ವಿಸ್ಮಯ ಜಗತ್ತು

ವಿಸ್ಮಯ ಜಗತ್ತು – ೧೧ – ನಂಬಿದರೆ ನಂಬಿ ಬಿಟ್ಟರೆ ಬಿಡಿ

nambidare nambiನಾವು ಬದುಕುತ್ತಿರುವುದು ಭೂತ, ವರ್ತಮಾನ ಮತ್ತು ಭವಿಷ್ಯದ ಮೇಲೆ ನಂಬಿಕೆಯಿಟ್ಟು. ಆದರೆ ಅ ನಂಬಿಕೆಗಳು ಧಾರ್ಮಿಕ ಶ್ರದ್ಧೆಗಳಾಗುತ್ತವೆ ಆದರೆ ಕೆಲವೊಮ್ಮೆ ಅಚಾರವಾಗಿ ಅನಾಚಾರವಾಗುವ ಸಂಭವವೂ ಸಹ ಇದೆ. ಕೆಲವೊಂದು ಅರ್ಥವಿಲ್ಲದ ಆಚರಣೆಗಳನ್ನು ನಾವು ಮೂಢನಂಬಿಕೆ ಎನ್ನಬಹುದು. ಕೆಲವೊಂದು ನಂಬಿಕೆಗಳು ಇನ್ನೊಂದು ಕಾಲದಲ್ಲಿ ಸುಳ್ಳೆಂದು ಸಾಬೀತಾಗುತ್ತದೆ. ಈ ನಂಬಿಕೆಗಳು ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗೂ ಅನ್ವಯವಾಗುತ್ತವೆ. ಕೆಲವೊಂದು ಪ್ರಸಂಗಗಳನ್ನು ನಿಮ್ಮ ಮುಂದೆ ನೀಡುತ್ತೇನೆ ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ನೀವೇ ತಿರ್ಮಾನಿಸಿ.

ಮನೆ ಬಿಟ್ಟು ಹೊರಗೆ ಯಾವುದೂ ಕೆಲಸಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಬೆಕ್ಕು ಅಡ್ಡವಾಗಿ ಹೋದರೆ ಹೋದ ಕೆಲಸವಾಗುವುದಿಲ್ಲ ಅಪಶಕುನವೆಂದು ನಾವು ನಂಬುತ್ತೇವೆ. ಅದಕ್ಕೆ ಪರಿಹಾರವಾಗಿ ಸ್ವಲ್ಪ ಸಮಯ ನಿಂತು ಮುಂದೆ ಕಾರ್ಯ ನಿಮಿತ್ತ ಹೋಗುತ್ತೇವೆ. ಕಾರ್ಯ ಸಾಧನೆಯಾದರೆ ಸರಿ ಇಲ್ಲವೆಂದರೆ ಬೆಕ್ಕಿನ ಮೇಲೆ ಅಪವಾದ ವಹಿಸುತ್ತೇವೆ. ಆದರೆ ವಿದೇಶದಲ್ಲಿ ಕಪ್ಪು ಬೆಕ್ಕು ಅಡ್ಡ ಹೋದರೆ ಅಪಶಕುನ. ಬೇರೆ ಬಣ್ಣದ ಬೆಕ್ಕಿಗೆ ರಿಯಾಯಿತಿಯಿದೆ.

ಮನೆಯಲ್ಲಿದ್ದ ತರಲೆ ಬೆಕ್ಕಿನ ಕಾಟ ತಡೆಯಲಾರದೆ ಮನೆಯ ಯಜಮಾನ ತಿಥಿಯ ದಿನ ಬೆಕ್ಕನ್ನು ಕಂಬಕ್ಕೆ ಕಟ್ಟಿ ಉಳಿದ ಕಾರ್ಯಗಳನ್ನು ನಿರ್ವಹಿಸುತ್ತಿದ್ದ. ಮುಂದೆ ಅವನ ಮನೆಯಲ್ಲಿ ಅವನ ಮಕ್ಕಳು ಸಹ ಬೆಕ್ಕನ್ನು ಕಂಬಕ್ಕೆ ಕಟ್ಟಿ ತಿಥಿ ಕಾರ್ಯ ಮುಂದುವರೆಸಿದರು. ಮಕ್ಕಳಿಗೆ ತಿಥಿ ಸಮಯದಲ್ಲಿ ಬೆಕ್ಕನ್ನು ಕಂಬಕ್ಕೆ ಕಟ್ಟುವುದು ಸಂಪ್ರದಾಯವೆಂದು ಮುಂದುವರೆಸಿದರು. ಹೇಗಿದೆ ಈ ನಂಬಿಕೆ.

ನಾವು ಕೆಲಸ ಮಾಡುತ್ತಿರುವಾಗ ಜರಿ ಏನಾದರೂ ಕಂಡರೆ ನಿಮಗೆ ಸ್ವಲ್ಪ ಸಮಯದಲ್ಲೇ ಸಿರಿ ಸಿಗುತ್ತದೆ ಎನ್ನುವ ಮತ್ತೊಂದು ನಂಬಿಕೆ ಇದೆ. ಇದಲ್ಲದೆ ನಿಮ್ಮ ಮನೆಯ ಸುತ್ತಮುತ್ತ ಹಾವುಗಳು ವಾಸ್ತವ್ಯ ಹೊಡಿ ನಿಮ್ಮ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದರೆ ನಿಮ್ಮ ಮನೆಯಲ್ಲಿ ಗುಪ್ತ ನಿಧಿಯೆಂಬ ಪ್ರತೀತಿ. ನಮ್ಮ ಮನೆಗೂ ಸಹ ಉರಗಗಳು ಭೇಟಿ ನೀಡುತ್ತವೆ ಆದರೆ ನಿಧಿಯೇಲ್ಲಿದೆ ಎಂದು ಇಂದಿಗೂ ಸಹ ತೋರಿಸಿಲ್ಲ.

ಕೋಗಿಲೆಯ ಮೊದಲ ಕೊಗು ವಸಂತದ ಸೂಚನೆಯನ್ನು ನೀಡುತ್ತದೆ. ಆದರೆ ಬ್ರಿಟನ್ನಲ್ಲಿ ಕೋಗಿಲೆಯ ಮೊದಲ ಕೂಗು ಏಪ್ರಿಲ್ ೬ರ ಮುಂಚೆ ಕೇಳಿದಲ್ಲಿ ಅದು ಅಪಶಕುನವಂತೆ. ಏಪ್ರಿಲ್ ೨೮ರ ಮೇಲೆ ಕೇಳಿದರೆ ಅದು ಶುಭಶಕುನವೆಂಬ ನಂಬಿಕೆಯಿದೆ.

ಒಂದು ದಿನ ನಮ್ಮೊರಿನ ದೇವಣ್ಣನ ಮನೆಯ ಮುಂದೆ ಜನರು ಸೇರಿದ್ದರು. ದೇವಣ್ಣನಿಗೆ ಅಗಲಿ ಅವನ ಮನೆಯವರಿಗೆ ಅಗಲಿ ಏನು ಆಗಿರಲಿಲ್ಲ. ಅಂದು ದೇವಣ್ಣ ನಾಯಿಯ ಹಾಗೆ ಕಾಣುವ ನರಿಯನ್ನು ತನ್ನ ಮನೆಯ ಮುಂದಿನ ಜಗಲಿಗೆ ಕಟ್ಟಿದ್ದ. ದಿನ ಬೆಳಗ್ಗೆ ಎದ್ದು ನರಿ ಮುಖ ನೋಡಿದರೆ ಅದೃಷ್ಟವೆಂದು ಯಾರೂ ಹೇಳಿದ್ದರು ಅದ್ದರಿಂದ ಅವನಿಗೆ ನಂಬಿಕೆ.

ಮನೆಯಲ್ಲಿ ಕುಳಿತು ಮಾತನಾಡುತ್ತಿರುವಾಗ ಹಲ್ಲಿ ಲೊಚಗುಟ್ಟಿದರೆ ಕೆಲವೊಮ್ಮೆ ಅಪಶಕುನವಾಗುವ ನಂಬಿಕೆ ಸಹ ಇದೆ. ನಿಮ್ಮ ಮೇಲೆ ಹಲ್ಲಿ ಏನಾದರೂ ಬಿದ್ದರೆ ಅದು ಸಹ ಬಿದ್ದ ಜಾಗದ ಮೇಲೆ ಶುಭ ಮತ್ತು ಅಶುಭ ಸಮಾಚಾರದ ತಿರ್ಮಾನವಾಗುತ್ತದೆ.

ಟಿಟ್ಟಿಭ ಹಕ್ಕಿ ತನ್ನ ಕತ್ತನ್ನು ಸತತವಾಗಿ ಎಡಕ್ಕೆ ಮತ್ತು ಬಲಕ್ಕೆ ತಿರುಗಿಸುತ್ತಿರುತ್ತದೆ. ಅದು ಏನಾದರೂ ನಿಮ್ಮ ಕಡೆ ತಿರುಗಿಸಿ ನಿಲ್ಲಿಸಿ ದುರುಗಟ್ಟಿ ನೋಡಿದರೆ ನಿಮ್ಮ ಜೀವಕ್ಕೆಕುತ್ತು ಎನ್ನುವ ನಂಬಿಕೆಯಿದೆ.

ಮಗುವು ಸತತವಾಗಿ ಹಾಸಿಗೆಯನ್ನು ಒದ್ದೆ ಮಾಡುತ್ತಿದ್ದರೆ , ದೊಡ್ಡವರು ಮಗುವಿಗೆ ಕರಡಿ ಸವಾರಿ ಮಾಡಿಸುವರು. ಹಾಗೆ ಮಾಡುವುದರಿಂದ ಮಗು ಹಾಸಿಗೆಯನ್ನು ಒದ್ದೆಮಾಡಿಸುವುದನ್ನು ನಿಲ್ಲಿಸುತ್ತದೆ ಎನ್ನುವ ನಂಬಿಕೆಯಿದೆ.

ಮಲೆನಾಡಿನಲ್ಲಿ ರಾತ್ರಿ ವೇಳೆ ಹಕ್ಕಿಯೊಂದು(ತುಂಬಾ ಹಿಂದೆ ಓದಿದ್ದು , ಹಕ್ಕಿ ಹೆಸರು ನೆನಪಿಲ್ಲ) ಕೊಗುವುದು. ಇದರ ಕೊಗು ” ಸಿಕ್ , ಸಿಕಿತ್ ರೋ ” ಎಂದು ಕೇಳುವುದರಿಂದಅದು ಎಲ್ಲಿ ಕೊಗಿರುವುದು ಅಲ್ಲಿಗೆ ಯಮಧರ್ಮನು ತನ್ನ ಜವಾಬ್ದಾರಿ ನಿಭಾಯಿಸಲು ಬರುವನು ಎನ್ನುವ ನಂಬಿಕೆಯಿದೆ.

ರಷ್ಯ ದೇಶದಲ್ಲಿ ಹಕ್ಕಿಗಳು ಮಾನವರ ಮೇಲೆ ಹಿಕ್ಕೆ ಹಾಕಿದರೆ ಅದು ಶುಭ ಸಂಕೇತವಂತೆ. ಹೆಚ್ಚಾಗಿ ಕಾರುಗಳ ಮೇಲೆ ಹಾಕಿದರೆ ಅವರ ಬಳಿಯಿರುವ ಹಣ ದ್ವಿಗುಣಗೊಳ್ಳುವ ಶುಭ ಸಂಕೇತವಂತೆ. ನಿಮ್ಮ ಮೇಲೆ ಹಾಗು ನಿಮ್ಮ ವಾಹನದ ಮೇಲೆ ಹಿಕ್ಕೆ ಬಿದ್ದರೆ ಖುಷಿ ಪಡಿ ಯಾಕಂದರೆ ಅದು ಶುಭ ಸಂಕೇತವೇ.

ನಿಶಾಚರಿ ಬಾವಲಿಗಳು ನಿಮ್ಮ ಮೇಲೆ ಬಿದ್ದರೆ ಶುಭ ಶಕುನವೇ ಆದರೆ ಅದೇ ಬಾವಲಿ ನಿಮ್ಮ ಮನೆಯಲ್ಲಿ ಸೇರಿದರೆ ಮನೆಯಲ್ಲಿ ದೆವ್ವಗಳ ಕಾಟ ಆರಂಭವೆಂಬ ಅಶುಭದ ಸೂಚನೆಯನ್ನು ಸಹ ನೀಡುತ್ತವೆ.

ನಾವೆಲ್ಲ ಹೆಚ್ಚಾಗಿ ಹೆದರುವುದು ಗೊಬೆಗಳನ್ನು ಕಂಡು, ಗೊಬೆಗಳು ಬೆಳಗಿನ ಸಮಯದಲ್ಲಿ ಉಳಿಟ್ಟರೆ ಅಂದಿನ ದಿನ ಕಳೆಯುವ ಒಳಗೆ ನಿಮಗೆ ಕೆಟ್ಟ ಸಮಾಚಾರ ಬರುವ ಸಂಕೇತ.

ಇನ್ನು ಹಕ್ಕಿಗಳನ್ನು ವೀಕ್ಷಿಸುವಾಗ ನೀವು ಒಂದೇ ಹಕ್ಕಿ ವೀಕ್ಷಿಸಿದರೆ ಅದಕ್ಕೂ ಸಹ ನಂಬಿಕೆ ಇದೆ . ನಿಮಗೆ ಒಂದೇ ಮಡಿವಾಳ ಹಕ್ಕಿ ಕಂಡರೆ ಅದು ಅಶುಭದ ಸೂಚನೆ ಅದಕ್ಕೆ ಎರಡು ಮೂರು ಮಡಿವಾಳ ಹಕ್ಕಿಗಳನ್ನು ನೋಡಬೇಕು.

ನಾವೆಲ್ಲ ನವಿಲಿನ ರೆಕ್ಕೆಗಳನ್ನು ಮನೆಗೆ ತರುವುದು ಸಹ ಅಶುಭದ ಸಂಕೇತ. ಯಾಕೆಂದರೆ ನವಿಲ ಗರಿಗಳಲ್ಲಿರುವ ಕಣ್ಣುಗಳು ಕೆಟ್ಟ ದೃಷ್ಟಿಯ ಸಂಕೇತ.

ನಮ್ಮಜ್ಜಿ ನಾವು ಊರಿಗೆ ಹೋದ ಸಮಯದಲ್ಲಿ ಯಾವಾಗಲು ಹೇಳುತ್ತಿದ್ದರು. ಬೆಳಗ್ಗೆಯಿಂದ ಕಾಗೆಗಳು ಕಾ ಕಾ ಎನ್ನುತ್ತಿದ್ದವು. ಅದಕ್ಕೆ ಅಂದುಕೊಂಡೆ ಯಾರು ನೆಂಟರು ಬರುತ್ತಾ ಇದ್ದಾರೆ ಎಂದು. ಹಾಗೆ ತಿಥಿ ಸಮಯದಲ್ಲಿ ಕಾಗೆಗಳಿಗೆ ಎಡೆಯಿಟ್ಟು ಸಹ ಕಾಯುತ್ತಿರುತ್ತೇವೆ. ಅಜ್ಜಿ ಕಥೆಗಳು ಬಹಳಷ್ಟು ಇವೆ. ಇವೆಲ್ಲ ನಮ್ಮ ಆಚಾರಗಳೂ ಅಥವಾ ಅರ್ಥವಿಲ್ಲದ ಆಚರಣೆಗಳೊ ನೀವೇ ತಿಳಿಸಬೇಕು.

ಏನೇ ಹೇಳಿ , ಈ ನಂಬಿಕೆಗಳು ನಮ್ಮ ಮೂಡ್ ಮೇಲೆ ಡಿಪೆಂಡ್ ಅದಕ್ಕೆ ಅವು ಮೂಡ ನಂಬಿಕೆಗಳಾಗಿವೆ.

Leave a comment