Uncategorized

ಲಕ್ಷ ದ್ವೀಪಗಳ ಮಹಾ ಯಾನ – ಅಗಟ್ಟಿ ದ್ವೀಪದ ಅಂಗಳದಲ್ಲಿ ..೯

ಮಿನಿಕಾಯ್ ದ್ವೀಪದ  ಜೆಟ್ಟಿಯಿಂದ ಹೊರಟ  ದೋಣಿ ನಿಧಾನವಾಗಿ  ಮಿನಿಕಾಯ್ ಲಾಗೊನ್  ಅನ್ನು ಬೇಧಿಸಿ ಮುಂದೆ ಸಾಗುತ್ತಿತ್ತು. ಆಗಸದಲ್ಲಿ ಅದಾಗಲೇ ಮೂಡಿದ ಪೂರ್ಣ ಚಂದಿರ ಶರಧಿಯನ್ನು ಕಂಡು ತನ್ನ ಗುರುತ್ವ ಬಳಸಿ  ಸಾಗರದಲ್ಲಿ ದೊಡ್ಡ ಗಾತ್ರದ ಅಲೆಗಳನ್ನು ಎಬ್ಬಿಸಿ  ಪ್ರೀತಿಯ ಅಪ್ಪುಗೆಗೆ  ಕಾತರನಾಗಿದ್ದ. ದೋಣಿ ಲಾಗೊನ್ ಪರಿಧಿಯನ್ನು ದಾಟಿದಂತೆ ಹುಣ್ಣಿಮೆಯ ಚಂದಿರನ ಕಂಡ ಶರಧಿ ಹುಚ್ಚೆದ್ದು ನರ್ತಿಸತೊಡಗಿದ. 

ಮೊದಲ ಬಾರಿಗೆ ಸಾಗರದ ನರ್ತನಕ್ಕೆ ಸಿಕ್ಕ ದೋಣಿ ಒಮ್ಮೆಲೇ ಮೇಲಿನಿಂದ ಏರಿ ಕೆಳಗಿಳಿಯಿತು,  ‘ಓಹ್’ ಎಂಬ ಝೇಂಕಾರವೂ ಆರ್ತನಾದವೊ ದೋಣಿಯಲ್ಲಿ ಮೊದಲ ಬಾರಿಗೆ ಮಾರ್ದನಿಸಿತು, ಕೆಲವರಿಗೆ ಹೃದಯ ಬಡಿತ ಕ್ಷಣ ಮಾತ್ರಕ್ಕೆ ನಿಂತಂತೆ, ಮತ್ತೊಬ್ಬರಿಗೆ  ಶ್ವಾಸವೇ ಬಿಗಿ ಹಿಡಿದಂತೆ,  ಮತ್ತೆ ಕೆಲವರಿಗೆ ಹೊಟ್ಟೆ ತೊಳಸಿದಂತೆ ಭಾಸವಾಗಿ ದೇವಾ ಮೊದಲು ಈ ದೋಣಿಯನ್ನು ನಾವೆಯ ಬಳಿ ಬಿಡು ಎಂದು ಪ್ರಾರ್ಥಿಸಿದರೆ, ಕೆಲವರು ಈ ಅದ್ಭುತ  ಅಭೂತಪೂರ್ವ ಅನುಪಮ ಅನುಭವದಲ್ಲಿ ಲೀನರಾಗಿ ದೋಣಿಯ ಅಂಚನ್ನು ಬಿಗಿಯಾಗಿ ಹಿಡಿದು ಆಸ್ವಾದಿಸುತ್ತಿದ್ದರು.

ಇವೆಲ್ಲ ಅನುಭವಗಳ ನಡುವೆ ನಮ್ಮ ನೌಕೆ ದೊರದಲ್ಲಿ ಕಾಣುತ್ತಿತ್ತು, ನೌಕೆ ಕಾಣುತ್ತಿದ್ದಂತೆ  ಬೆಳಗ್ಗೆ ನೌಕೆ ಬಿಡುವ  ಮುನ್ನ ಹುಟ್ಟಿದ್ದ ಅನುಮಾನ ಮತ್ತೆ ಕಾಡ ತೊಡಗಿತು ಅದೇ  ‘ ನೌಕೆಯಲ್ಲಿ ಬೀಗವಿಲ್ಲದ ಕ್ಯಾಬಿನ್ ನಲ್ಲಿದ್ದ ನಮ್ಮ ಲಗೇಜುಗಳು ಕತೆ ‘ ದೋಣಿ ಯಾವಾಗ ಹಡಗು ತಲುಪುತ್ತದೆಯೂ ಎಂದು ತನ್ನ ತಾನಾಗಿಯೇ ಮನದಲ್ಲೇ ಪಠನೆ ಆರಂಭವಾಗಿತ್ತು. ಮೋಟಾರ್ ದೋಣಿಯಿಂದ ನೌಕೆಗೆ ಹಾರುತ್ತಿದಂತೆಯೇ ಮೊದಲು ಕ್ಯಾಬಿನ್ ಕಡೆಗೆ ಓಡಿದೆ, ನೌಕೆಯ ಸಿಬ್ಬಂದಿಯು ಕ್ಯಾಬಿನ್ ಸ್ವಚ್ಛ ಮಾಡಿದ್ದು ಕಂಡು ಬಂದಿತು, ತಕ್ಷಣ ನಮ್ಮ ಸಕಲ ಪರಿಕರಗಳು ಇವೆಯೇ ಎಂದು ಪರೀಕ್ಷಿಸಿ ನಿಟ್ಟುಸಿರುಬಿಟ್ಟೆವು. ಮೊದಲ ದಿನ ತಸು ತ್ರಾಸಾದರು ಏನೂ ಹೊಸತನವಿತ್ತು. ಹಾಗೆಯೇ  ಅಂದಿನ ಊಟ ಮುಗಿಸಿ, ಹುಣ್ಣಿಮೆಯ ಚಂದಿರನ ದರ್ಶನ ಮಾಡಿ,  ನಾವು ನಾಳೆ  ಅಗಟ್ಟಿ ದ್ವೀಪಕ್ಕೆ ಹೋಗಬೇಕಾದ್ದರಿಂದ ಬೇಗ ತಯಾರಾಗಬೇಕಿತ್ತು ಹಾಗಾಗಿ ಸೀದಾ ಕ್ಯಾಬಿನ್ಗೆ ತೆರಳಿ ನಿದ್ರೆಗೆ ಜಾರಿದೆವು. 

ಕಣ್ಣು ಮುಚ್ಚುವ ಮೊದಲು  ಬುರ್ ಸುರ್ರೂ …. ಎಂದು ಸದ್ದು ಮಾಡುತ್ತಿದ್ದ ನೌಕೆ  ಯಾಕೋ ಸದ್ದು ಮಾಡದೇ ಅಗಟ್ಟಿ ದ್ವೀಪದ  ಸನಿಹಕ್ಕೆ ಬಂದೊಡೊನೆ , ಅಗಟ್ಟಿಯ ಸೌಂದರ್ಯಕ್ಕೆ ಮಾರು ಹೋಗಿ ಸ್ಥಬ್ಧನಾಗಿದ್ದ, ಅದಾಗಲೇ ಕ್ಯಾಬಿನ್ ಹೊರಗೆ  ನೌಕೆಯ ಸಹ ಪ್ರಯಾಣಿಕರ ಓಡಾಟದ ಸಪ್ಪಳ ಕೇಳಿಸುತ್ತಿತ್ತು. ರಾತ್ರಿಯೆಲ್ಲ ಸದ್ದು ಮಾಡುತ್ತಿದ್ದ ನೌಕೆಯು ಕಣ್ಣು ಮುಚ್ಚಿ ಕಣ್ಣು ಮತ್ತೆ ಕಣ್ಣು ಬಿಡುವ ಸಮಯದೊಳಗೆ  ಅಗಟ್ಟಿ ದ್ವೀಪದ ಸಮೀಪ ನಿಂತಿತ್ತು. ನಾವು ನಿತ್ಯ ಕರ್ಮ ಮುಗಿಸಿ ಡಿಸ್ ಎಂಬಾರ್ಕಷನ್  ಬಾಗಿಲ ಕಡೆಗೆ ನಡೆದೆವು. ಅದಾಗಲೇ ಬಹುತೇಕ ದ್ವೀಪವಾಸಿಗಳನ್ನು ಮೋಟಾರ್ ದೋಣಿಯ ಮೂಲಕ ರವಾನೆ ಮಾಡಲಾಗಿತ್ತು ಹಾಗಾಗಿ ಅಲ್ಲಿ ಉಳಿದಿದ್ದು ಕೇವಲ ಪ್ರವಾಸಿಗರು ಮಾತ್ರ. ನೌಕೆಯನ್ನು ತಸು ಆಳವಾದ ಸಾಗರದಲ್ಲಿ ಅದಾಗಲೇ ಲಂಗೂರು ಹಾಕಿ ನಿಲ್ಲಿಸಿದ್ದರು ಮತ್ತು ನೌಕೆಯಿಂದ ದ್ವೀಪವು ಸುಮಾರು ಒಂದು ಕಿಲೋಮೀಟರು ದೊರದಲ್ಲಿತ್ತು. ನಮ್ಮನ್ನೆಲ್ಲಾ ಒಂದೊಂದೇ  ಮೋಟಾರ್ ದೋಣಿಯಲ್ಲಿ ನೌಕೆಯಿಂದ  ಅಗಟ್ಟಿ ದ್ವೀಪಕ್ಕೆ ಬಿಳ್ಕೊಟ್ಟರು. 

ನಾವು ಇಂದು ಭೇಟಿ ನೀಡುವ ಅಗಟ್ಟಿ ಬಗ್ಗೆ ನಾಲ್ಕು ಮಾತು ಹೇಳಲೇ ಬೇಕು, ಅಗಟ್ಟಿ  ದ್ವೀಪವು  ಸುಮಾರು ೬ ಕಿಲೋಮೀಟರು ಉದ್ದವಿದೆ. ಒಂದು ತುದಿಯಲ್ಲಿ ೧೦೦ ಮೀಟರ್ ಇಂದ ಹಿಡಿದು ಮತ್ತೊಂದು ತುದಿಯಲ್ಲಿ ೧ ಕಿಲೋ ಮೀಟರ್ ಅಗಲವಿದೆ ಅಷ್ಟೇ. ನೀವು ನೂರು ಮೀಟರ್ ಅಗಲವಿರುವ ಸ್ಥಳದಲ್ಲಿ ಕುಳಿತರೆ ಸೂರ್ಯೋದಯ ಹಾಗು ಸೂರ್ಯಾಸ್ತವನ್ನು ಕುಳಿತ ಸ್ಥಳದಲ್ಲಿಯೇ ಮಿಸುಕಾಡದೆ ಕಣ್ಣು ತುಂಬಿಕೊಳ್ಳಬಹುದು ಎಂದು ಕೇಳಿದರೆ ನೀವು ಆಶ್ಚರ್ಯ ಪಡಬಹುದು ಅಲ್ಲವೆ. ನಾವು  ಕೊಚ್ಚಿಯಿಂದ   ಸಮುದ್ರ ಮಾರ್ಗವಾಗಿ ನೌಕೆಯ ಮೂಲಕ ಲಕ್ಷದ್ವೀಪನ್ನು ತಲುಪಲು ಸುಮಾರು ೨೦ ಗಂಟೆಯಾದರೂ ಬೇಕು ಆದರೆ  ಆಕಾಶ ಮಾರ್ಗವಾಗಿ ಲಕ್ಷದ್ವೀಪ ತಲುಪಲು ಸುಮಾರು ಒಂದುವರೆ ತಾಸು ಸಾಕು. ಆಕಾಶ ಮಾರ್ಗವಾಗಿ ಲಕ್ಷದ್ವೀಪ ತಲುಪಲು ಇರುವ ಏಕೈಕ  ವಿಮಾನ ನಿಲ್ದಾಣ ಅಗಟ್ಟಿ ದ್ವೀಪದಲ್ಲಿದೆ.  ಇಲ್ಲಿನ ವಾತಾವರಣವು  ಹೆಚ್ಚು ಕಡಿಮೆ ಕೇರಳದ ಪರಿಸರವನ್ನು ಹೋಲುತ್ತದೆ. ಇಲ್ಲಿ ಇಸ್ಲಾಂ ಧರ್ಮಿಯರು ಬಹುಸಂಖ್ಯಾತರಿದ್ದು, ತೆಂಗಿನ ನಾರು, ಮೀನುಗಾರಿಗೆಯು ಪ್ರಮುಖ ಉದ್ಯೋಗವಾಗಿದೆ.  

ಸುಮಾರು ಎಂಟು ವರೆ ಗಂಟೆಗಾಗಲೇ ನಾವು ಅಗಟ್ಟಿ ದ್ವೀಪದ ಅಗಟ್ಟಿ ಐಲ್ಯಾಂಡ್ ರೆಸಾರ್ಟ್ಗೆ ನಾವು ಕಾಲಿಟ್ಟಿದ್ದೆವು. ದ್ವೀಪದಲ್ಲಿ ಕಳೆಯಲು ಬಹಳ ಸಮಯ ಸಿಕ್ಕಿದ್ದು ಸ್ವರ್ಗಕ್ಕೆ  ಗೇಣು ದೂರವೆಂಬ ಭಾವನೆ ಮೂಡಿತು. 

Leave a comment