ಅಲ್ಲೇ ಇದ್ದ ನಮ್ಮ ಟೂರ್ ಮ್ಯಾನೇಜರ್ ಹೇಳಿದನೆಂದು ನಾವು ಸ್ನೋರ್ಕೆಲ್ಲಿಂಗ್ ಮುಗಿಸಿ ನಾವು ಇನ್ನೂ ಹೆಚ್ಚು ಹವಳಗಳನ್ನು ನೋಡಬೇಕು ಎಂದು ಮುನ್ನೂರು ತೆತ್ತು ಗ್ಲಾಸ್ ಬೋಟ್ ಹತ್ತಿದೆವು.  ಆದರೆ ಅಲ್ಲಿ ಯಾವುದೇ ಮಾಗ್ನಿಫೈ ಗ್ಲಾಸ್ ಆಗಲಿ ಮತ್ತೊಂದಾಗಲಿ ಇರಲಿಲ್ಲ  ಮುನ್ನೂರು ತೆತ್ತಿದ್ದು ಸುಮ್ಮನೆ ದಂಡವಾಯಿತು. ಅದರ ಬದಲಿಗೆ ಮತ್ತೊಂದು ಸುತ್ತು ಸ್ನೋರ್ಕೆಲಿಂಗ್ ಹೋಗಬಹುದಿತ್ತೇನು ಎಂದು ನಮಗೆ ತಡವಾಗಿ ಅನಿಸಿತ್ತು. ಗ್ಲಾಸ್ ಬೋಟ್ ಟ್ರಿಪ್ ಮುಗಿದ ಮೇಲೆ ದೋಣಿಯಿಂದ ಇಳಿದ ಮತ್ತೆ ದಂಡೆಯ ಮೇಲೆ ನಡೆಯುತ್ತಿರಬೇಕಾದರೆ ಅಲ್ಲೇ ಇದ್ದ ಕಲ್ಲೋಂದಕ್ಕೆ ನನ್ನ ಚಪ್ಪಲಿ ಸಿಕ್ಕಿ ಹರಿದು ಹೋಯ್ತು. ಬದಲಿ ಚಪ್ಪಲಿ ಇಲ್ಲದಿದ್ದಕ್ಕೆ ಹುಷಾರಾಗಿ ಮತ್ತೆ ರಿಯಾ ಪ್ರಿಯ ಟ್ರಿಯ ಹತ್ತಿದೆ ಇಲ್ಲದಿದ್ದರೆ ನನ್ನ ಕಾಲನ್ನು ಅಲ್ಲೇ ಬಿಟ್ಟು ಬರಬೇಕಾದ ಪರಿಸ್ಥಿತಿಯಿತ್ತು ಅಷ್ಟು ಚೋಪಾದ ಕಲ್ಲುಗಳು ಅಲ್ಲಿದ್ದವು. 

ನಮ್ಮ ರಿಯಾ ಪ್ರಿಯ ಟ್ರಿಯದ ಎಲ್ಲರೂ ಸ್ನೋರ್ಕೆಲ್ಲಿಂಗ್ ಸೇಷನ್ ಮುಗಿಸಿ ದೋಣಿ ಹತ್ತಿ ಮ್ಯಾಂಗೋರೋವ ರೈಡ್ಗೆ ಹೊರಟೆವು. ನಮ್ಮ ರಿಯಾ ಪ್ರಿಯ ಟ್ರಿಯ ನಾವಿಕ ಸಕ್ಕತ್ ಜಾಲಿ ಹುಡುಗ ನಾವು ಹೇಳಿದ ಹಾಗೆ ದೋಣಿಯನ್ನು ಓಡಿಸುತ್ತಿದ್ದ. ಈ ರೀತಿಯ ಭಾಗ್ಯ ಸಿಗುವುದು ಅದೃಷ್ಟ ಇದ್ದವರಿಗೆ ಮಾತ್ರವೇನ್ನಬಹುದು. ಸ್ಪೀಡ್ ಬೋಟನ್ನು ಒಂದೇ ಜಾಗದಲ್ಲಿ ಸುರಳಿಯಂತೆ ತಿರುಗಿಸುವ,  ಹಾಗೆ ಒಂದು ಕಡೆ ವಾಲಿಸಿಕೊಂಡು ಚಲಾಯಿಸುವ ದೃಶ್ಯವನ್ನು ನಾವೆಲ್ಲರೂ  ಇಂದಿನ ಹಲವು ಹಿಂದಿ ಸಿನೆಮಾಗಳಲ್ಲಿ ನೋಡಿರುತ್ತೇವೆ. ಈ ರೀತಿಯ ಸಾಹಸ ದೃಶ್ಯಗಳಲ್ಲಿ ನಮ್ಮನ್ನು ಸಹ ಪಾಲುದಾರನ್ನಾಗಿ ಮಾಡಿದ ಶ್ರೇಯ ನಮ್ಮ ರಿಯಾ ಪ್ರಿಯ ಟ್ರಿಯ  ದೋಣಿಯ ನಾವಿಕನಿಗೆ ಸೇರಬೇಕು. ಬೇರೆ ದೋಣಿಯ ಪ್ರಯಾಣಿಕರು ಕೇವಲ ವೀಕ್ಷಕರಾಗಿ ನಮ್ಮ ದೋಣಿಯನ್ನು ವೀಕ್ಷಿಸುತ್ತಿದ್ದರು ಅಷ್ಟೇ. ನಮ್ಮ ಮ್ಯಾಂಗೋ ರೋವ್ ರೈಡ್ ಮುಗಿಸಿ ಎಂದಿನಂತೆ ನಾವು ಹ್ಯಾವ್ ಲಾಕ್ ಜೆಟ್ಟಿಗೆ ಬಂದು ತಲುಪಿದೆವು. ಹರಿದಿರುವ ಚಪ್ಪಲಿ ಕೈಯಲ್ಲಿ  ಹಿಡಿದುಕೊಂಡು ಹೊಟೇಲ್ ರೋಮಿನ ಕಡೆಗೆ ನಡೆದೇ. ಮೈಗೆ ಅಂಟಿದ ಮರಳು ಹಾಗೂ ಉಪ್ಪನ್ನು ತಗೆದು ಹಾಕುವ ಸಲುವಾಗಿ ಇನ್ನೊಮ್ಮೆ ಸ್ನಾನ ಮಾಡಿ ಊಟ ಮುಗಿಸಿ ಸ್ವಲ್ಪ ಸಂಜೆ ಕಾಲ ಪತ್ತರ್ ಬೀಚ್ ಸಂದರ್ಶಿಸುವ ಪ್ಲಾನ್ ಮಾಡಿಕೊಂಡು ಸ್ವಲ್ಪ ಸಮಯ ವಿರಮಿಸಿದೆ.

ಕಾಲ ಪತ್ತರ್

ಕಾಲ ಪತ್ತರ್

ಸ್ವಲ್ಪ ಸಮಯ ವಿಶ್ರಮಿಸಿದ ಮೇಲೆ ಎದ್ದು ಸಂಜೆ 4 ಗಂಟೆಗೆ ಕಾಲ ಪತ್ತರ್ ಬೀಚ್ ಕಡೆಗೆ ಹೊರಟೆವು. ನಾವಿದ್ದ ಹೊಟೇಲ್ನಿಂದ ಸುಮಾರು ಆರು ಕಿಲೋಮೀಟರ್ ದೊರದಲ್ಲಿದೆ ಈ ಬೀಚ್, ನಮ್ಮ ಎಂದಿನ ವಾಹನವೇರಿ ಬೀಚ್ ಕಡೆಗೆ ಸಾಗಿದೆವು.         ಕಾಲ ಪತ್ತರ್ ಹೆಸರಿನಲ್ಲಿಯೇ ಕಾಲ ಪತ್ತರ್ ಅಂತಲೇ ಇದೆ ಇಲ್ಲಿ ಹೆಚ್ಚಾಗಿ ಕಪ್ಪು ಶಿಲೆಗಳು ದಡದಲ್ಲಿವೆ ಹಾಗಾಗಿ ಈ ಹೆಸರು ಬಂತು ಎನ್ನಬಹುದು. ಕಾಲ ಪತ್ತರ್ ಬೀಚ್ ಒಂದು ನಿರ್ಜನ ಬೀಚ್ ಇಲ್ಲಿ ನಿಮ್ಮ ಕಣ್ಣಿಗೆ ನೀಲಿ ಹಸಿರು ಬಣ್ಣದ ಸಾಗರ ಬಿಟ್ಟರೆ ಮಾನವನ ಕುರುಹು ಕೊಡ ಇಲ್ಲವೇನ್ನ ಬಹುದು. ರಾಧ ನಗರ ಬೀಚ್ ಹಾಗೆ ಸುಂದರವೇನು ಇಲ್ಲ ಆದರೆ ಸಮಯ ಕಳೆಯಲು ಇದಕ್ಕಿಂತ ಪ್ರಶಾಂತ ಸ್ಥಳ ಮತ್ತೊಂದಿಲ್ಲ. ನಮ್ಮ ನಾರ್ಮಲ್ ರೌಟೀನ್ ಹಾಗೆ ಸಾಗರದ ಒಂದು ದಂಡೆಯ ಕಡೆಯಿಂದ ಮತ್ತೊಂದು ಕಡೆಗೆ  ವಾಕ್ ಮಾಡುತ್ತಾ ಸಾಗರ ತಂದು ಹಾಕಿದ ವಸ್ತುಗಳನ್ನು ಪರಿಶೀಲಿಸುತ್ತಾ, ಗಿಡ ಮರಗಳನ್ನು , ಪ್ರಾಣಿ ಪಕ್ಷಿಗಳನ್ನು ನೋಡುತ್ತಾ ಫೋಟೋ ಕ್ಲಿಕ್ ಮಾಡುತ್ತಾ ಬೀಚ್ನಲ್ಲೇ ಸೂರ್ಯಾಸ್ತದವರೆಗೂ ಸಮಯ ಕಳೆದೆವು. ಸೂರ್ಯಸ್ತವಾದಂತೆ ಹೋಟಲ್ಗೆ ಹಿಂದಿರುಗಿ ಅಂದಿನ ದಿನವನ್ನು ಮೆಲುಕು ಹಾಕುತ್ತಾ ನಾಳೆಯ ಸ್ಕೂಬ ಡೈವಿಂಗ್ ಬಗ್ಗೆ ಕನಸು ಕಾಣುತ್ತಾ ನಿದ್ರೆಗೆ ಜಾರಿ ಕೊಂಡೆವು.

ಸ್ಕೂಬಾ ಡೈವಿಂಗ್ :

ಬಾಲ್ಯದಲ್ಲಿ ಒಂದು ಮುತ್ತಿನ ಕಥೆ ಚಲನ ಚಿತ್ರ ನೋಡಿದ ನನಗೆ , ನಾನು ಹೀಗೆ ಒಮ್ಮೆಯಾದರೂ ಸಾಗರದ ಅಡಿಯನ್ನು ಮುಟ್ಟಿ ಒಂದು ಮುತ್ತನ್ನಾದರೂ ತರಬೇಕು ಅನ್ನುವ ಭಾರಿ ಕನಸು ಇತ್ತು. ಅದಕ್ಕೆ  ರೆಕ್ಕೆ ಪುಕ್ಕ ಕೊಟ್ಟು ನನ್ನ ಆಸೆಯನ್ನು ಪೊರೈಸಿದ್ದು ಸ್ಕೂಬಾ ಡೈವಿಂಗ್. ನೀರಿನ ಒಳಗೆ ಒಮ್ಮೆಯಾದರೂ ಮೀನಿನಂತೆ ನಾನು ಈಜಬೇಕು ಬೇಕು ಎಂದರೆ ಸ್ಕೂಬಾ ಡೈವಿಂಗ್ ಮಾಡಲೇ ಬೇಕು. ಹ್ಯಾವ್ ಲಾಕ್ ದ್ವೀಪ ಹವಳ ದಂಡೆಗಳಿಗೆ ಅಲ್ಲದೆ ಸ್ಕೂಬಾ ಡೈವಿಂಗಗೆ  ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿ ನುರಿತ ಸ್ಕೂಬಾ ಡೈವಿಂಗ್ ತಜ್ಞರು ಹಾಗೂ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಹಲವಾರು ಇವೆ , ೨೫೦೦ ರೂಪಾಯಿಯಿಂದ ಆರಂಭವಾಗುವ ಸ್ಕೂಬಾ ಡೈವಿಂಗ್ ೫೦೦೦ ರೂಪಾಯಿವರೆಗೂ ಇದೆ. ಸ್ಕೂಬಾ ಸರ್ಟಿಫಿಕೇಷನ್ ಕೋರ್ಸ್ಗಳು, ಟ್ರೈನಿಂಗ್ ಪ್ರೋಗ್ರಾಮ್ಮ್ಗಳು ಇಲ್ಲಿ ಸದಾ ನಡೆಯುತ್ತಲೆ ಇರುತ್ತವೇ. ಸ್ಕೂಬಾ ಡೈವಿಂಗ್ ಮಾಡಲು ಬೆಳಗ್ಗೆ ಸಾಗರದಲ್ಲಿ ಅಲೆಗಳು ಕಡಿಮೆ ಇರುವ ಹಾಗೂ ಬೆಳಕು ಚೆನ್ನಾಗಿರುವ ಸಮಯ ನೋಡಿ ಆರಂಭ ಮಾಡುತ್ತಾರೆ, ಹೆಚ್ಚಾಗಿ ಬೆಳಗ್ಗೆ ಪ್ರಶಸ್ತ ಕಾಲ. 

ಸ್ಕೂಬಾ ಡೈವಿಂಗ್

ನಾವು ಬೆಳಗ್ಗೆ ೭ ಗಂಟೆಗೆ ತಯಾರಾಗಿ, ಹೊರಟು ಸ್ಕೂಬಾ ಡೈವಿಂಗ್ ತರಬೇತಿ ಕೇಂದ್ರ ತಲುಪಿದೆವು. ಅಲ್ಲಿಗೆ ಹೋದಾಗ ಮೊದಲಿಗೆ ಒಂದು ಅರ್ಜಿ ಕೊಟ್ಟು ಎಲ್ಲ ವಿವರಗಳನ್ನು ಬರೆಯಲು ಹೇಳುತ್ತಾರೆ.ನಮಗೆ ನೀರು , ನಿರ್ಜನ ಪ್ರದೇಶ ಮತ್ತೆ ಯಾವುದೇ ವಸ್ತುಗಳನ್ನು ಕಂಡರೆ ಭಯ ಆಗುತ್ತದೆಯೇ ಎಂದು ಕೇಳುತ್ತಾರೆ.   ಹಾಗೆ ಏನೇ ಆದರೂ ನಾವೇ ಜವಾಬ್ದಾರರು ಎಂದು ಪತ್ರಕ್ಕೆ ಸಹಿ ಹಾಕಿಸುತ್ತಾರೆ.  ಇವೆಲ್ಲ ಮಾಹಿತಿ ಕೊಟ್ಟ ಮೇಲೆ ನಮಗೆ ಸ್ಕೂಬಾ ಡೈವಿಂಗ್ ಸಲಕರಣೆಯನ್ನು ಕೊಟ್ಟು ಸಾಗರದ ಹತ್ತಿರ ಕರೆದುಕೊಂಡು ಹೋಗಿ ತರಬೇತಿ ನೀಡುತ್ತಾರೆ. ನೀರಿನ ಒಳಗೆ ಏನಾದರೂ ತೊಂದರೆ ಆದರೆ ನಮಗೆ ಮಾತನಾಡಲು ಆಗುವುದಿಲ್ಲ ಆದ್ದರಿಂದ ವಿವಿಧ ರೀತಿಯ ಕೈ ಸನ್ನೆ ಮಾಡಿ ನಮ್ಮ ಮಾತನ್ನು ಸೂಚಿಸುವ ಬಗ್ಗೆ ಒಂದು ಹತ್ತು ನಿಮಿಷ ತರಬೇತಿ ಕೊಟ್ಟು, ಸುಮಾರು 40 ರಿಂದ 50 ಅಡಿ ಅಳವಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ನಮ್ಮನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಪ್ರತಿ ಒಬ್ಬರಿಗೆ ಒಬ್ಬ ತರಬೇತುದಾರನು ಇರುತ್ತಾನೆ. ಅವನು ನಮ್ಮನ್ನು ನೀರಿನ ಒಳಗೆ ಮುನ್ನಡೆಸುತ್ತಾನೆ. ಮೊವತ್ತು ನಿಮಿಷಗಳ ಈ ಅನುಭವ ನಿಜವಾಗಿಯೂ ಅನನ್ಯ.  ನೀರಿಯನಲ್ಲಿ ಜಲಚರನಾಗಿ,  ಜಲಚರಗಳನ್ನು ಕಾಣುತ್ತಾ   ಅವುಗಳ ನಿಜವಾದ ಮನೆಗಳನ್ನು ನೋಡುತ್ತಾ ಲಯನ್ ಫಿಶ್ , ಬಟರ್ ಫ್ಲೈ ಫಿಶ್  , ಕ್ಯಾಟ್ ಫಿಶ್ , ಟೈಗರ್ ಫಿಶ್, ಸೀ ಸ್ನೇಕ್ , ಸೀ ಉರ್ಚಿನ್ ಇನ್ನೂ ಸಾವಿರಾರು ಮಿನುಗಳನ್ನು ಹಾಗೂ ಫಿಂಗರ್ , ಬ್ರೈನ್ ಕೋರಲ್ಗಳನ್ನು ಗುರುತಿಸುತ್ತಾ 

ಕೋರಲ್ ಕಣಿವೆಯೊಳು ಸುತ್ತಾಡುತ್ತಾ ಇದ್ದರೆ ಸಮಯ ಕಳೆದಿದ್ದು ಗೊತ್ತೇ ಆಗುವುದಿಲ್ಲ. ಆರಂಭದ 5 ನಿಮಿಷ ಸ್ವಲ್ಪ ಅಂಜಿಕೆಯಾದರೆ ಆಮೇಲೆ ಎಲ್ಲವೂ ನಿರಾಳ , ಹೆಚ್ಚು ಹೆಚ್ಚು ಅಳಕ್ಕೆ ಇಳಿದಂತೆ ನೀರಿನ ಒತ್ತಡದಿಂದ ದೇಹದಲ್ಲಿಯೂ ಸಹ ಬದಲಾವಣೆಗಳು ಆಗುತ್ತವೆ. ಕೆಲವೊಮ್ಮೆ ಕಿವಿಯೊಳಗೆ ನೀರು ಸೇರಿಕೊಳ್ಳುತ್ತದೆ, ಕೆಲವೊಮ್ಮೆ ಕಣ್ಣಿನ ಗಾಜಿನ ಒಳಗೆ ನೀರು ತುಂಬುವುದು, ಕೆಲವೊಮ್ಮೆ ಗಾಳಿ ತಗೆದು ಕೊಳ್ಳುವ ಪೈಪ್ ಒಳಗೆ ನೀರು ನುಗ್ಗುವುದು ಸರ್ವೇ ಸಾಮಾನ್ಯ ಈ ರೀತಿಯ ಸಮಸ್ಯೆಗಳಿಗೆ ಅವರು ಮೊದಲೇ ತರಬೇತಿ ನೀಡಿದ್ದರಿಂದ ನಿರಾಳವಾಗಿ ನೀರಿನೊಳಗೆ ಈಜಬಹುದು. ಜೀವನದಲ್ಲಿ ಒಮ್ಮೆಯಾದರೂ ಸ್ಕೂಬಾ ಡೈವಿಂಗ್ ಮಾಡಲೇ ಬೇಕು , ಡೈವೆಗೆ ಹೋಗುವ ಮುನ್ನ ಹಲವಾರು ಇಫ್ ಎಲ್ಸ್ಗಳು ಕಾಡಿದರೂ ಒಮ್ಮೆ  ನೀರಿನ ಒಳಗೆ ಇಳಿದರೆ ಇನ್ನಷ್ಟು ಸಮಯ ಕಳೆಯಬೇಕು ಎಂದೆನಿಸುವುದು ಸಹಜ. ಅರ್ಧ ಗಂಟೆ ಸ್ಕೂಬಾ ಡೈವೆ ಮಾಡಿ ನೀರಿನ ಮೇಲ್ಭಾಗಕ್ಕೆ  ಬಂದಾಗ ಛೇ ಇನ್ನೂ ಸ್ವಲ್ಪ  ಡೈವ್ ಮಾಡಬೇಕಿತ್ತು ಅಂತ ಎಲ್ಲರಿಗೂ ಅನ್ನಿಸುತ್ತದೆ. 

ಹವಳದ ದಂಡೆಗಳನ್ನು ಹವಳದ ಹುಳುಗಳು ನಿರ್ಮಾಣ ಮಾಡಿದವು ಇವುಗಳನ್ನು ನಾವು ಪಾಲಿಪ್ ಗಳೆಂದು ಸಹ ಕರೆಯುತ್ತವೆ.  ಅಂಡಮಾನ್ ದ್ವೀಪದ ಸುತ್ತಮುತ್ತ ಹಲವಾರು ಹವಳ ದಂಡೆಗಳಿವೆ. ಹವಳದ ದಂಡೆಗಳನ್ನು ನೋಡಿದರೆ ಇವುಗಳು  ಮೊದಲಿಗೆ ಇವು ಕಲ್ಲುಗಳು  ಎನ್ನುವ ಭಾವನೆ ಮೂಡುತ್ತದೆ ಆದರೆ ಇವುಗಳನ್ನು ಹವಳದ ಹುಳುಗಳು ರಚನೆ ಮಾಡಿದವು ಎಂದರೆ ನಿಮಗೆ ಆಶ್ಚರ್ಯವಾಗುವುದು. ಕಪ್ಪೆ ಚಿಪ್ಪಿನ ಹಾಗೆ ಹವಳದ ಹುಳುಗಳು ತಮ್ಮ ಸುತ್ತ ಕವಚವನ್ನು ನಿರ್ಮಿಸಿಕೊಳ್ಳುತ್ತವೆ. ಹವಳದ ಹುಳು ಲಕ್ಷಾಂತರ ಮೊಟ್ಟೆಗಳನ್ನು ಇಡುತ್ತದೆ ಇವೆಲ್ಲವೂ ಲಾರ್ವ ಹಂತದಲ್ಲಿದ್ದಾಗ ಮತ್ತೆ ಅದೇ ಕವಚಗಳಿಗೆ ಅಂಟಿಕೊಂಡು ತಮ್ಮ ಸುತ್ತ ಮತ್ತೊಂದು  ಪದರವನ್ನು ನಿರ್ಮಾಣ ಮಾಡುತ್ತವೆ. ಹೀಗೆ ಒಂದರ ಮೇಲೆ ಒಂದರಂತೆ ಹವಳದ ದಂಡೆಗಳು ನಿರ್ಮಾಣವಾಗುತ್ತವೆ. ಇವು ಸಾಗರದ ನೀರಿನ ಮೇಲ್ಭಾಗದವರೆಗೂ ಬೆಳೆಯುತ್ತವೆ. ಸ್ಕೂಬ ಡೈವಿಂಗ್ ಇಲ್ಲವೇ ಸ್ನೋರ್ಕೆಲ್ಲಿಂಗ್ ಮಾಡಿದಾಗ ಇವುಗಳನ್ನು ಬಹಳ ಹತ್ತಿರದಿಂದ ನೋಡಬಹುದು. ನೀರಿನ ಒಳಗೆ ಕೋರಲ್ ಗಳನ್ನು ನೋಡಿದರೆ ಯಾವುದು ಪರ್ವತದ ಬಂಡೆಗಳನ್ನು ನೋಡಿದ ಹಾಗೆ ಅನಿಸುತ್ತದೆ. ಆದರೂ ಬ್ರೈನ್ , ಫಿಂಗರ್ ಕೋರಲ್ ಗಳು ನೋಡಲು ಆಕರ್ಷಕ. 
ಮೇಲೆ ಎಷ್ಟೇ ಅಲೆಗಳ ರುದ್ರ ನರ್ತನವಿದ್ದರು ಸಾಗರದ ಒಡಲು ಮಾತ್ರ ಪ್ರಶಾಂತವಾಗಿರುತ್ತದೆ  ಎನ್ನುವುದನ್ನು ಸ್ಕೂಬಾ ಡೈವಿಂಗ್ ಅರಿಕೆ ಮಾಡಿಕೊಡುತ್ತದೆ.  ಕೊನೆಗೂ ಬಹುದಿನದ ಕನಸೊಂದು ನನಸಾಯಿತು ಎನ್ನುವ ಖುಷಿಯೊಂದಿಗೆ ಹೋಟೆಲ್ ರೂಮಿಗೆ ಹಿಂದಿರುಗಿ ನಮ್ಮ ಸಾಮಾನು ಸರಂಜಾಮುಗಳ ಪ್ಯಾಕ್ ಮಾಡಿ.  ಹೋಟೆಲ್ ರೂಮನ್ನು  ಚೆಕ್ ಔಟ್ ಮಾಡಿ ಪ್ರೈವೇಟ್ ಬೀಚ್ ಕಡೆ ನಡೆದೆ. 

ಮುಂದಿನ ವಾರ : ಸಾಗರದಲ್ಲೊಂದು ರುದ್ರ ನರ್ತನ