Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೩ – ಉಲಕಮುತ್ತು – ಬೊಂಬಿನ ತಾಳಕ್ಕೆ ನಲಿದಂತೆ!!!

ನಾವು ಸ್ಕೂಬಾಗೆ ಹೋಗ ಬಂದ್ಮೇಲೆ ಸುಮ್ಮನೆ ದೋಣಿ ಹತ್ತ್ಕೊಂಡು ಜನ ಹೋಗುತ್ತಾನೆ ಇದ್ದರೂ ಆ ಕಡೆಯಿಂದ ಸ್ಕೂಬಾ ಮುಗಿಸಿ ಕೊಂಡು ಬಂದವರು ಯಾರು ಇರಲಿಲ್ಲ. ಹಾಗಾಗಿ ಜಾನಪದ ಕಾರ್ಯಕ್ರಮ ಒಂದು ಗಂಟೆ ಮುಂದೊಡಿದ್ದರು. ಕಡೆಗೆ ಸ್ಕೂಬಾಗೆ ಹೋದ ೬೦ರ ಮರಳಿ ಅರಳಿದವರು  ನೀರಿಗಿಳಿದ ಮೇಲೆ ಸಮಸ್ಯೆ ಎದುರಿಸಿ ಅದನ್ನು ಸ್ಕೂಬಾ ತರಬೇತುದಾರರು ಬಗೆಹರಿಸುವುದರಲ್ಲೇ ಹರಸಾಹಸ ಪಟ್ಟು ಸಮಯ ಕಳೆದಿದ್ದರು. ಅವರಲ್ಲಿ ಕೆಲವರ ಸಮಸ್ಯೆ ಬಗೆ ಹರಿದು ಡೈವ್ ಮಾಡಿದರೆ ಮತ್ತೆ ಕೆಲವರ ಸಮಯಹರಣವಾಗಿ ಉಳಿದ ಡೈವಿಂಗ್ ಆಕಾಂಕ್ಷಿಗಳಿಗೆ ಪಿತ್ತ ನೆತ್ತಿಗೇರಿತ್ತು. ಅತ್ತ ಸೂರ್ಯ ಜಾರುತ್ತಿದ್ದ ಹಾಗೂ ನೀರಿನ ಒಳಗಿನ ಪ್ರಪಂಚದ ವೀಕ್ಷಣೆಗೆ ಸಮಯವೂ ಜಾರುತ್ತಿತ್ತು. ಹಾಗಾಗಿ ಇತ್ತೀಚೆಗೆ ಹೋದ ದೋಣಿಯವರಿಗೆ ಸ್ಕೂಬಾ ಸಾಧ್ಯವಿಲ್ಲ ಎಂದು ನಿರಾಕರಿಸಿ ನಿಮ್ಮ ಹಣ ವಾಪಾಸ್ ಮಾಡುತ್ತೇವೆ ಎಂಬ ಮಾಹಿತಿ ನೀಡಿದ್ದರು. ಹಾಗಾಗಿ ಮೊದಲ ಡೈವ್ ಆಸೆಯಲ್ಲಿದ್ದ ಕೆಲವರ ಕೋಪದ ಲಹರಿ ಶಿವನು ಮೂರನೇ ಕಣ್ಣು ಬಿಟ್ಟ ಸಂದರ್ಭವನ್ನು ಮೀರಿಸುತ್ತಿತ್ತು. ಕಡೆಗೆ ನಮ್ಮ ಟೂರ್ ಮ್ಯಾನೇಜರ್  ಯಾಸಿರ್ ಅರಾಫತ್ ಮಧ್ಯಸ್ಥಿಕೆಯಿಂದ  ಲಕ್ಷದ್ವೀಪ ಸಮುದ್ರದಲ್ಲಿ ಆಗಬಹುದಾದ ದೊಡ್ಡ ಯುದ್ದವನ್ನು ಸಂಧಾನದ ಮೂಲಕ ಬಗೆ ಹರಿಸಿ ಉಳಿದ ಸ್ಕೂಬಾ   ಡೈವ್ ಆಕಾಂಕ್ಷಿಗಳನ್ನು ಬೇರೆ ಡೈವ್ ಸೆಂಟರ್ ಗೆ ಕರೆದೊಯ್ದು ಡೈವ್ ಮಾಡಿಸಿಕೊಂಡು ಬರಲಾಗುವುದು ಎಂಬ ಮಾಹಿತಿ ತಲುಪಿತು. ಹಾಗಾಗಿ ಜಾನಪದ ಕಾರ್ಯಕ್ರಮವನ್ನು ಆರಂಭಿಸಿ ಎಂಬ ಮಾಹಿತಿಯು ರವಾನೆಯಾಗುತ್ತಿದ್ದಂತೆ ನಾವು ಕಾರ್ಯಕ್ರಮ ನಡೆಯುವ ಪೆಂಡಾಲ್ ಕಡೆಗೆ  ಹೆಜ್ಜೆ ಹಾಕಿದೆವು. ಸುಮಾರು ೧೧ ಗಂಟೆಗೆ   ೮ ಜನರನ್ನು ಹೊತ್ತು  ಡೈವಿಂಗಾಗಿ ಹೋದ ದೋಣಿ ೪ ಗಂಟೆಗೆ ಹಿಂತಿರುಗಿತು ಎಂದರೆ ನಿಮಗೆ ಅರ್ಥವಾಗಬೇಕು ಹೇಗಿತ್ತು ಮರಳಿ ಅರಳಿದವರ ಡೈವ್ ಎಂದು.  

ಉಲಕ್ಕಮುತ್ತು..

ಈ ನೃತ್ಯ ಶೈಲಿಯನ್ನು ‘ಪೋಲ್ ಸ್ಟ್ರೈಕಿಂಗ್’ ನೃತ್ಯ ಎಂದೂ ಕರೆಯುತ್ತಾರೆ. ಇದನ್ನು ನೃತ್ಯ ರೂಪಕ್ಕಿಂತ ದೈಹಿಕ ವ್ಯಾಯಾಮ ಎಂದು ಹೇಳಬಹುದು. ಈ ನೃತ್ಯದಲ್ಲಿ ತೊಡಗಿಸಿಕೊಂಡಿರುವ ನರ್ತಕರು ನುರಿತವರು ಮತ್ತು ಅವರ ಕೈ ಚಲನೆಗಳಲ್ಲಿ ನಿಖರವಾಗಿರುತ್ತದೆ. ಮೊದಲಿಗೆ ಬೊಂಬಿನ ಮಧ್ಯದಲ್ಲಿರುವ  ನರ್ತಕನು ಬೊಂಬಿನ ಚಲನೆ ಆಧರಿಸಿ ಬೊಂಬಿನ ಕಂಬಕ್ಕೆ ತಾಗದಂತೆ ತನ್ನ ಪಾದ ಚಲನೆ ಮಾಡಬೇಕು. ಈ ಬೊಂಬುಗಳು ಒಂದಕ್ಕೊಂದು ಒಟ್ಟಿಗೆ ಬಡಿದಾಗ ಉಂಟಾಗುವ ಶಬ್ದವೇ ಈ ನೃತ್ಯಕ್ಕೆ ಹಿನ್ನಲೆಯ ಸಂಗೀತ ಇದಲ್ಲದೆ  ಭಜನೆಯ ಗಂಟೆಯ ಲಹರಿ ಕೂಡ ಸೇರಿರುತ್ತದೆ. ಇದಕ್ಕೆ ತಕ್ಕಂತೆ ನರ್ತಕನು ಚಪ್ಪಾಳೆ ಹೊಡೆಯುತ್ತ  ಹೊ ಕಾರ ಹಾಡಿ ಕುಣಿಯಬೇಕು. 

ನರ್ತಕರು ಬಿದಿರಿನ ಕಂಬಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಪಾದ ಚಲನೆಯ ದೋಷಕ್ಕೆ  ಅವಕಾಶವಿಲ್ಲ. ಏಕೆಂದರೆ ಇದು ಬಿದಿರಿನ ಕಂಬಗಳ  ನಡುವೆ ವೇಗವಾಗಿ ಪಾದದ ಚಲನೆಯನ್ನು ಮಾಡುವ ನೃತ್ಯಗಾರರಿಗೆ ಗಾಯವಾಗಬಹುದು. ಈ ನೃತ್ಯ ಪ್ರಕಾರವು ಕೇವಲ ಪುರುಷ ಆಧಾರಿತವಾಗಿದೆ. ‘ಉಲಕ’ ಎಂದರೆ ಉದ್ದವಾದ ಬಿದಿರಿನ ಕಂಬ ಆದ್ದರಿಂದ ಕಲೆಗೆ ಹೆಸರು ಬಂದಿದೆ. ಇದನ್ನು ಎರಡು ಶೈಲಿಗಳಲ್ಲಿ ನಡೆಸಲಾಗುತ್ತದೆ.  ಒಂದು ಸುತ್ತಿನಲ್ಲಿ ಮತ್ತು ಇನ್ನೊಂದು ನರ್ತಕರು  ಸುಸ್ತಾಗುವರೆಗೂ ಕುಣಿಯಬಹುದು  ಹಾಗಾಗಿ ಅನುಭವಿ ವ್ಯಕ್ತಿಗಳು ಮಾತ್ರ ಈ ನೃತ್ಯವನ್ನು ಮಾಡಬಹುದು. ಲಕ್ಷದ್ವೀಪ ದ್ವೀಪದಲ್ಲಿ ಕೇವಲ ತೆಂಗು ಬಿಟ್ಟರೆ ಬೇರಾವುದೂ ಕಾಣಸಿಗುವುದಿಲ್ಲ ಹಾಗಾಗಿ  ಉಲಕಮುತ್ತು ಕಲೆಗೆ ಬಿದಿರನ್ನು ಕೇರಳದಿಂದ ರವಾನೆಯಾಗುತ್ತದೆ.  

                                                 

ಲಕ್ಷದ್ವೀಪ ಕೇವಲ ದ್ವೀಪವಲ್ಲ ಅದೊಂದು ಜಾನಪದ ಲೋಕ ಕೂಡ,  ಲಕ್ಷದ್ವೀಪದಲ್ಲಿ ಪ್ರದರ್ಶಿಸಲಾಗುವ  ವಿವಿಧ ಜಾನಪದ ನೃತ್ಯಗಳು ಕೋಲ್ಕಲಿ, ಪರಿಚ್ಚಾಕಲಿ, ಲವ, ದಂಡಿ, ಭಂಡಿಯಾ, ಫುಲಿ, ಅಟ್ಟಂ, ಉಲಕ್ಕಮುತ್ತು, ಓಪಣ್ಣ, ಅಟ್ಟಂ, ಇತ್ಯಾದಿ. ಈ ಪ್ರದೇಶದ ಐತಿಹಾಸಿಕ ಹಿನ್ನೆಲೆಯಿಂದಾಗಿ ಹೆಚ್ಚಿನವು ನೃತ್ಯ ಪ್ರಕಾರಗಳು ಕೇರಳ ಅಥವಾ ಇಸ್ಲಾಮಿಕ್ ಸಂಸ್ಕೃತಿಯಿಂದ ಪ್ರೇರಿತವಾಗಿವೆ. ಈ ಕಲಾ ಪ್ರಕಾರಗಳನ್ನು ಸಾಮಾನ್ಯವಾಗಿ ಜನ್ಮ, ಮದುವೆ ಮತ್ತು ಹಬ್ಬಗಳ ಶುಭ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. 

ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಜಾನಪದ ಕಲೆಗಳ ಪರಿಚಯ ನೀಡಲು ಪ್ರವಾಸ ಆಯೋಜಿಸುವ ಸಂಸ್ಥೆಗಳು ಒಂದೊಂದು ದ್ವೀಪದಲ್ಲಿ ಒಂದೊಂದು ಪ್ರಕಾರದ ನೃತ್ಯಗಳನ್ನು  ಏರ್ಪಡಿಸುವ ಸಂಪ್ರದಾಯ ಆಚರಣೆಯಲ್ಲಿದೆ. 

ಈ ನೃತ್ಯದಲ್ಲಿ ನನ್ನದು ಕೈ ನೋಡುಲಿ  ಎಂದು ಪ್ರವಾಸಿಗರು ತಾವು ತಮ್ಮ ಪಾದ ಚಲನೆ ತೋರಿಸಿ  ನೃತ್ಯದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲಾವಿದರು ಸಹ ಕಲ್ಪಿಸಿ ಆಮಂತ್ರಿಸುತ್ತಾರೆ. ಪ್ರವಾಸಿಗರು ಬೊಂಬಿನ ಮಧ್ಯ ನೃತ್ಯ ಮಾಡುವಾಗ ಬೊಂಬು ಹಿಡಿದವರು ತಸು ಮೆಲ್ಲಗೆ ಕಂಬಗಳ ಚಲನೆ ಮಾಡುತ್ತಾರೆ ಹಾಗಾಗಿ ಖುಷಿಗಾಗಿ ನಾವು ಒಂದು ಈ ನೃತ್ಯಕ್ಕೆ ಒಂದು ಹೆಜ್ಜೆ ಹಾಕಿದೆವು.