Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೬

ದೊರದಲ್ಲಿ ನಮ್ಮಲ್ಲಿ ಲಗೇಜ್ ಸಾಗಿಸುವ ಆಟೋಗಳ ತರಹ ಇರುವ ವಾಹನಗಳು ಒಂದೊಂದಾಗಿ ಬರತೊಡಗಿದವು. ನಾವು ನಮ್ಮ ಲಗೇಜ್ ಸಾಗಿಸಲು ಇಷ್ಟು ಆಟೋಗಳು ಏಕೆ ಎಂದು ಸುಮ್ಮನೆ ನೋಡುತ್ತಾ ನಿಂತೆವು.  ಅಷ್ಟರಲ್ಲೇ ನಮ್ಮ ಟೂರ್ ಮ್ಯಾನೇಜರ್ ಹತ್ತಿ ಹತ್ತಿ ತಡವಾಗಿದೆ ನಾವು ಇನ್ನು ಲೈಟ್ ಹೌಸ್ ಗೆ ಹೋಗಬೇಕು, ಸುಮಾರು ೧೫ ನಿಮಿಷ ಪ್ರಯಾಣ ಅಂತ ಹೇಳಿ ನಮ್ಮನ್ನು ಲಗೇಜ್ ಆಟೋ ಹತ್ತಿಸಿದ.  ಈ ಆಟೋಗಳು ನಮ್ಮ ಕಡೆ ಸಂಚಾರಿ ತರಕಾರಿ ಮಾರುವ ಆಟೋಗಳ ಗಾತ್ರದಲ್ಲಿದ್ದವು.  ಆದರೆ  ಆಟೋ ಹತ್ತಲು ಸಣ್ಣ ಕುರ್ಚಿ ಹಾಗು ಹಿಂದೆ ಕೂರಲು ಬೆಂಚ್ ಹಾಕಿ ಆಸನದ ವ್ಯವಸ್ಥೆ ಮಾಡಿದ್ದರು.  ಹೆಚ್ಚು ಕಡಿಮೆ ಎಲ್ಲ ರೀತಿಯ ವಾಹನಗಳಲ್ಲಿ ಓಡಾಡಿದ್ದ ನಮಗೆ  ಈ ಓಪನ್ ಆಟೋದಲ್ಲಿ ಮಿನಿಕಾಯ್  ದ್ವೀಪದ ಸಹಜ ಸೌಂದರ್ಯ ಸವಿಯುವ ಭಾಗ್ಯವನ್ನು ಒದಗಿಸಿತ್ತು ಎಂದರೆ ತಪ್ಪಾಗಲಾರದು.  ಸುತ್ತ ಮುತ್ತಲಿನ ಪ್ರಕೃತಿಯ ಆರಾಧಿಸುತ್ತ ನಾವು ಲೈಟ್ ಹೌಸ್ ತಲುಪಿದೆವು. 

ಲೈಟ್ ಹೌಸ್ ಅಂದರೆ  ಅತ್ಯಂತ ಪ್ರಖರವಾದ ಬೆಳಕನ್ನು ಮಸೂರದ ಮೂಲಕ ಎತ್ತರವಾರದ ಸ್ಥಳದ  ಮೇಲೆ ಹೊರಸೂಸುವ ಬಳಸುವ ಕಟ್ಟಡ. ಹೆಚ್ಚಾಗಿ ಜಲಯಾನದಲ್ಲಿ ಹಡಗು ಇಲ್ಲವೇ ದೋಣಿಗಳ  ಸುರಕ್ಷಿತ ಪ್ರವೇಶ ಇಲ್ಲವೇ ನಿಲುಗಡೆಗೆ ಅವಕಾಶಕ್ಕಾಗಿ ಬಳಸುತ್ತಾರೆ. 

ವಾಸ್ಕೋ ಡಾ ಗಾಮ ಭಾರತಕ್ಕೆ ಹೊಸ ಸಮುದ್ರ ಮಾರ್ಗ ಕಂಡು ಹಿಡಿದಾಗ ಈ ದ್ವೀಪ ಬಳಸಿ ಭಾರತ ಕಡೆ ಬರುತ್ತಿದ್ದರಂತೆ , ಮುಂದೆ ಪೋರ್ಚುಗಲ್ ನಾವಿಕರು ಇದೆ ಮಾರ್ಗ ಬಳಸಿದರಂತೆ ,  ಆ ಸಮಯದಲ್ಲಿ  ಹಡಗುಗಳು ಸಾಗರದ ಆಳ ಅರಿಯದೆ ಹವಳ ದಂಡೆಗೆ ಬಡಿದು  ಹಿಂದಕ್ಕೂ ಮುಂದಕ್ಕೂ ಹೋಗಲಾಗದೆ ಸಿಕ್ಕಿ  ಅವಶೇಷವಾದವಂತೆ.  ಭಾರತವನ್ನು ಆಂಗ್ಲರ ಆಳ್ವಿಕೆ ಆರಂಭವಾದ ನಂತರ  ಮಿನಿಕಾಯ್ ದ್ವೀಪವನ್ನು ತಮ್ಮ ಸುಪರ್ಧಿಗೆ ಆಂಗ್ಲರು ಪಡೆದು , ನಾವಿಕರ ಅನುಕೂಲಕ್ಕಾಗಿ ಈ  ಲೈಟ್ ಹೌಸ್ ಅನ್ನು ೧೮೮೫ ಆಂಗ್ಲ ಸರ್ಕಾರ ಇಲ್ಲಿ ಸ್ಥಾಪಿಸಿತು. ಅಂದು ಆರಂಭಿಸಿದ  ಲೈಟ್ ಹೌಸ್ ಇಂದಿಗೂ ಸಹ  ಯಾವುದೇ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದೆ. 

ನೆಲಮಟ್ಟದಿಂದ ಸುಮಾರು ೧೫೭ ಅಡಿ ಎತ್ತರದ ಈ ಲೈಟ್ ಹೌಸ್ ಅನ್ನು ಲಂಡನ್ ಇಂದ ತಂದ ಇಟ್ಟಿಗೆಗಳಿಂದ ಕಟ್ಟಿದ್ದಾರೆ, ಅಂದು ಕಟ್ಟಿದ ಲೈಟ್ ಹೌಸ್ ಇಂದಿಗೂ ಸುಭದ್ರವಾಗಿದೆ ,  ಲೈಟ್ ಹೌಸ್ ತಳಭಾಗ  ನಾ ನೋಡಿದ ಬೇರೆ ಎಲ್ಲಾ ಲೈಟ್ ಹೌಸ್ ಗಳಿಗಿಂತ ವಿಶಾಲವಾಗಿದೆ. ಸುಮಾರು ೨೨೦ ಮೆಟ್ಟಿಲುಗಳನ್ನು ಹತ್ತಿ ಲೈಟ್ ಹೌಸ್ ತುದಿಯನ್ನು ತಲುಪ ಬೇಕು. ಮೆಟ್ಟಿಲು ಹತ್ತುವ ಮೊದಲೇ ಅಲ್ಲಿನ ಬಿಸಿಲಿನ ಝಳಕ್ಕೆ ದೇಹದಲ್ಲಿ ನೀರಿನ ಸಣ್ಣ ಸಣ್ಣ ಝರಿ ಹರಿಯತೊಡಗಿದವು ಹಾಗಾಗಿ ಹೇಗೆ ಹತ್ತುವುದು ಎಂದು ಯೋಚಿಸುತ್ತ ಇದ್ದೆವು.  ಆದರೆ ನಮ್ಮೊಂದಿಗೆ ನನ್ನ ನಾಲ್ಕು ವರ್ಷದ  ಮಗನ ಜೊತೆ ಸುಮಾರು ಎಪ್ಪತ್ತು ವರ್ಷದ ತರುಣರು ಸಹ ನಾ ಮೊದಲು ತಾ ಮೊದಲು ಎಂದು ಮೆಟ್ಟಿಲನ್ನು ಎರ ತೊಡಗಿದರು.  

                                         

ದ್ವೀಪದ  ಭೂಭಾಗವನ್ನು ಕಾಣದಂತೆ  ಮರೆಮಾಚುವ ಸಾಲು ಸಾಲು ತೆಂಗಿನ ಮರಗಳು, ಶಾಂತವಾಗಿ  ಸಾಲಾಗಿ ಬಂದು ತೀರಕ್ಕೆ ಅಪ್ಪಳಿಸುವ ತೆರೆಗಳು, ಅಲೆಗಳೇ ಇಲ್ಲದೆ ಸ್ತಬ್ದವಾಗಿ ಅಳವನ್ನು ಅರಿಯುವಂತೆ ಕೈಬೀಸಿ ಕರೆಯುವ ಶರಧಿಯು ಒಂದು ಕಡೆ,  ಸ್ಪಟಿಕದಷ್ಟು ಶುಭ್ರವಾದ ಬಿಳಿ ಮರಳಿನ ಕಿನಾರೆ ಕಣ್ಣು ಹಾಯಿಸಿದಷ್ಟು ಅಂತರಕ್ಕೆ  ನೀಲಿ, ಬಿಳಿ, ಪಚ್ಚೆ, ತಿಳಿ ಹಸಿರು, ತಿಳಿನೀಲಿ  ಬಣ್ಣಕ್ಕೆ ಕಾಣುವ ಸಾಗರ. ಸಾಗರ ಹಾಗು ದ್ವೀಪದ ಭೂ ಭಾಗದ  ಪರಿಧಿಯ ವಿಸ್ತಾರವನ್ನು ಕಣ್ಣಳತೆಯಲ್ಲಿ ಕಾಣಬಹುದು, ಅದಲ್ಲದೆ ದ್ವೀಪದ ಏರಿಯಲ್ ವ್ಯೂ ನಿಜಕ್ಕೂ ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ. ಮೆಟ್ಟಿಲು ಏರುತ್ತಿದ್ದಾಗ ಆಯಾಸ ಕ್ಷಣಮಾತ್ರದಲ್ಲಿ ತುದಿ ತಲುಪಿದಾಗ ಮಾಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇಲ್ಲಿ ನಾವು ಸ್ವಲ್ಪ ಜಾಸ್ತಿ ಸಮಯ ಕಳೆಯಬಹುದು ಏಕೆಂದರೆ ಇಲ್ಲಿ ಇದ್ದದ್ದು ಕೆಲವೇ ಪ್ರವಾಸಿಗರು ಮಾತ್ರ. ಹಾಗಾಗಿ ಎಷ್ಟು ಸಮಯವಾಗುತ್ತೋ ಅಲ್ಲಿಯವರೆಗೂ ಕಣ್ಣತುಂಬಿಕೊಂಡು ನಿಧಾನವಾಗಿ ಅತ್ಯಂತ ಹುಷಾರಿನಿಂದ  ಲೈಟ್ ಹೌಸ್ ಕೆಳಗೆ  ಇಳಿದು ಬಂದು  ಮಿನಿಕಾಯ್ ತುಂಡಿ ಬೀಚ್ ಕಡೆಗೆ ನಮಗಾಗಿ ಕಾಯುತ್ತಿದ್ದ ಗಾಡಿ ಹತ್ತಿದೇವು. 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ.. – ೫

ಸಾಗರಕ್ಕೆ ಸ್ನೇಹ ಹಸ್ತ ಚಾಚುವಂತೆ ಕಾಣುವ ಕಲ್ಪ ವೃಕ್ಷಗಳು , ಸ್ಪಟಿಕದಷ್ಟು ಶುಭ್ರವಾದ  ಬಿಳಿ ಮರಳಿನ ಕಡಲ ಕಿನಾರೆ, ಅಲ್ಲೊಂದು ಇಲ್ಲೊಂದು ಕಡೆ ಲಂಗರು ಹಾಕಿದ ನಾವಿಕನಿಲ್ಲದ ದೋಣಿಗಳು, ಸಾಗರದ ಸಣ್ಣ ಸಣ್ಣ ಅಲೆಗಳ ಇಂಚರ,  ದಡದಲ್ಲಿ ಸುಲಭವಾಗಿ  ಸಿಗುವ ಉಭಯವಾಸಿಗಳನ್ನು ಭೇಟೆಯಾಡುವ ಒಂದಿಷ್ಟು ಕಡಲಹಕ್ಕಿಗಳು, ಮೊಣಕಾಲು  ಆಳದ ಸಮುದ್ರದಲ್ಲಿ  ಸಾಗರವಾಸಿಗಳು ನಮಗೆ ಸ್ವಾಗತ  ಕೋರುತ್ತಾ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಅದಾಗಲೇ  ಮಟ ಮಟ ಮಧ್ಯಾಹ್ನವಾಗಿದ್ದರಿಂದ ದ್ವೀಪವಾಸಿಗಳಾರು ಕಣ್ಣಿಗೆ ಬೀಳಲಿಲ್ಲ.  ಈ ಎಲ್ಲ ದೃಶಗಳನ್ನು ಸ್ಮೃತಿಪಟಲದಲ್ಲಿ ಅಚ್ಚಿಡುತ್ತಾ  ಲಕ್ಷದ್ವೀಪ ಪ್ರವಾಸದ ಮೊದಲ ದ್ವೀಪವಾದ ‘ಮಿನಿಕಾಯ್ ‘  ದ್ವೀಪಕ್ಕೆ ಕಾಲಿಟ್ಟೆವು. 

ದ್ವೀಪದ ಬಗ್ಗೆ ನಾಲ್ಕು ಮಾತನಾಡಬೇಕು, ಏಕೆಂದರೆ  ಹಡಗಿನಲ್ಲಿ ಮೊದಲ ಬಾರಿಗೆ ಈ ದ್ವೀಪದ ನಿವಾಸಿಗಳನ್ನು ನೋಡಿದಾಗ ಅವರು  ಎಲ್ಲಿಯೂ ಭಾರತೀಯರ ರೀತಿ ಕಾಣುತ್ತಲೇ ಇರಲಿಲ್ಲ ಅದಕ್ಕಿಂತ ಹೆಚ್ಚಾಗಿ ಮಾತನಾಡಲು ಪ್ರಯತ್ನಿಸಿದರೆ  ಅವರಿಂದ ಪ್ರತಿಕ್ರಿಯೆಯೂ ಬರಲಿಲ್ಲ. ದೈಹಿಕವಾಗಿಯೂ  ಸದೃಢ ಎನಿಸಿದರೂ ಎಲ್ಲಿಯೂ ಬೊಜ್ಜುವಿಲ್ಲದೆ ಚಪ್ಪಟೆಯಾಗಿದ್ದರು . ಭಾರತ ಭೂಪ್ರದೇಶದ ಬಹುತೇಕ ರಾಜ್ಯಗಳ ಜನರನ್ನು ನೋಡಿರುವುದರಿಂದ ಇವರು ದೈಹಿಕವಾಗಿಯೂ  ಎಲ್ಲೋ ಅನ್ಯ ದೇಶದ ನಿವಾಸಿಗಳಂತೆ ಕಾಣುತಿದ್ದರು. 

ಮಿನಿ ಕಾಯ್  ದ್ವೀಪ  ಲಕ್ಷದ್ವೀಪದ  ದಕ್ಷಿಣ ತುದಿಯಲ್ಲಿರುವ ಕಟ್ಟ ಕಡೆಯ ಜನವಸತಿರುವ ಎರಡನೇ ವಿಶಾಲವಾದ ದ್ವೀಪ, ಇಲ್ಲಿಂದ ಮಾಲ್ಡಿವ್ ದೇಶದ  ಉತ್ತರದಲ್ಲಿನ ತುರಾಕುನು ದ್ವೀಪಕ್ಕೆ ಸುಮಾರು ೧೨೦ ಕಿಲೋಮೀಟರು ದೊರವಿದೆ.  ಇಲ್ಲಿನ ಮುಖ್ಯ ಆಡುಭಾಷೆ  ‘ ದಿವೇಹಿ’, ಇದು ಮಾಲ್ಡಿವ್ ದ್ವೀಪದ ರಾಷ್ಟೀಯ ಭಾಷೆ ಕೂಡ. ಇದಲ್ಲದೆ ಮಲಯಾಳಂ, ಅಲ್ಪ ಸ್ವಲ್ಪ ಹಿಂದಿ ಸಹ ಮಾತನಾಡುತ್ತಾರೆ.

ಮಿನಿಕಾಯ್ ದ್ವೀಪಕ್ಕೆ ಮೊದಲು ಮಾಲಿಕು ಎಂಬ ಹೆಸರಿತ್ತು , ಮಾಲಿಕು ಯಿಂದ  ಮಿನಿಕಾಯ್  ಎಂಬುದಕ್ಕೆ ಬದಲಾವಣೆಯ  ಹಿಂದಿನ ಸ್ವಾರಸ್ಯ ನಾವು ತಿಳಿಯಲೇಬೇಕು. ಮಾನವನ ವಲಸೆಯ ಆರಂಭದ ಪೂರ್ವದಲ್ಲಿ ಈ  ದ್ವೀಪದ ನಿವಾಸಿಗಳು  ಬಂಗಾಳ ಕೊಲ್ಲಿಯ ನಿಕೋಬಾರ್  ದ್ವೀಪದಲ್ಲಿ ನೆಲೆಸಿದ್ದರು.  ಅಂಡಮಾನ್  ಮತ್ತು ನಿಕೋಬಾರ್ ದ್ವೀಪದಲ್ಲಿ ನರಭಕ್ಷಕರು ಹಿಂದೆ ನೆಲೆಸಿದ್ದರು, ಅವರು ಅಲ್ಲಿಂದ ಮಿನಿಕಾಯ್ ದ್ವೀಪಕ್ಕೆ  ವಲಸೆ ಬಂದರು. ಹಾಗಾಗಿ ಅಂಡಮಾನ್  ಮತ್ತು ನಿಕೋಬಾರ್ ದ್ವೀಪಗಳನ್ನು  ‘ಮಿನಿಕ ರಜ್ಜೆ’ ಅಂದರೆ  ‘ನರಭಕ್ಷಕರ ಸಾಮ್ರಾಜ್ಯ’ ಎಂದು  ಕರೆಯುತ್ತಿದ್ದರು, ಹಾಗಾಗಿ  ಮಿನಿಕಾಯ್ ದ್ವೀಪಕ್ಕೆ ಮಾಲಿಕು ಎಂಬ ಹೆಸರು ಪಡೆಯಿತು. 

ಒಮ್ಮೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಯು ಈ ದ್ವೀಪಕ್ಕೆ ಭೇಟಿ ನೀಡಿದ  ಸಂದರ್ಭದಲ್ಲಿ ಈ ದ್ವೀಪದ ಹೆಸರು ಏನು  ಎಂದು ಇಲ್ಲಿನ ದ್ವೀಪವಾಸಿಯನ್ನು ಕೇಳುತ್ತಾನೆ. ಆಗ ನಾನು ಮಾಲಿಕು ದ್ವೀಪದವನು , ಇದಕ್ಕೂ ಮುನ್ನ ಮಿನಿಕ ರಜ್ಜೆಯಲ್ಲಿ ನೆಲೆಸಿದವನು ಎಂದು ತಿಳಿಸುತ್ತಾನೆ. ಇದೆ ಪದಗಳು ಪದಾಂತರವಾಗಿ ಮಿನಿಕವಾಗಿ ಕಡೆಗೆ ಮಿನಿಕಾಯ್ ಆಯಿತು ಎನ್ನುವುದು ಇತಿಹಾಸ.  

ಈ ಇತಿಹಾಸ  ಮೊದಲೇ ತಿಳಿದಿದ್ದ ನನಗೆ  ದ್ವೀಪವಾಸಿಗಳು ಯಾರು ಕಾಣದೇ ಇದ್ದದು ಹಾಗು ಹಡಗಿನಿಂದ ಮೊದಲ ಸರದಿಯಲ್ಲಿ ಬಂದಿದ್ದ ಪ್ರವಾಸಿಗರು ವಾರ್ಫ್ ಪಾಯಿಂಟ್ ಅಲ್ಲಿ ಇಲ್ಲದಿದ್ದದು     ‘ ಇನ್ನೂ ನರಭಕ್ಷಕರು ಇದ್ದಾರಾ ‘ ಎಂಬ ಆತಂಕಕ್ಕೆ  ಕಾರಣವಾಯಿತು.  ಸ್ವಲ್ಪ ಸಮಯದಲ್ಲೇ ಪ್ರವಾಸಿಗರನ್ನು ಲೈಟ್ ಹೌಸ್ಗೆ ಕರೆದುಕೊಂಡು ಹೋಗುವ ವಾಹನ ಒಂದೊಂದಾಗಿ ಬರ ತೊಡಗಿರುವುದನ್ನು ಕಂಡು ಸ್ವಲ್ಪ ನಿರಾತಂಕನಾದೆನು…

Uncategorized

ಲಕ್ಷ ದ್ವೀಪಗಳ ಮಹಾ ಯಾನ – ದೋಣಿ ಸಾಗಲಿ.. ಮುಂದೆ ಹೋಗಲಿ.. ದೂರ ದ್ವೀಪವ ಸೇರಲಿ – ೪

ದಿನವೆಲ್ಲಾ ದಣಿದಿದ್ದ ದೇಹಕ್ಕೆ ನಿದ್ದೆಯೇನು ಕ್ಷಣ ಮಾತ್ರದಲ್ಲೇ ಆವರಿಸಿತು, ಆದರೆ ದೇಹ ನಿದ್ರಾವಸ್ಥೆಯಲ್ಲಿದ್ದರೂ  ಮನಸ್ಸು ಮಾತ್ರ  ಜಾಗೃತವಾಗಿತ್ತು. ಜಾಗೃತ ಮನ ಎಚ್ಚರಗೊಂಡಾಗ ಕೆಲ ಕ್ಷಣದಲ್ಲೇ  ಅಗಾಧ ನೀಲ ಸಾಗರದ ಮಧ್ಯದಲ್ಲಿ ಹುಣ್ಣಿಮೆಯ ಚಂದಿರನ ಬೆಳಕಿನ ಅಡಿಯಲ್ಲಿ ಪುಟ್ಟ ತೊಟ್ಟಿಲಿನಲ್ಲಿ ಒಂದೆಡೆ ಒಡಲಿನ  ನಿನಾದ  ಮತ್ತೊಂದಡೆ  ಹಡಗಿನ  ಹೃದಯದಿಂದ  ಬರುತ್ತಿದ್ದ   ಸಪ್ಪಳದ ಕಛೇರಿಯಲ್ಲಿ ಹಾಸಿಗೆಯೂ  ೩೬೦ ಡಿಗ್ರಿ  ತಿರುಗುತ್ತಾ ಮಲಗಿದ ಅನುಭವವಾಗ ತೊಡಗಿತು.  

ನಿಜ ಹೇಳಬೇಕೆಂದರೆ ಇದೊಂದು ಅನನ್ಯ ಅನುಭವ, ಎಲ್ಲೋ ನನಗೊಬ್ಬನಿಗೇ ಈ ರೀತಿ ಕನಸು ಬಿದ್ದಿರ ಬಹುದೇ  ಇಲ್ಲವೇ  ಅನುಭವವಾಗಿರಬಹುದೇ  ಎಂದು ಬೆಳಗ್ಗೆ ಎದ್ದು ನಮ್ಮನೆಯವರ ಹತ್ತಿರ ಕೇಳಿದೆ ಅವರಿಗೂ  ಸಹ ಇದೆ ಅನುಭವವಾಗಿತ್ತು. ಈ ಅನುಭವ ನಾವು ಲಕ್ಷದ್ವೀಪ ಪ್ರವಾಸ ಮುಗಿಸಿ ಒಂದು ವಾರವಾದ ಮೇಲೆ ಅಂತ್ಯಗೊಂಡಿತ್ತು, ಲಕ್ಷದ್ವೀಪ ಪ್ರವಾಸ ಎಷ್ಟು ಪ್ರಭಾವ ಬೀರಿತೆಂದರೆ ತಪ್ಪಾಗಲಾರದು. ಊರಿಗೆ ಮರಳಿ ಹಾಸಿಗೆಯೇ ಮೇಲೆ ಮಲಗಿದರೆ ಸಾಕು  ಹಾಸಿಗೆಯೂ  ಸಹ ನೀರಿನಲ್ಲಿ ತಿರುಗುತ್ತಾ ಸಮುದ್ರದ ಕಛೇರಿಯಲ್ಲಿ ಮುಳುಗಿದ ಅನುಭವ  ಸುಮಾರು ಒಂದು ವಾರವಿತ್ತು ಇದು ವಿಚಿತ್ರವೆನಿಸದರೂ ಅಸಾಧಾರಾಣವಾದದು ವರ್ಣನೆಗೆ ನಿಲುಕದ್ದು.  

ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನುಸಾಗರದ ಮಧ್ಯದಲ್ಲಿ ನಿಂತು ಹಡಗಿನಲ್ಲಿ ನೋಡುವ  ವಾಂಛೆ ಬಹುದಿನದಾಗಿತ್ತು.  ಹಾಗಾಗಿ  ಹಿಂದಿನ ದಿನ ಸೂರ್ಯಾಸ್ತವನ್ನು ತುಂಬಿಕೊಂಡಿದ್ದ ಕಣ್ಣುಗಳು ನಾಳಿನ ಸೂರ್ಯೋದಯಕ್ಕೆ ಸಾಕ್ಷಿಯಾಗಲು ಕಾತರದಿಂದ  ಕ್ಷಣಗಣನೆಯಲ್ಲಿ ತೊಡಗಿದ್ದವು. ಬೆಳಗಿನ ಐದು ಗಂಟೆಗೆ ಅಲಾರಂ ಮೊದಲ  ಬಾರಿಗೆ ಸದ್ದು ಮಾಡುವುದಕ್ಕೆ ಮುಂಚೆ ಜಾಗೃತ ಮನಸ್ಸು ಹಾಸಿಗೆಯಿಂದ ಬಡಿದೆಬ್ಬಿಸಿತ್ತು. ನಿತ್ಯ ಕರ್ಮ ಮುಗಿಸಿ,  ಎಲ್ಲಡೆಯೂ  ಕತ್ತಲೆ  ಇರಬಹುದೆಂದು ಭಾವಿಸಿ ಹಡಗಿನ ಮೇಲಿನ ಡೆಕ್ಕ ಕಡೆಗೆ ಗಗನ ವೀಕ್ಷಣೆಗೆ ಹೊರಟೆ. ಅದಾಗಲೇ ಹಡಗಿನ ಅಡುಗೆಕೋಣೆಯ ಸಿಬ್ಬಂದಿ  ಬೆಳಗಿನ ಚಹಾ ತಯಾರಿಸಿ ನಮಗಾಗಿ ಕಾಯುತ್ತ ಇದ್ದರು. ಒಂದಿಷ್ಟು ಚಹಾ ಲೋಟಕ್ಕೆ ಸುರಿದುಕೊಂಡು ಸೀದಾ ಮೇಲಿನ ಡೆಕ್ ಹೊರಟೇ ಆದರೆ ಅಲ್ಲಿ ಹೇಳಿ ಕೊಳ್ಳುವಷ್ಟು ಕತ್ತಲು ಇರಲಿಲ್ಲ. ನೆತ್ತಿಯ ಮೇಲೆ ಅಗಸವೂ ಶುಭ್ರವಾಗಿತ್ತು ಅಲ್ಲೊಂದು ಇಲ್ಲೊಂದು ನಕ್ಷತ್ರಗಳು ಇಣುಕಿ ಮಿಣಕಿ ಮರೆಯಾಗುತ್ತಿದ್ದವು. ಹುಣ್ಣಿಮೆಯ ಚಂದಿರ ಇಳೆಯ ತಂಪಿಳಿಸಿ ಮರೆಯಾಗುವ ಉತ್ಸಾಹದಲ್ಲಿದ್ದ, ಸಾಗರದ ಮೇಲಿನ ತಣ್ಣನೆ ಗಾಳಿ ಮಂದವಾಗಿ ಬೀಸುತಿತ್ತು, ಸುತ್ತಲೂ ಅಗಾಧ  ಜಲರಾಶಿ, ಬಹು ದೊರದಲ್ಲಿ ನಮ್ಮ ರೀತಿಯ ಹಡಗು ಇಲ್ಲವೇ ಸಿನಿಮಾದಲ್ಲಿ ತೋರಿಸುವ ದಾರಿ ತಪ್ಪಿದ ದೋಣಿಯಾದರು , ಹಾರುವ ಡಾಲ್ಫಿನ್ , ಶಾರ್ಕ್ , ತಿಮಿಂಗಿಲ, ಮೆಗಾಲಾಡನ್ ಎಲ್ಲಾದರೂ ಕಾಣಿಸಿತೇ ಎಂದು ಕಣ್ಣು ಹಾಯಿಸಿದೆ ಅದಾವುದಾರೂ ಸುಳಿವು ಸಹ ಇಲ್ಲ. 

ಮೂಡಣದಲ್ಲಿ ಹಿಂದಿನ ದಿನ  ಶರಧಿಯಲ್ಲಿ ಮುಳುಗಿದ್ದ ಸೂರ್ಯ ಅಂಬರ ಚುಂಬಿಸಲು ಮೇಲೇರುತ್ತಿದ್ದ ಆದರೆ ಈ ದೃಶ್ಯಕ್ಕೆ ಸೆನ್ಸಾರ್  ಕಟ್ ಮಾಡಲು ಮೇಘ ರಾಜನು  ಕಣ್ಣಿಗೆ ಕಾಣುವಂತೆ ಅಡ್ಡಗಾಲು ಹಾಕಿದ್ದನು. ಸುಮಾರು ಸಮಯ ಕಳೆಯಿತು ಸೂರ್ಯನ ಸುಳಿವೇ ಇಲ್ಲ. ಎಲ್ಲೋ ನನಗೆ ಸಾಕ್ರಟೀಸನ  ಋಣದ ಹುಂಜದ  ಪದ್ಯವು ಸಹ ಹೊಳೆಯಿತು  ಆದರೆ ಸಾಕ್ರಟೀಸನಾಗಲಿ ಇಲ್ಲವೇ ಹುಂಜವೇ ಆಗಲಿ ಇರಲಿಲ್ಲ, ಮೂಡಣವು  ಸಂಪೂರ್ಣ ಬಂಗಾರಮಾಯವಾಗಿತ್ತು , ನೆತ್ತಿಯ ಮೇಲೆ ಶುಭ್ರವಾದ ನೀಲಿ ಬಣ್ಣದ ಅಗಸವು ಗೋಚರಿಸುತ್ತಿತ್ತು. ಅದಾಗಲೇ ರವಿಯು ಸಾಗರದಿಂದ ಮೇಲೆದ್ದಾಗಿತ್ತು ಮೋಡಗಳು ಮರೆಯಾಗಲು ಆರಂಭಿಸಿದ್ದವು ಬಹುದಿನದ ಅತಿ ಮುಖ್ಯ ದೃಶ್ಯವನ್ನು ಸವಿಯುವ ಭಾಗ್ಯ ಸ್ವಲ್ಪದರಲ್ಲೇ ತಪ್ಪಿತು.  ಸುಮಾರು  ನೆಲ ಬಿಟ್ಟು ೩೫೦ ಕಿಲೋಮೀಟರ್ ಬಂದರು ಸುತ್ತಲೂ ಯಾವದೇ  ಯಾವುದೇ ದ್ವೀಪದ ಕುರುಹುಗಳ ಸುಳಿವಿರಲಿಲ್ಲ ಕಡೆಗೆ  ಭಾರವಾದ ಮನಸ್ಸಿನಿಂದ ನಿಧಾನವಾಗಿ ಕೋಣೆಗೆ ಹಿಂತಿರುಗಿದೆ. 

ಬೆಳಗಿನ ತಿಂಡಿ ಮುಗಿಸಿ ಹಡಗಿನ ಮೊದಲ ಡಿಸ್ ಎಂಬಾರ್ಕಷನ್  ಕರೆಗೆ ಕಾಯುತ್ತಿದ್ದೆ (ಹಡಗಿನಿಂದ ಇಳಿಯುವಿಕೆ),  ಹಡಗು ಸುಮಾರು ಎರಡು ಗಂಟೆ ತಡವಾಗಿ ಮಿನಿಕಾಯ್  ದ್ವೀಪ ತಲುಪಿತ್ತು.  ದ್ವೀಪದ ಹತ್ತಿರ ಎಂದರೆ ಸುಮಾರು ಮೂರರಿಂದ ನಾಲ್ಕು ಕಿಲೋ ಮೀಟರ್ ದೊರದ ಆಳದ ಸಮುದ್ರದಲ್ಲಿ ಲಂಗುರು ಹಾಕಲಾಯಿತು. ಹಡಗಿನಿಂದ ಇಳಿಯುವುದನ್ನು ಮೊದಲ ಡೆಕ್ಕಿನ ಬಾಗಿಲಿನಲ್ಲಿ ವ್ಯವಸ್ಥೆ ಮಾಡಿರುತ್ತಾರೆ  ಅಲ್ಲಿಂದ ಸುಮಾರು ೨೫ ರಿಂದ  ೪೦ ಜನ ಕೂರಬಹುದಾದ ಸಣ್ಣ ಸಣ್ಣ ದೋಣಿಯಲ್ಲಿ ಮೊದಲಿಗೆ ದ್ವೀಪದ ನಿವಾಸಿಗಳು  ನಂತರ ಪ್ರವಾಸಿಗರನ್ನು ತಂಡ ತಂಡವಾಗಿ ದ್ವೀಪಕ್ಕೆ ವರ್ಗಾಯಿಸುತ್ತಾರೆ. ಹಡಗಿನಿಂದ ಸಣ್ಣ ದೋಣಿಯಲ್ಲಿ ಮಿನಿಕಾಯ್ ದ್ವೀಪ ತಲುಪಲು ಸುಮಾರು ೨೦ ರಿಂದ ೩೦ ನಿಮಿಷದ ಪ್ರಯಾಣ.

ಹಡಗು ಲಂಗುರು ಹಾಕಿದಂತೆ, ದ್ವೀಪದ ದೋಣಿಗಳು ಒಂದೊಂದಾಗಿ  ಡಿಸ್ ಎಂಬಾರ್ಕಷನ್ ಬಾಗಿಲಿನ ಹತ್ತಿರ ನಿಂತು ದೋಣಿ ತುಂಬಿದ ತಕ್ಷಣ ಹೊರಡ ತೊಡಗಿದವು. ಪ್ರವಾಸಿಗರು ದೋಣಿ ಏರುವುದಕ್ಕೋ ಸ್ಥಳೀಯರು ದೋಣಿ ಏರುವುದಕ್ಕೋ ಬಹಳ ವ್ಯತ್ಯಾಸವಿದೆ. ಪ್ರವಾಸಿಗರಿಗೆ ಲೈಫ್ ಜಾಕೇಟ್ ಕೊಟ್ಟರೇ ಸ್ಥಳೀಯರಿಗೆ ದೇಹವೇ ಲೈಫ್ ಜಾಕೇಟ್ ಹಾಗೂ ಸ್ಥಳೀಯರು ದಿನ ಬಳಕೆಯ ವಸ್ತುಗಳ ಜೊತೆ ದೋಣಿ ಏರಬೇಕು, ಪ್ರವಾಸಿಗರ ದೋಣಿಯಲ್ಲಿ ಕೇವಲ ಪ್ರವಾಸಿಗರಿಗಷ್ಟೇ ಸೀಮಿತ ಎಲ್ಲೋ ಇದು ತಾರತಮ್ಯ ಎಂದು ಅನಿಸಿದರೂ ಮೀನಿಗೆ ಸಮುದ್ರವಾದರೂ ಸರಿಯೇ ಸಣ್ಣ ಬಾವಿಯಾದರೂ ಸರಿ ಎಂಬ ಭಾವನೆ ಮಾಡುತ್ತದೆ.  ನಮ್ಮನ್ನು ಎಲ್ಲಿ ಹಡಗಿನಲ್ಲಿಯೇ ಬಿಟ್ಟಾರೋ ಎಂದು ಪ್ರವಾಸಿಗರು ನಾ ಮುಂದು ತಾ ಮುಂದು ದೋಣಿ ಏರಲು ಆರಂಭಿಸಿದರು. ಕಡೆಗೆ ನಾವೂ ಸಹ ಏರಿಯಾಯಿತು.  

ದೋಣಿಯು ದ್ವೀಪದ ಕಡೆಗೆ ಸಾಗಿದಂತೆ  ತಸು ದೂರದಲ್ಲಿ ಸಾಗರದ ಬಣ್ಣವು ಕಡು ನೀಲಿಯಿದ್ದದ್ದು ಮೆಲ್ಲನೇ ತಿಳಿ ನೀಲಿಗೆ ಬದಲಾಯಿತು, ಮತ್ತೆ ಮುಂದೆ ಗಾಢ ಪಚ್ಚೆ ಬಣ್ಣಕ್ಕೆ ತಿರುಗಿ, ಸ್ವಲ್ಪ ಸಮಯದಲ್ಲೇ  ತಿಳಿ ಹಸಿರು ವರ್ಣಮಯವಾಯಿತು, ದ್ವೀಪ ಸಮೀಪಿಸಿದಂತೆ  ಮತ್ತೆ ತಿಳಿ ನೀಲಿಗೆ ತಿರುಗಿ ಸ್ಪಟಿಕದಷ್ಟು ಶುಭ್ರವಾಗಿ ಸಾಗರದ ತಳ ಕಾಣಲ್ಪಟ್ಟಿತು. ಈ ವರ್ಣಮಯದ ರಂಜನೀಯ ೩೦ ನಿಮಿಷ ಪಯಣ ಮನಸಿಗೆ ಮುದ ನೀಡಿತು ಎಂದರೇ ತಪ್ಪಾಗಲಾರದು.  

ಅದೇ ಸಮಯಕ್ಕೆ ನೆನಪಾಗಿದ್ದು ಸರ್ ಸಿ ವಿ ರಾಮನ್ ಅವರು ಇಂಗ್ಲೆಂಡ್ ನಿಂದ ಭಾರತಕ್ಕೆ ಮೆಡಿಟರೇನಿಯನ್ ಸಮುದ್ರದ ಮೇಲೆ ಸಮುದ್ರಯಾನ  ಮಾಡುವಾಗ  ಬೆಳಕಿನ  ಸಂಶೋಧನೆಗೆ ಬಳಸುವ ಉಪಕರಣಗಳಿಂದ  ಕ್ಷಣ ಕ್ಷಣಕ್ಕೂ ಸಮುದ್ರದ ರಂಜನೀಯ  ಬದುಕಿನ ಮೇಲೆ  ಪ್ರಯೋಗ ಮಾಡಿ ಭಾರತಕ್ಕೆ ಕಾಲಿಡುವುದರಲ್ಲೇ ಮೊದಲು ಸಂಶೋಧನಾ ಪ್ರಬಂಧವನ್ನು ಬೆಳಕಿನ ಚದುರುವಿಕೆಯ ಮೇಲೆ ಬರೆದು ನೇಚರ್ ಪತ್ರಿಕೆ ಕಳುಹಿಸಿ ಕೊಟ್ಟದ್ದು ಎಂಬ ಬಾಲ್ಯದ ಪಠ್ಯದಲ್ಲಿದ್ದ ಪಾಠ. 

ಅದಾಗಲೇ  ರವಿಯು ಎಂದಿನಂತೆ ಪ್ರಖರವಾಗಿ ಬೆಳಗುತ್ತಿದ್ದರೂ ಪ್ರಕೃತಿಯ ವಿಸ್ಮಯವನ್ನು ಆಸ್ವಾದಿಸುತ್ತಲೇ ತೀರ ತಲುಪಿದ್ದು ಒಂದು ರೀತಿ ಸಮಾಧಾನವನ್ನು ತಂದಿತ್ತು , ಹಡಗು ಹತ್ತಿ ಸುಮಾರು ೩೦ ಗಂಟೆಗಳ ನಂತರ ನಾವು ಧರೆಯ ಸ್ಪರ್ಶ ಮಾಡಿದ್ದೆವು ಎಲ್ಲೂ ನಿಲ್ ಆರ್ಮ್ ಸ್ಟ್ರಾಂಗ್ ಚಂದಿರನ ಮೇಲೆ ಕಾಲಿಟ್ಟಾಗ , ಕೊಲಂಬಸ್ ಅಮೇರಿಕಾ ಖಂಡವನ್ನು ಅನ್ವೇಷಣೆ ಮಾಡಿದಷ್ಟೇ, ವಾಸ್ಕೊ ಡಾ ಗಾಮಾ ಭರತ ಖಂಡಕ್ಕೆ ಹೊಸ ಸಮುದ್ರ ಮಾರ್ಗ ಕಂಡು ಹಿಡಿದಷ್ಟೇ, ಆರ್ಕಿಮಿಡಿಸ್ ಬೆತ್ತಲೆಯಾಗಿ ಯುರೇಕಾ ಎಂದು ಬಾತ್ ಟಬ್ನಿಂದ ಎದ್ದಾಗ ಅದ ಖುಷಿ ನನಗಾಗಿತ್ತು.   

ಮುಂದಿನ ವಾರ : ಮಿನಿಕಾಯ್ ಎಂಬ ಸಾಗರ ಸುಂದರಿಯ ಸಂಕೋಲೆಯಲ್ಲಿ..

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಸಾಗರದಲ್ಲಿನ ನಾಲ್ಕು ಗೋಡೆಗಳ ಮಧ್ಯೆ – ೩

ನಾವು ಯಾವುದೇ ಎರಡು ಚಕ್ರಕ್ಕಿಂತ ಹೆಚ್ಚು ಗಾಲಿಗಳು ಇರುವ  ವಾಹನವನ್ನು ಹತ್ತುವಾಗ ಕಿಟಕಿ ಪಕ್ಕ ಕೂರುವುದು ಸಹಜ, ಅದರಲ್ಲೂ ಬಸ್, ರೈಲು , ವಿಮಾನದಲ್ಲಿಯೂ ಸಹ ಹಾಗೆ ಮಾಡುತ್ತೇವೆ. ವಿಮಾನ ಹತ್ತಲು ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ ಹಲವರು ವಿಮಾನದ ಸಿಬ್ಬಂದಿ ಹತ್ತಿರ ‘ ದಯವಿಟ್ಟು , ಕಿಟಕಿ ಕಡೆ ಇರುವ  ಆಸನ ಕೊಡಿ’ ಎಂದು ಬೇಡುವುದನ್ನು ನೋಡಿರುತ್ತೇವೆ ಇಲ್ಲವೇ ನಾವೇ ಬೇಡಿರುತ್ತವೆ. 

ಹಾಗೆಯೇ  ಹಡಗೇರುವ  ಸಮಯದಲ್ಲಿ ನಮ್ಮ ಕ್ಯಾಬಿನ್ಗೆ ಕಿಟಕಿ ಇದ್ದರೆ  ಚೆನ್ನ , ಹಾಗಾಗಿ ಬೋರ್ಡಿಂಗ್ ಪಾಸ್  ಪಡೆಯುವ ಸಮಯದಲ್ಲಿ  ಸಾಗರದ ವಿಹಂಗಮ ದೃಶ್ಯ ಕಾಣುವ ಕಿಟಕಿ ಇದ್ದರೆ ಎಷ್ಟು ಚೆನ್ನ ಎಂದು ಆಲೋಚಿಸಿ, ಬೋರ್ಡಿಂಗ್ ಪಾಸ್ ಪಡೆಯುವ ಸಮಯದಲ್ಲಿ ದಯವಿಟ್ಟು ನಮಗೂ ಸಹ ಒಂದು ಕ್ಯಾಬಿನ್ ಕೊಡಿ ಎಂದು ಕೇಳಬೇಕೆಂದು ಇದ್ದೆ,  ಆದರೆ ಅದೇ ಗಡಿಬಿಡಿಯಲ್ಲಿ ಮರೆತು ಬೋರ್ಡಿಂಗ್ ಪಾಸ್ ಪಡೆದಿದ್ದೆ. ಮತ್ತೆ ಅದು ನೆನಪಿಗೆ ಬಂದದ್ದು  ಹಡಗನ್ನು ಏರಿದಾಗ, ಹಾಗಾಗಿ ನಮ್ಮ ಪಾಸ್ನಲ್ಲಿದ್ದ ಕ್ಯಾಬಿನ್ ಅನ್ನು ಹುಡುಕುತ್ತ ಮೊದಲು  ನಮ್ಮ ಕ್ಯಾಬಿನ್  ಹಾಗು ವಿಂಡೋ ಹೇಗಿದೆ ಎಂಬುದಕ್ಕೆ ತೆರೆ ಬಿದ್ದದ್ದು ನಮ್ಮ ಕ್ಯಾಬಿನ್ ಪ್ರವೇಶಿಸಿದಾಗಲೇ. 

ಕ್ಯಾಬಿನ್ ಒಳಗೆ ಹೋಗುತ್ತಿದ್ದಂತೆ  ಕಂಡದ್ದು ,  ಕೋಣೆಯು ಸುಮಾರು ೧೦ * ೧೮ ಅಡಿ ಇರಬಹುದು,  ಒಂದು ಮೂಲೆಗೆ ಪುಟ್ಟದಾದ  ಶೌಚಾಲಯ , ಒಂದು ಪುಟ್ಟ ಕಿಟಕಿ,  ಒಬ್ಬರು ಮೇಲಿನ ಬರ್ತ ನಲ್ಲಿ ಮತ್ತೊಬ್ಬರು ಕೆಳಗಿನ ಬರ್ತ ನಲ್ಲಿ ಒಂದು ರೀತಿ  ಮಕ್ಕಳು ಮಲಗುವ ಹಾಸಿಗೆ ರೀತಿಯ ಹಾಸಿಗೆ, ಪುಟ್ಟದಾದ  ಮೇಜು, ಎರಡು ಕುರ್ಚಿ,  ಮೇಜಿನ ಮೇಲೆ ಎರಡು ಬಾಟಲ್ ನೀರು, ಸೇಬು ಮತ್ತು ಕಿತ್ತಳೆ ಹಣ್ಣು ಅದಾಗಲೇ ಆಸೀನವಾಗಿತ್ತು.  ನಮ್ಮ ಪರಿಕರಗಳನ್ನು ಸುರಕ್ಷಿತವಾಗಿ ಇಡಲು ಒಂದು ಕಪಾಟು ,  ಒಂದು ಫ್ಯಾನ್ ,  ನಾಲ್ಕು ಲೈಫ್  ಜಾಕೇಟ್ , ಎರಡನ್ನು ದಿನ ಬಳಕೆಗೆ , ಮತ್ತೆರಡನ್ನು  ಅಪಾಯದ ಸಂದರ್ಭದಲ್ಲಿ ಅಂದರೆ ಹಡಗಿಗೆ ಅಪಾಯವಾದಾಗ  ಬಳಸಲು ಎಂಬರ್ಥ.  ಒಂದು ಸ್ಪೀಕರ್ ( ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸೂಚನೆ ಕೊಟ್ಟಂತೆ  ಇನ್ಫಾರ್ಮಶನ್ ರೂಮ್ ನಿಂದ  ಆಗಾಗ ನಮಗೆ ಅಗತ್ಯದ ಸಂದೇಶ ಕೊಡಲು).  ಎಲ್ಲವೂ ಅಚ್ಚುಕಟ್ಟಾಗಿತ್ತು.  ಹಾಗಾಗಿ  ಎ ಸಿ ಸರಿಯಿದೆಯೇ, ನೀರು ಬರುತ್ತಿದೆಯೇ,  ಬಿಸಿ ನೀರು ಬರುತ್ತದೆಯೇ,  ದೀಪ , ಫ್ಯಾನ್ ಉರಿಯುತ್ತಿದೆಯೇ ಎಂದು  ಪರೀಕ್ಷಿಸಿ ಮುಂದೆ ಕ್ಯಾಬಿನ್  ಬೀಗ  ಎಲ್ಲಿ ಸಿಗುತ್ತಿಲ್ಲ ಎಂಬ ಆತಂಕ ಎದುರಾಯಿತು. 

ಅಕ್ಕ ಪಕ್ಕದ ಕ್ಯಾಬಿನ್ ಸಹ ಪ್ರವಾಸಿಗರನ್ನು ಕೇಳಿದಾಗ ನಮಗೆ ಬೀಗ ಸಿಕ್ಕಿದೆ ಎನ್ನುವ ಉತ್ತರ ಬರಬೇಕೆ, ಬೀಗವಿಲ್ಲದೆ ಪರಿಕರಗಳು ಇಲ್ಲಿ  ಅಸುರಕ್ಷಿತ ಎಂಬ ಭಯದಿಂದ  ಟೂರ್ ಮ್ಯಾನೇಜರ್ ಹುಡುಕಿ ಕೊಂಡು ಕೇಳಿದ್ದಾಯಿತು. ಬೀಗಗಳು ಇವೆ ಆದರೆ ಅವು ಯಾವು  ಕೆಲಸ ಮಾಡುವುದಿಲ್ಲ ಅದು ನಿಮ್ಮ ಸಹ ಪ್ರಯಾಣಿಕರಿಗೆ ಗೊತ್ತಿಲ್ಲ, ನಿಮ್ಮ ವಸ್ತುಗಳನ್ನು ಬೀರುವಿನ ಒಳಗೆ ಇಟ್ಟು ಚೀಲಕಕ್ಕೆ ಬೀಗ ಹಾಕಿ, ಬೀಗವು ಇಲ್ಲದಿದ್ದರೆ ಕೆಳಗೆ ಸ್ಟೋರ್ ಅಲ್ಲಿ ಸಿಗುತ್ತದೆ . ಇಲ್ಲಿ ಎಲ್ಲವೂ ಸೇಫ್ , ಯೋಚನೆ ಮಾಡಬೇಡಿ ಎಂದು ಹೇಳಿ ಕಳುಸಿದ. ನಾವು ಹೇಗಿದ್ದರೂ ನಾಲ್ಕು ಬೀಗ ತಂದಿದ್ದೆವು ಹಾಗಾಗಿ ಜಾಸ್ತಿ ಯೋಚನೆ ಮಾಡದೇ ಕ್ಯಾಬಿನ್ ಕಡೆ ಮುಖ ಮಾಡಿದೆ. ಕ್ಯಾಬಿನ್ ಕಡೆ ಬರುತ್ತಿದ್ದಂತೆ ನಮ್ಮ ಸಹ ಪ್ರಯಾಣಿಕರು ಬೀಗ ಕೆಲಸ ಮಾಡುತ್ತಿಲ್ಲ ಎಂಬ ಅಸಹಾಯಕತೆ ಪ್ರದರ್ಶಿಸಿದರು. ನಾನು ಟೂರ್ ಮ್ಯಾನೇಜರ್ ಹೇಳಿದ ಉತ್ತರವನ್ನೇ ಅವರಿಗೂ ನೀಡಿದೆ, ನಾನೂ ಒಮ್ಮೆ ಕೇಳಿ ಬರುತ್ತೇನೆ ಎಂದು ಆತ ಅವನನ್ನು ಹುಡುಕಿಕೊಂಡು ಹೋದ. 

ಸ್ವಲ್ಪ ಸಮಯದಲ್ಲಿ ಊಟ ತಯಾರಾಗಿದೆ, ಮೊದಲಿಗೆ ಮೂರು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು ಬನ್ನಿ ಎಂದು  ಕೋಣೆಯ ಸ್ಪೀಕರ್ ನಲ್ಲಿ ಘೋಷಣೆ ಮೊಳಗಿತು. ನಾಲ್ಕನೇ ಡೆಕ್ಕಿನಲ್ಲಿ ಹೆಚ್ಚು ಕೋಣೆಗಳು ಇವೆ ನಮ್ಮದು ನಾಲ್ಕನೆಯ ಡೆಕ್ ಆಗಿದ್ದರಿಂದ ನಮ್ಮ ಸರದಿಗಾಗಿ ಕಾದೆವು, ಸಲ್ಪ ಸಮಯದಲ್ಲಿ ನಾಲ್ಕನೇ ಡೆಕ್ಕಿನ ಪ್ರವಾಸಿಗರು ಊಟದ ಕೋಣೆಗೆ ಬನ್ನಿ ಎಂಬ ಕರೆಗೆ ಓಗುಟ್ಟು, ನಾವು  ಧಾವಿಸಿದಾಗ ತಿಳಿದಿದ್ದು ಮೊದಲ ಕರೆ ಬಂದಾಗಲೇ  ಒಟ್ಟಿಗೆ  ಮೂರು, ನಾಲ್ಕು ಮತ್ತು ಐದನೇ ಡೆಕ್ಕಿನ ಪ್ರವಾಸಿಗರು  ಊಟದ ಕೋಣೆಗೆ ಒಟ್ಟಿಗೆ ಧಾಳಿ ಇಟ್ಟಿದ್ದರು  ಎಂಬ ಸಂಗತಿ. ಒಂದು ಕಡೆಗೆ ಸಸ್ಯ ಹಾರದ  ಊಟದ ಕೋಣೆ ಮತ್ತೊಂದು ಕಡೆಗೆ ಮಾಂಸಾಹಾರದ  ಊಟದ ಕೋಣೆಯೆಂದು ಫಲಕವಿತ್ತು, ಸಾಲಾಗಿ ಸರತಿಯಲ್ಲಿ ನಿಂತು ಬಡಿಸಿಕೊಂಡು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಣೆ ಮಾಡಿದ್ದಾಯಿತು.    

ಹಡಗು ಇನ್ನು ಬಂದರಿನಿಂದ ಹೊರಟಿರಲಿಲ್ಲ, ಹಾಗಾಗಿ ಹಡಗಿನ ಓಪನ್ ಡೆಕ್ ಕಡೆಗೆ ಒಮ್ಮೆ ಹೋಗಿಬರೋಣ ಎಂದು ಹೋದರೆ  ಸೂರ್ಯ ಉಗ್ರ ನರಸಿಂಹನ ಅವತಾರದಲ್ಲಿ ಬೆಳಗುತ್ತಿದ್ದ ಅದೇ ಸಮಯಕ್ಕೆ  ವಾಯು ನಮ್ಮನ್ನು ತಣ್ಣನೆ ಗಾಳಿಯಿಂದ ಸಂತಯಿಸುತ್ತಿದ್ದ. ಇದಾದ ಸ್ವಲ್ಪ ಸಮಯದಲ್ಲೇ ಹಡಗು ನಿಧಾನವಾಗಿ  ಸಾಗರವನ್ನು ಸೀಳಿ ದಾರಿ ಮಾಡಿಕೊಂಡು ಬಂದರನ್ನು ಬಿಟ್ಟು ಪಶ್ಚಿಮದಡೆ ಪ್ರಯಾಣವನ್ನು ಆರಂಭಿಸಿತ್ತು.  ಹಡಗಿನ ಓಪನ್ ಡೆಕ್ನಲ್ಲಿ ಕೂತು ಸುತ್ತಲಿನ ಪರಿಸರವನ್ನು ಆಸ್ವಾದಿಸುತ್ತಾ ಇದ್ದಾಗ ಪ್ರವಾಸಿಗರೆಲ್ಲ ಮನೋರಂಜನ ಕೋಣೆಗೆ ಬರಬೇಕು ಎಂದು ಅಲ್ಲಿ  ಟೂರ್ ಮ್ಯಾನೇಜರ್ ನಿಮಗಾಗಿ ಕಾಯುತ್ತಿದ್ದರೆಂದು ಹಾಗಾಗಿ ಬರಬೇಕೆಂದು ಅಪ್ಪಣೆಯಾಯಿತು. 

ಸುಮಾರು ೮೦ ರಿಂದ ೧೦೦ ಜನ ಒಟ್ಟಿಗೆ ಕೋರಬಹುದಾದ ಒಂದು ಚಿಕ್ಕ ಸಿನಿಮಾ ಮಂದಿರದ ತರಹದ ಕೋಣೆ ಅದು, ಯಾಸಿರ್  ನಗು ಮುಖದಿಂದ ಸ್ವಾಗತಿಸಿ, ಕೋಣೆ ತುಂಬುತ್ತಿದ್ದಂತೆ ಮುಂದಿನ ಪ್ರವಾಸದ ವೇಳಾಪಟ್ಟಿಯನ್ನು ಮುಂದಿಟ್ಟು ಹಾಗೂ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ, ಒಂದೊಂದು ದ್ವೀಪದ ಬಗ್ಗೆ ಮಾಹಿತಿ ನೀಡುತ್ತಿದ್ದನು..  

ಹಡಗು ಮುಳುಗಿದರೇ ಏನು ಕತೆ, ನನಗೆ ಎಪ್ಪತ್ತು ವರ್ಷ ಸ್ಕೂಬಾ  ಡೈವ್ ಮಾಡಬಹುದಾ,  ಧೂಮಪಾನ ಮತ್ತು ಸುರಪಾನ ಮಾಡಬಹುದಾ, ಹುಷಾರ್ ತಪ್ಪಿದರೇ ಏನು ಕತೆ, ನಾವು ಯಾವ ಲೈಫ್ ಜಾಕೆಟ್ ಬಳಸಬೇಕು, ರೂಮ್ಗಳಿಗೆ ಬೀಗಗಳು ಇಲ್ಲ ಕಳ್ಳತನವಾದರೇ ಯಾರು ಜವಾಬ್ದಾರಿ, ಸೀ ಸಿಕ್ನೆಸ್ ಬಂದರೆ, ಮೇಲೆ ಸ್ವಿಮಿಂಗ್ ಪೂಲ್ ಅಲ್ಲಿ ನೀರು ಯಾಕಿಲ್ಲ, ನೀರು ಖಾಲಿಯಾದರೆ ಎಲ್ಲಿ ಸಿಗುತ್ತೆ , ಮೆಡಿಸಿನ್ ಎಲ್ಲಿ ಸಿಗುತ್ತೆ ,  ಜಿಮ್ ಇದೆಯಾ?,  ಟೀವಿಲಿ ಐಪಿಎಲ್ ಬರುತ್ತಾ ಎಂದು ಕ್ರಿಕೆಟ್ ಅಭಿಮಾನಿಗಳು, ಅತ್ತ ಭಾಗ್ಯ ಲಕ್ಷ್ಮಿ ಬರುತ್ತಾ ಅಂತ ನಮ್ಮ ಮನೆಯವರು, ಹೀಗೆ  ಪ್ರಶ್ನೆಗಳು ಅವನತ್ತ ತೇಲಿ ಬರುತ್ತಿದ್ದವು ಇವಕ್ಕೆಲ್ಲ ಅನುಭವಿ ಯಾಸಿರ್ ಲೀಲಾಜಾಲವಾಗಿ ಉತ್ತರಿಸುತ್ತಾ ಪ್ರಯಾಣಿಕರ ಸಮಾವೇಶವನ್ನು  ಉದ್ದೇಶಿ ಅನುಭವವವನ್ನು ಹಂಚಿಕೊಳ್ಳುತ್ತಿದ್ದನು. ಏನಾದರು ತೊಂದರೆ ಇದ್ದರೆ ನನ್ನನ್ನು ಸಂಪರ್ಕಿಸಲು ತಿಳಿಸಿ , ಪ್ರಯಾಣ ಸುಖಮಯವಾಗಲಿ ಎಂದು ಹಾರೈಸಿ ತನ್ನ ಸಂಭಾಷಣೆಯನ್ನು ಮುಗಿಸಿದನು. 

ಯಾಸೀರನ ಸಮಾವೇಶದಲ್ಲಿದ್ದರೂ ಮನಸ್ಸು ಮಾತ್ರ ಬೀಗವಿಲ್ಲದ  ನಮ್ಮ ಕೋಣೆಯ ಕಡೆಯಿತ್ತು, ಹಾಗಾಗಿ  ಮನೋರಂಜನ ಕೋಣೆಯಿಂದ ನೇರವಾಗಿ ನಾವು ನಮ್ಮ ಕೋಣೆಗೆ ಬಂದು ಎಂದಿನಂತೆ ನಮ್ಮ ಪರಿಕರಗಳು ಸುರಕ್ಷಿತವಾಗಿವೆ ಎಂದು ಖಾತ್ರಿ ಮಾಡಿಕೊಂಡೆವು. ಆಗಲೇ ಉಪಹಾರದ  ಕೋಣೆಯಲ್ಲಿ  ಸಂಜೆಯ ಕಾಫಿ ಮತ್ತು ಚಹಾ ತಯಾರಿದೆ ಎಂಬ ಸಂದೇಶ ಬಂತು. ಒಂದು ಕಪ್ಪು ಟೀ ಹಿಡಿದು ಸೀದಾ ಹಡಗಿನ ಮೇಲಿನ ಡೆಕ್ಕ ಕಡೆಗೆ ಸೂರ್ಯಾಸ್ತ ನೋಡಲು ಹೊರಟೆವು.  ದಿನವೆಲ್ಲ ಉಗ್ರವಾಗಿ ಬೆಳಗಿದ್ದ ರವಿಯು ತಸು ದಣಿದಂತೆ ಕಂಡರೂ ಶಾಂತನಾಗಿ ಸಾಗರದ ಅಂಚಿನಲ್ಲಿ ಮರೆಯಾಗ ತೊಡಗಿದ್ದ, ಹಡಗು ರವಿಯನ್ನು ಸಂತಯಿಸಲು ಸಾಗರವನ್ನು ಸೀಳಿ ಮುನ್ನುಗುತ್ತಿತ್ತು, ಬಾನಲ್ಲಿ ಹುಣ್ಣಿಮೆಯ ಚಂದ್ರ ಅದಾಗಲೇ ಮೂಡಿದ್ದ ಜೊತೆಗೆ ಒಂದಿಷ್ಟು ಬೆಳ್ಳಿ ಚುಕ್ಕೆಗಳನ್ನು ಕರೆ ತಂದಿದ್ದ, ದಿನವೆಲ್ಲ ಶಾಂತವಾಗಿದ್ದ ಸಾಗರವು ಪೂರ್ಣ ಶಶಾಂಕನ  ಕಂಡೊಡನೇ  ಸಂತೋಷ ತಡೆಯಲಾಗದೇ ಉಬ್ಬರಿಸಿ ಅಬ್ಬರಿಸ ತೊಡಗಿದ, ವಾಯುವು ಸಹ ತನ್ನ ಶಕ್ತಿಯನ್ನು ಕ್ಷಣಕ್ಷಣಕ್ಕೂ ವೃದ್ಧಿಸಿಕೊಳ್ಳುತ್ತಿದ್ದ ಹಾಗಾಗಿ ಬೀಸುವ ಗಾಳಿಗೆ ಎಲ್ಲಿ ನಾವು ಸಮುದ್ರ ಪಾಲಾದೆವೋ ಎಂದು ನಿಧಾವಾಗಿ ಕ್ಯಾಬಿನ್ ಕಡೆಗೆ ವಿಶ್ರಮಿಸಲು ಹೊರಟೆವು. 

ಅದಾಗಲೇ  ಸುಮಾರು ಹೊತ್ತಾಗಿತ್ತು ‘ಊಟ ತಯಾರಿದೆ’ ಎಂಬ ಸಂದೇಶವು ಸ್ಪೀಕರ್ ಮೂಲಕ ಬಂತು, ಊಟ ಮುಗಿಸಿ , ಮತ್ತೊಂದು  ಬಾರಿ ಹಡಗಿನ ಓಪನ್ ಡೆಕ್ ಅಲ್ಲಿ ವಾಯು ವಿಹಾರ ಮಾಡಿ, ವಾಪಾಸ್ ಕೋಣೆಗೆ ಹಿಂತಿರುಗಿದೇವು. ನಾಳೆ  ಭೇಟಿ ನೀಡಲಿರುವ  ದ್ವೀಪಕ್ಕೆ ಅಗತ್ಯವಿರುವ  ವಸ್ತುಗಳನ್ನು ಒಂದು ಚೀಲಕ್ಕೆ ಹಾಕಿ, ರೂಮಿನ ಚೀಲಕ ಜಡಿದು ಹಾಸಿಗೆ ಮೇಲೆ ಮಲಗುತ್ತಿದ್ದಂತೆ, ನಾಳೆಯ ಮಿನಿ ಕಾಯ್ ದ್ವೀಪದ ಚಿತ್ರಗಳು ಒಂದೆಡೆ , ಇತ್ತ ಕಡೆ ಬೀಗವಿಲ್ಲದೇ ಪರಿಕರಗಳು ಸುರಕ್ಷಿತವೇ ಎಂಬ ವಾದಗಳು ಮನದಲ್ಲಿ ಮೂಡುತ್ತಿದ್ದಂತೆ ನಿದ್ರಾದೇವಿಯ ಪರವಶವಾದೆವು….

ಮುಂದಿನ ವಾರ : ದೋಣಿ ಸಾಗಲಿ ಮುಂದೆ ಹೋಗಲಿ ದೂರ  ದ್ವೀಪವ ಸೇರಲಿ… 

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮೊದಲ ಮಹಾ ನೌಕಾಯಾನ – ೨

ಐದು ಹಗಲು ನಾಲ್ಕು ರಾತ್ರಿಗಳ ಬಹು  ನಿರೀಕ್ಷಿತ  ಹಡಗಿನ ಪ್ರಯಾಣಕ್ಕೆ ಕ್ಷಣಗಣನೆ ಆರಂಭವಾಗಿ ಕ್ಷಣ ಮಾತ್ರದಲ್ಲೇ  ಸಮಯವೂ ಸಹ  ಕಳೆದುಹೋಗಿತ್ತು. ಸಾಮಾನ್ಯವಾಗಿ ಲಕ್ಷದ್ವೀಪಕ್ಕೆ  ಹೊರಡುವ  ಹಡಗುಗಳು  ಕೊಚ್ಚಿನ್ ಪಟ್ಟಣದ  ವಿಲ್ಲಿಂಗ್ಡಾನ್ ದ್ವೀಪದಲ್ಲಿನ  ಲಕ್ಷದ್ವೀಪ ಬಂದರಿನಿಂದ ಹೊರಡುತ್ತದೆ. ನಮ್ಮ ಪ್ರಯಾಣ ಸೋಮವಾರವಿದ್ದರಿಂದ ನಾವು ಒಂದು ದಿನ ಮೊದಲೇ ಕೊಚ್ಚಿನ್ ನಗರದಲ್ಲಿ ವಾಸ್ತವ್ಯ ಹೂಡುವುದು ಎಂಬುದು ಮೊದಲೇ ನಿರ್ಧರಿಸಿ ಬೆಂಗಳೂರಿನಿಂದ ರಾತ್ರಿ  ಹೊರಟೆವು. ಮೇಲೆ ತಿಳಿಸಿದಂತೆ ಒಂದು ದಿನ ಮುಂಚೆಯೇ ಕೊಚ್ಚಿಯನ್ನು ತಲುಪಿ , ಕೊಚ್ಚಿ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದೆವು, ಆದರೆ ಆಮೇಲೆ ತಿಳಿದಿದ್ದು ಕೊಚ್ಚಿಯನ್ನು ನೋಡಲು ಒಂದು ದಿನ ಸಾಲದು ಎಂದು. ಅಂದಿನ ರಾತ್ರಿಯನ್ನು ಮೊದಲೇ ಕಾಯ್ದಿರಿಸಿದ ಹೋಟೆಲ್ನಲ್ಲಿ ಕಳೆದು ಮರುದಿನ ಲಕ್ಷದ್ವೀಪ ವಾರ್ಫ್ ಪಾಯಿಂಟ್ ತಲುಪಿದೆವು. 

Lakshadweep Warf Terminal

ಹಡಗನ್ನು ಏರುವ ವಿಧಾನ / ನಿಯಮಗಳು ಸಹ ವಿಮಾನವೇರುವ ರೀತಿಯೇ ಇರುತ್ತದೆ, ಮೊದಲಿಗೆ ಪ್ರಯಾಣಿಕರ ಪ್ರಯಾಣದ ಚೀಟಿ, ಗುರುತಿನ ದಾಖಲೆಗಳ ಪರಿಶೀಲನೆ ,  ನಂತರ  ಬೋರ್ಡಿಂಗ್ ಪಾಸ್ ವಿತರಣೆ , ಬ್ಯಾಗೇಜ್ , ಸೆಕ್ಯೂರಿಟಿ ಚೆಕ್ ನಂತರ  ಪ್ರಯಾಣಿಕರನ್ನು  ಬಸ್ನಲ್ಲಿ ಹತ್ತಿಸಿ ನಂತರ ಹಡಗು ನಿಂತಿರುವ  ಬಂದರಿಗೆ ಕರೆ ತಂದು ಪ್ರಯಾಣಿಕರನ್ನು ಹತ್ತಿಸುತ್ತಾರೆ, ನಂತರ ನಮ್ಮ ಲಗೇಜ್  ನಾವಿರುವ ಹಡಗಿಗೆ ರವಾನಿಸುತ್ತಾರೆ. ಆದರೆ  ಹಡಗನ್ನು ಏರಲು  ದ್ವೀಪದ ನಿವಾಸಿಗಳಿಗೆ ಮೊದಲ ಆದ್ಯತೆ  ನೀಡಿ ನಂತರ ಪ್ರವಾಸಿಗರಿಗೆ ಹತ್ತಲು ಅನುಮತಿಸುತ್ತಾರೆ. ಹಿಂದೆ  ಹಲವು ಬಾರಿ ಸಮುದ್ರಯಾನ ಮಾಡಿದರೂ  ಎರಡು ಮಹಡಿ ಹಡಗಿಗಿಂತ ಹೆಚ್ಚಿನ ಮಹಡಿ ಹಡಗಿನಲ್ಲಿ ಪ್ರಯಾಣಿಸಿರಲಿಲ್ಲ.  ಟೈಟಾನಿಕ್ ರೀತಿಯ ದೊಡ್ಡ ಹಡಗನ್ನು ಕೇವಲ ಸಿನಿಮಾ ಇಲ್ಲವೇ ಚಿತ್ರಗಳಲ್ಲಿ ನೋಡಿದ್ದೇ ಆಗಿತ್ತು ಹಾಗಾಗಿ  ಎಂ ವಿ ಕವರತ್ತಿ ಹಡಗಿನ ಬಗೆ ಅಲ್ಲಿ ಇಲ್ಲಿ ಓದಿ ತಿಳಿದು  ಬಹು ಮಹಡಿ ಹಡಗೆಂದರೇ ಹೀಗಿರಬಹುದು ಎಂಬ ಊಹೆಯ ಚಿತ್ರಣ ಮಾತ್ರ ನನ್ನ ಮುಂದಿತ್ತು . ನಮಗೆ ಬಂದರಿಗೆ ಬಂದಾಗಲೇ ಅರಿವಿಗೆ ಬಂದಿದ್ದು  ಚಿತ್ರಪಟದಲ್ಲಿ ಅಥವಾ ಸಿನಿಮಾದಲ್ಲಿ  ಕಂಡದ್ದು ಬಹು ಮಹಡಿಯ ದೊಡ್ಡ ಹಡಗು ‘ಎಂ ವಿ ಕವರತ್ತಿ’ . 

Recreation Room

ಎಂ ವಿ ಕವರತ್ತಿ ಹಡಗಿನ ಬಗ್ಗೆ ನಾಲ್ಕು ಸಾಲು ಹೇಳಲೇ ಬೇಕು, ಎಂ ವಿ ಕವರತ್ತಿ ಹಡಗು ಸುಮಾರು ೧೨೦ ಮೀಟರ್ ಉದ್ದವಿದ್ದು , ೬ ಮಹಡಿಗಳನ್ನು ಹೊಂದಿದ್ದು, ಮೊದಲನೆಯ ಹಾಗು ಎರಡನೆಯ  ಮಹಡಿಯನ್ನು ಲಕ್ಷದ್ವೀಪದ ನಾಗರೀಕರಿಗೆ ಮೀಸಲು ಇಟ್ಟರೆ, ಉಳಿದ  ಮೂರು, ನಾಲ್ಕು ಮತ್ತು ಐದನೇ  ಮಹಡಿಯನ್ನು ಪ್ರವಾಸಿಗರಿಗೆ ಮೀಸಲು ಇಟ್ಟಿದ್ದಾರೆ. ಪ್ರವಾಸಿಗರಿಗೆ ೨ ಹಾಸಿಗೆಯ ಡೈಮಂಡ್ ಕ್ಲಾಸ್ ಕೋಣೆ  ಅಥವಾ ನಾಲ್ಕು ಹಾಸಿಗೆಯ ಗೋಲ್ಡ್ ಕ್ಲಾಸ್ ಇರುವ  ಪ್ರತ್ಯೇಕ ಕೋಣೆಗಳಿದ್ದರೆ, ಲಕ್ಷದ್ವೀಪದ ನಾಗರೀಕರಿಗೆ ರೈಲಿನ ಬೋಗಿಯಲ್ಲಿ  ಸ್ಲೀಪರ್ ಕ್ಲಾಸ್  ಬೋಗಿ ಇರುತ್ತದದೋ ಹಾಗೆ ಸಾಲಿಗೆ ಓಪನ್ ಕೋಣೆಗಳು ಇರುತ್ತವೆ ಆದರೆ ದರದಲ್ಲಿ ವ್ಯತ್ಯಾಸ ತಸು ಭಾರಿಯೇ!!!. ಮೂರನೇ ಮಹಡಿಯಲ್ಲಿ ಅರೋಗ್ಯ ಕೇಂದ್ರವಿದ್ದು, ಪುರುಷ ಮತ್ತು ಮಹಿಳ ರೋಗಿಗಳಿಗೆಂದು  ಪ್ರತ್ಯೇಕ ವಾರ್ಡ್ ಸಹ ಇದೆ, ಹಾಗು ಇಲ್ಲಿಯೇ  ಮಾಹಿತಿ ಕೇಂದ್ರವಿದ್ದು ಏನೇ ಮಾಹಿತಿ ಅಥವಾ ತಮಗೆ ಏನಾದರೂ ಅವಶ್ಯಕತೆಯಿದ್ದರೆ ಇಲ್ಲಿಯೇ ಪಡೆಯಬಹುದು .  ಇದಲ್ಲದೇ  ಅಡುಗೆ  ತಯಾರಿಸುವ ಕೋಣೆಯಿದ್ದು, ಪ್ರವಾಸಿಗರಿಗೆ ಪ್ರತ್ಯೇಕ ಭೋಜನಾಲಯವೂ, ಮನರಂಜನೆಗೆ ವ್ಯವಸ್ಥಿತವಾದ ಕೋಣೆಯು ಸಹ ನಾಲ್ಕನೇ ಮಹಡಿಯಲ್ಲಿದೆ. ಕೊನೆಯ ಮಹಡಿಯಲ್ಲಿ ಹೆಲಿಪ್ಯಾಡ್ ,  ಬ್ರಿಡ್ಜ್  ಮತ್ತು ಈಜು ಕೊಳವಿದೆ. ಈ ಹಡಗು ಸುಮಾರು  ೭೦೦ ಪ್ರಯಾಣಿಕರು ಹಾಗೂ ೨೦೦ ಟನ್  ಸರಕು ಸಾಮಾನುಗಳನ್ನೂ ಹೊರುವ ಸಾಮರ್ಥ್ಯವಿದೆ.  ಬಂದರಿನಿಂದ ಹಡಗನ್ನು ಪ್ರಯಾಣಿಕರು ಏರಲು ಮೂರನೇ ಮಹಡಿಯಲ್ಲಿರುವ ಪ್ರವೇಶ ದ್ವಾರ ಬಳಸಿದರೆ, ದ್ವೀಪಗಳಲ್ಲಿ ಮೊದಲನೇ  ಮಹಡಿಯಲ್ಲಿರುವ ಪ್ರವೇಶ ದ್ವಾರಗಳನ್ನೂ ಬಳಸುತ್ತಾರೆ. 

Ship officers Cafeteria

ಹಡಗನ್ನು ಏರಿದ ಬಳಿಕ ನಮ್ಮ ಟೂರ್ ಮ್ಯಾನೇಜರ್  ‘ಯಾಸಿರ್ ಅರಾಫತ್’  ಹಾಗು ಅವರ ಸಿಬ್ಬಂದಿ ತಮ್ಮ ಪರಿಚಯ ಮಾಡಿಕೊಂಡು ಪ್ರವಾಸಿಗರಿಗೆಲ್ಲ ಸ್ವಾಗತಿಸಿ, ತಮ್ಮ ಲಗೇಜ್ ಬಗ್ಗೆ ಚಿಂತೆ ಬೇಡ ಅದರ ಸಂಪೂರ್ಣ ಜವಾಬ್ದಾರಿ ನಮ್ಮದು  ಸ್ವಲ್ಪ ಸಮಯದಲ್ಲೇ  ತಮ್ಮ ಕ್ಯಾಬಿನ್ ಬಳಿ ನಿಮ್ಮ ಲಗೇಜ್ ಇರುತ್ತದೆ. ಹಾಗು ಮಧ್ಯಾಹ್ನದ ಊಟಕ್ಕೆ ನಾವು ಕರೆ ಮಾಡುತ್ತೇವೆ ಎಂದು ತಿಳಿಸಿ ತಾವೆಲ್ಲರೂ ತಮ್ಮ ಕ್ಯಾಬಿನ್ಗೆ ಹೋಗಿ ವಿಶ್ರಮಿಸಬೇಕೆಂದು ತಿಳಿಸಿ ಬೀಳ್ಕೊಡುತ್ತಾರೆ. ಮೊದಲೇ ಬಿಸಿಲಿನ ಜಳಕ್ಕೆ ಬಸವಳಿದಿದ್ದ ನಮಗೆ ಮೊದಲು ನಮ್ಮ ಕ್ಯಾಬಿನ್ ಎಸಿ ಇಲ್ಲವೇ ಫ್ಯಾನ್ಗೆ ಗೆ ಮೈಯೊಡ್ಡಿ ತಂಪು ಮಾಡಿಕೊಳ್ಳುವ ಅನಿವಾರ್ಯತೆ ಇದ್ದಿದ್ದರಿಂದ ಎಂದು ಎದೆಯುಸಿರು ಬಿಡುತ್ತಾ  ನಮಗೆ ಕಾಯ್ದಿರಿಸಿದ ಕ್ಯಾಬಿನ್ ಹುಡುಕುತ್ತಾ ಅಲೆದೆವು. 

ಮುಂದಿನ  ಲೇಖನ :  ಸಾಗರದಲ್ಲಿನ ನಾಲ್ಕು ಗೋಡೆಗಳ ಮಧ್ಯೆ 


Hospital

Cafeteria
Bunk Class
Diamond Class Cabin

Inside Ship corridor

MV Kavratti

Swimming Pool

6th Deck

Bridge Area

Front view of ship

We are set  for Sailing Expedition

Uncategorized

ಲಕ್ಷ ದ್ವೀಪಗಳ ಮಹಾ ಯಾನ – ಮುನ್ನುಡಿ – ೧

ಲಕ್ಷದ್ವೀಪ

ನಾವು ಭಾರತದ ಭೂಪಟವನ್ನು ಚಿತ್ರಿಸಿದಾಗ ಭಾರತದ ಬಹುತೇಕ ಭೂಭಾಗ, ಪಾಕ್ ಆಕ್ರಮಿತ ಕಾಶ್ಮೀರ , ಚೀನಾ  ಅತಿಕ್ರಮದ  ಪ್ರದೇಶ , ಟಿಬೆಟ್ಟು , ನೇಪಾಳ ಹಾಗು ಬರ್ಮಾದ ಒಂದಿಷ್ಟು ಪ್ರದೇಶ, ಬಾಂಗ್ಲಾದೇಶದ ಒಂದಿಷ್ಟು ಹಳ್ಳಿಗಳು  ಹಾಗು ನಮ್ಮದೇ ಅದ ಅಂಡಮಾನ್ ಮತ್ತು ನಿಕೋಬಾರ್ ಮರೆಯದೇ ಸೇರಿಸಿ ಚಿತ್ರಿಸುತ್ತೇವೆ, ಇಷ್ಟು ಸಾಲದೇ  ರಾವಣನ ರಾಜ್ಯವಾದ ಶ್ರೀಲಂಕಾವನ್ನು ಸಹ ನಮ್ಮ ಭೂಪಟದ ತೆಕ್ಕೆ ತಗೆದು ಕೊಳ್ಳುತ್ತೇವೆ. ಮತ್ತೆ ಇನ್ನೂ ಯಾವ ಸ್ಥಳಗಳನ್ನು ಬಿಟ್ಟಿದ್ದೇವಾ ಎಂದು ಯೋಚಿಸುತ್ತ ಕುಳಿತರೆ ಬಹುಶ ಸೂರ್ಯ ಚಂದ್ರರು ಭುವಿಯನ್ನು ಬೆಳಗಿ ಮರೆಯಾಗಿ ಮುಂದಿನ ಸರದಿಗೆ ಕಾಯುತ್ತಿರುತ್ತಾರೆ ಅಂದರೆ ತಪ್ಪಗಲಾರದು.  ಹಾಗಾಗಿ ನಾವೇ ನಕ್ಷೆ ತಗೆದು ಪೂರ್ವದಿಂದ ಪಶ್ಚಿಮ,ಕ್ಕೆ  ಉತ್ತರದಿಂದ ದಕ್ಷಿಣಕ್ಕೆ ಎಲ್ಲಾ ಅಷ್ಟ ದಿಕ್ಕುಗಳಲ್ಲು ಸಹ ನಮ್ಮ ಕಣ್ಣುಗಳನ್ನು ಹಿಗ್ಗಿಸಿ ಜಾಲಾಡಿದರೆ ಕಟ್ಟಕಡೆಗೆ ನಮ್ಮೆದುರಿಗೆ ಕಾಣುವ ಪುಟ್ಟ ಸುಂದರ ದ್ವೀಪವಾದ ‘ ಲಕ್ಷದ್ವೀಪ ‘ ಎಂಬ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶ. 

ಕನ್ನಡ , ಮಲಯಾಳಮ್ ಹಾಗು ಸಂಸ್ಕೃತದಲ್ಲಿ ಲಕ್ಷದ್ವೀಪ ಎಂದರೆ ಒಂದು ಲಕ್ಷ ದ್ವೀಪಗಳ ಸಮೂಹವೆಂದು, ಆದರೆ ಇಲ್ಲಿ ಇಂದು ಒಂದು ಲಕ್ಷ ದ್ವೀಪಗಳು ಇದೆಯೋ ಇಲ್ಲವೂ ಗೊತ್ತಿಲ್ಲ ಆದರೆ ೩೬  ದ್ವೀಪಗಳ ಸಮೂಹ ಮಾತ್ರ ಗುರುತಿಸಲ್ಪಟ್ಟಿದ್ದಾರೆ. ಕೇವಲ ಹತ್ತು ದ್ವೀಪ ಸಮೂಹದಲ್ಲಿ ಜನವಸತಿಯಿದ್ದು ಉಳಿದ ದ್ವೀಪಗಳಿಗೆ ನಿರ್ಜನವಾಗಿವೆ . ಭಾರತ ಪಶ್ಚಿಮ ಕರಾವಳಿಯಿಂದ ಸರಿ ಸುಮಾರು ೩೫೦ ರಿಂದ ೫೦೦ ಕಿಲೋಮೀಟರು ದೂರದಲ್ಲಿ ಅರಬ್ಬೀ ಸಮುದ್ರದ ಮಡಿಲಿನಲ್ಲಿ ಹರಡಿ ಕೊಂಡಿವೆ ಈ ಪುಟ್ಟ  ದ್ವೀಪದ ಸಮೂಹಗಳು. ಸ್ಪಟಿಕದಷ್ಟು ಶುಭ್ರವಾದ ಮರಳಿನ ದಂಡೆಗಳು, ಕಣ್ಣು ಹಾಯಿಸಿದಷ್ಟು ಕಣ್ಣಿಗೆ ಮುದ ನೀಡುವ ಕಲ್ಪವೃಕ್ಷಗಳು, ನೌಕೆಯಲ್ಲಿ ಸಾಗಿದಷ್ಟು  ಬಣ್ಣ  ಬದಲಿಸುವ ಸಾಗರವು , ಶರಧಿಯ ಅಪಾರ ಜೀವ ಸಂಕುಲಗಳು, ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಪರಿಸರವು ಮಂತ್ರ ಮುಗ್ದವಾಗಿಸುತ್ತದೆ.  

ಹಿಂದೆ ಭಾರತದ ಪೂರ್ವದಲ್ಲಿನ ದ್ವೀಪವಾದ ಅಂಡಮಾನ್ ಪ್ರವಾಸ ಮಾಡಿದ್ದ ನಮಗೆ , ಅಲ್ಲಿನ ಪರಿಸರದ ಪಾವಿತ್ರ್ಯತೆಗೆ ಶರಣಾಗಿದ್ದೆವು ಹಾಗಾಗಿ ನಾವು ಮುಂದೆ ಇಂತಹದೆ  ಪರಿಸರದ ಪ್ರಕೃತಿ ಎಂಬ ದೇಗುಲದಲ್ಲಿ ಪಂಚಭೂತಗಳು ಎಂಬ ದೈವದ ದರ್ಶನಕ್ಕೆ ಅಣಿಯಾಗಲು ಮುಂದಿನ ಪ್ರವಾಸದ ಸ್ಥಳಾನ್ವೇಷಣೆಯಲ್ಲಿ ತೊಡಗಿದ್ದೆವು. ಸುಮಾರು ಏಳು ವರ್ಷಗಳ ಹಿಂದೆಯೇ  ಲಕ್ಷದ್ವೀಪ ಪ್ರವಾಸದ ಯೋಜನೆ ರೋಪಗೊಂಡಿತ್ತು. ಆದರೆ ಕರೋನ ಬಿಕ್ಕಟ್ಟು , ಆರ್ಥಿಕ ಹಾಗು ಜಾಗತೀಕ ಬಿಕ್ಕಟ್ಟು , ಸಂಸಾರ ಸಾಗರದ ಜಂಜಾಟಗಳ ಕಾರಣದಿಂದ ಮುಂದೂಡಲ್ಪಡುತ್ತಾ ಹೋಯಿತು. ಕಳೆದ ಆರು ತಿಂಗಳ  ಹಿಂದೆಯಿಂದ  ಮತ್ತೆ ಪ್ರಯತ್ನ ಆರಂಭವಾಯಿತು.  ನವೆಂಬರ್ ೨೦೨೨ರಿಂದ ಆರಂಭವಾದ ಯೋಜನೆ ಏಪ್ರಿಲ್ ಮೊದಲ ವಾರಕ್ಕೆ ಪ್ರವಾಸದ ಯೋಜನೆಯು ಪರಿಪೂರ್ಣ ರೋಪುರೇಷೆಯೊಂದಿಗೆ ಅನುಷ್ಠಾನಕ್ಕೆ ಬಂತು.

ಒಂದು ಪ್ರವಾಸ ಪ್ಲಾನ್ ಮಾಡೋಕೆ ಆರು ತಿಂಗಳು ಬೇಕಾ ಎಂಬ ಪ್ರಶ್ನೆ ನಿಮಗೆ ಮೂಡುವುದು ಸಹಜ , ಕಾರಣ ಇಷ್ಟೇ ಈ ಬಾರಿ ನಾವು ಸಮುದ್ರಯಾನದ ಮೂಲಕ ವಿಶಿಷ್ಟ ಅನುಭದೊಂದಿಗೆ ಪ್ರವಾಸ ಮಾಡಬೇಕೆಂದು ನಿಶ್ಚಯ ಮಾಡಿದ್ದೆವು.  ಪ್ರತಿ ಬಾರಿ ಸಮುದ್ರ ಯಾನದ  ಪ್ರವಾಸದ ವೇಳಾಪಟ್ಟಿ ಕೈಗೆ ಸಿಗುವ ಸಮಯದಲ್ಲಿ ಎಂ ವಿ  ಕವರತ್ತಿ ಸಮುದ್ರಂ ಪ್ಯಾಕೇಜ್ ಅಲ್ಲಿ ಬುಕಿಂಗ್ ಖಾಲಿ ಖಾಲಿ ತೋರಿಸುತ್ತಿದ್ದವು. ಆದರೂ ಗುರಿ ಮುಟ್ಟುವ ವರೆಗೂ ಪ್ರಯತ್ನ ಅವಿರತವಾಗಿ ನಡೆಯುತ್ತಲೇ ಇತ್ತು. 

ಲಕ್ಷದ್ವೀಪ ಪ್ರವಾಸವನ್ನು  ‘ಸ್ಪೋರ್ಟ್ಸ್’ (society for promotion of nature tourism and sports) ಸರ್ಕಾರದ  ಅಂಗ ಸಂಸ್ಥೆಯಿಂದ ಏರ್ಪಡಿಸುತ್ತಾರೆ. ಸಮುದ್ರಯಾನದ ‘ಸಮುದ್ರಂ’  ಪ್ಯಾಕೇಜಿನ ವೇಳಾಪಟ್ಟಿಯಲ್ಲಿ ಒಮ್ಮೆಲೇ  ನಾಲ್ಕರಿಂದ  ಏಳರವರೆಗೆ  ಸಮುದ್ರಯಾನದ ಶೆಡ್ಯೂಲ್ ( ೫ ದಿನದ ಪ್ರಯಾಣದ ವೇಳಾಪಟ್ಟಿ ) ಪ್ರಕಟಣೆ ಮಾಡುತ್ತಾರೆ. ಒಮ್ಮೆ ಬುಕ್  ಆಗದಿದ್ದರೆ ಮುಂದಿನ ವೇಳಾಪಟ್ಟಿ ಬಿಡುಗಡೆಯವಾಗುವ ವರೆಗೂ ಜಾತಕಪಕ್ಷಿಯ ಹಾಗೆ ಕಾಯಬೇಕು.  ಬುಕಿಂಗ್ ಹಾಗೂ ಇತರ ವಿಷಯಗಳ ಬಗ್ಗೆ ನಾನು ಲೇಖನದ ಅಂತ್ಯದಲ್ಲಿ ತಿಳಿಸುತ್ತೇನೆ. 

ಮುಂದಿನ  ಲೇಖನ : ಮೊದಲ ಮಹಾ ನೌಕಾಯಾನ 

Uncategorized

ಮಹಾ ಸಂಗ್ರಾಮ ೨೦೨೩ – ದೇಶಭಕ್ತ ನಾಯಕರು – ೭

ಗಾಂಧೀಜಿಯವರು ದಿನಕ್ಕೆ ಕನಿಷ್ಠ ಮೂರು ಲಳಿ ನೂಲು ತೆಗೆಯಬೇಕೆಂಬ ನಿಶ್ಚಯಿಸಿದ್ದರು ಹಾಗಾಗಿ ಅವರು ಎಲ್ಲಿಗೆ ಹೋದರು ಚರಕವನ್ನು ತಗೆದುಕೊಂಡು ಹೋಗುತ್ತಿದ್ದರು. ಹೀಗೆ ತಗೆದ ನೂಲನ್ನು ಖಾದಿ ಕೇಂದ್ರದಲ್ಲಿ ಮಾರಿ ಹಣ ಒಂಬತ್ತು ಆಣೆ ಪಡೆಯುತ್ತಿದ್ದರು, ಮೊದಲ ಮೂರು ಆಣೆಯನ್ನು ಸ್ವತಂತ್ರ ಚಳುವಳಿಯ ನಿಧಿಗೆ , ಎರಡನೆಯ ಮೂರು ಆಣೆಯನ್ನು ಅತಿಥಿ ಸತ್ಕಾರಕ್ಕೆ  ಹಾಗೂ ಮೂರನೇಯ ಮೂರು ಆಣೆಯನ್ನು ತಮ್ಮ ಜೀವನದ ನಿರ್ವಹಣೆಗೆ ಬಳುಸುತ್ತಿದ್ದರು. ಕೆಲವೊಮ್ಮೆ ಮೂರಕ್ಕಿಂತ ಹೆಚ್ಚು ಲಳಿಯನ್ನೂ  ಸಹ ತಗೆದು ಹೀಗೆಯೇ ಹಂಚಿಕೆ ಮಾಡುತ್ತಿದ್ದರು. 

ತಮ್ಮ ಪಾಲಿನ ಮೂರು ಆಣೆಗೆ ಎಷ್ಟು ಸಾಮಾನು ಬರುತ್ತದೆಯೋ  ಅಂಗಡಿಯಲ್ಲಿ ಸಾಮಾನು ತಂದು  ಅಷ್ಟರಲ್ಲಿ ತಮ್ಮ ಜೀವನ ನಡೆಸುತ್ತಿದ್ದರು. ಮೂರೂ ಅಣೆಗಿಂತ ಹೆಚ್ಚು ಖರ್ಚು ಮಾಡುತ್ತಿರಲಿಲ್ಲ. 

ಇಂದು ಒಂದು ಶಾಲೆ ಕಂಡರೆ ಇದು ಆ ರಾಜಕೀಯ ಮುಖಂಡನದು , ಕಟ್ಟಡ, ಕೈಗಾರಿಕೆ , ಜಮೀನು ನೋಡಿದರೆ ಮತ್ತೊಬ್ಬನದು , ಹೀಗೆ ಕಂಡ ಕಂಡ ಸ್ಥಳದಲ್ಲಿ ರಾಜಕೀಯ ಮುಖಂಡರೇ ರಾರಾಜಿಸುತ್ತಾರೆ. ಹಾಗಾಗಿ ಸಾಮಾಜಿಕವಾಗಿ ಅಲ್ಲದಿದ್ದರೂ ಆರ್ಥಿಕವಾಗಿ ಅಸಮಾನತೆ ಎಲ್ಲಡೆ ತಲೆದೋರಿದೆ.  ಹಾಗಾಗಿ ಗಾಂಧೀಜಿಯವರ ಹಾಗೆ ತಮ್ಮ ದುಡಿಮೆಯ ಹಣದ ಪಾಲನ್ನು ಸಹ ಸಾರ್ವಜನಿಕ ಜೀವನಕ್ಕೆ ಮೀಸಲಿಟ್ಟರೆ ಈ  ಆರ್ಥಿಕ  ಅಸಮಾನತೆಯನ್ನು ಕಿತ್ತ್ಯೋಬಹುದಲ್ಲವೇ. ಅಂತಹ ಮುಖಂಡರನ್ನು  ಚುನಾಯಿಸುವ ಅವಕಾಶ ನಮ್ಮ ಮುಂದಿದೆ.. ದಯವಿಟ್ಟು ಅರ್ಹರಿಗೆ ತಮ್ಮ ಮತ ನೀಡಿ ಉತ್ತಮರನ್ನು ಆರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. 

Uncategorized

ಮಹಾ ಸಂಗ್ರಾಮ ೨೦೨೩ – ದೇಶಭಕ್ತ ನಾಯಕರು – ೭

ಬೆಂಗಳೂರಿನಲ್ಲಿ ಮಹಾತ್ಮ ಗಾಂಧೀಜಿ

ಸ್ವತಂತ್ರ ಪೂರ್ವದಲ್ಲಿಯೇ  ಭಾರತದಲ್ಲಿ ಆಂಗ್ಲರ ಆಳ್ವಿಕೆಯಿದ್ದರೂ ಪ್ರಜಾಪ್ರಭುತ್ವವನ್ನು ಪ್ರಜಾ ಪ್ರತಿನಿಧಿ ಸಭೆಯ ಮೂಲಕ ಚಲಾವಣೆಗೆ  ತಂದ ಅಖಂಡ ಭಾರತದ ಮೊದಲ ಸಂಸ್ಥಾನ ನಮ್ಮ ಮೈಸೂರು . ಇದರ ಸಂಪೂರ್ಣ ಶ್ರೇಯ  ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಹಾಗು  ಅವರ ದಕ್ಷ ಆಡಳಿತ ವರ್ಗಕ್ಕೂ ಸೇರಬೇಕು. ಈ ವಿಷಯವು ಮಹಾತ್ಮ ಗಾಂಧೀಜಿಯವರ ಗಮನಕ್ಕೆ ಬಂದು ‘ ನಮ್ಮ ಉದ್ದೇಶವು ಸಹ ಪ್ರಜೆಗಳಿಂದ ಆರಿಸಲ್ಪಟ್ಟ ಪ್ರತಿನಿಧಿಗಳು ರಾಜ್ಯಭಾರ ಮಾಡಿ, ಪ್ರಜೆಗಳ ಕಷ್ಟ ಸುಖಗಳಿಗೆ ಸ್ಪಂದಿಸಬೇಕು, ಈಗಾಗಲೇ ಈ  ವ್ಯವಸ್ಥೆ ಮೈಸೂರು ಸಂಸ್ಥಾನದಲ್ಲಿ ಚಲಾವಣೆಯಲ್ಲಿ  ಎಂಬುದು ಅತ್ಯಂತ ಸಂತೋಷದ ಸಮಾಚಾರ ‘ ಎಂದು ಒಂದು ಸಭೆಯಲ್ಲಿ ಮಾತನಾಡಿದ್ದರು. ಗಾಂಧೀಜಿಯವರು ಪ್ರಸ್ತಾಪಿಸಿದ ವಿಷಯ ತಿಳಿದ ಮಹಾರಾಜರು ಗಾಂಧೀಜಿಯವರಿಗೆ ಒಂದು ತಿಂಗಳ ಮಟ್ಟಿಗಾದರೂ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಬೇಕೆಂದು ಒಪ್ಪಿಸುತ್ತಾರೆ. ಗಾಂಧೀಜಿಯವರು ಸಹಮತಿ ಸೂಚಿಸಿ ಬೆಂಗಳೂರಿಗೆ ರೈಲಿನಲ್ಲಿ ಹೊರಟೇಬಿಡುತ್ತಾರೆ. 

ಬಾಪುವರು ರೈಲಿನಲ್ಲಿ ಬರುವ ಸಮಾಚಾರ ತಿಳಿದು ದಿವಾನರದ ಮಿರ್ಜಾ ಇಸ್ಮಾಯಿಲ್  ಸಮೇತ ಅವರ ಅಧಿಕಾರಿ ವರ್ಗ ರೈಲು ನಿಲ್ದಾಣಕ್ಕೆ ಬಂದು ಮೊದಲ ದರ್ಜೆಯ ಬೋಗಿ ನಿಲ್ಲುವ ಹತ್ತಿರ ಗಾಂಧೀಜಿಯವರಿಗೆ ಕಾಯುತ್ತಿರುತ್ತಾರೆ. ಬಹಳ ಹೊತ್ತಾದರೂ ಬಾಪುವರು ಕಾಣದಿದ್ದಾಗ ಎಲ್ಲರಿಗೂ ನಿರಾಸೆಯಾಯಿತು. ಬಾಪುವರು ಸಂಪೂರ್ಣವಾಗಿ ಸಮಯ ಪರಿಪಾಲನೆ ಮಾಡುತ್ತಿದ್ದರು  ಹಾಗು ಒಪ್ಪಿಕೊಂಡ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.  ಸ್ವಲ್ಪ ಸಮಯದಲ್ಲಿಯೇ  ದೊರದಲ್ಲಿ ಎಲ್ಲೂ ಎರಡನೇ ದರ್ಜೆಯ ಬೋಗಿಯ ಸಮೀಪದಲ್ಲಿ  ‘ ಗಾಂಧೀಜಿ ಕಿ ಜೈ ‘ ಎನ್ನುವ ಘೋಷಣೆ ಕೇಳತೊಡಗಿತು. ಅದಾಗಲೇ ಕೈಯಲ್ಲಿ ನೂಲು ತಗೆಯುವ ರಾಟೆ ಹಾಗು ಸಣ್ಣ ಹೆಗಲ ಚೀಲ ಹೊತ್ತುಕೊಂಡು ಗಾಂಧೀಜಿಯವರು ಬಹುದೂರ ಸಾಗಿದ್ದರು. 

ಕೆಲವರು ರಾಟೆಯನ್ನು ನಾವು ಹೊರುತ್ತೇವೆ ಎಂದರು ಆಗ ‘ Thank you, I can carry my luggage’ ಎಂದು ನಗುತ್ತಲೇ ಹೊತ್ತಿದ್ದರು.  

ಆಗ ದಿವಾನರು ‘ We are looking for you in 1st class compartment ‘ ಎಂದು ಹೇಳಿದರು 

‘ Is it so, there is no 4th class, So I travelled in 2nd class ‘ ಎಂದು ಮಹಾತ್ಮರು ಉತ್ತರಿಸಿದರು. 

ಒಬ್ಬ ನಾಯಕನಿಗೆ ಇರಬೇಕಾದ ಸಜ್ಜನಿಕೆ  ಹಾಗು  ಸರಳತೆಯಲ್ಲಿ ಗಾಂಧೀಜಿಯವರು ಎಲ್ಲರಿಗೂ ಮಾದರಿಯಾಗುತ್ತಾರೆ.  ಈ ರೀತಿ ಮಹಾನ್  ನಾಯಕರ ಆದರ್ಶಗಳನ್ನು ವೇದಿಕೆಯ ಮೇಲೆ ಕೇವಲ ಗುಣಗಾನ ಮಾಡಿ ಮತ ಗಿಟ್ಟಿಸುವ ಪುಡಾರಿಯನ್ನು  ನಾವು ಆಯ್ಕೆ ಮಾಡದೇ ಸಜ್ಜನರನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಮುಂದಿದೆ.. ಆಯ್ಕೆ ನಿಮ್ಮದು… 

Uncategorized

ಮಹಾ ಸಂಗ್ರಾಮ ೨೦೨೩ – ದೇಶಭಕ್ತ ನಾಯಕರು – ೬

ಸರ್ ಮಿರ್ಜಾ ಇಸ್ಮಾಯಿಲ್

ಒಮ್ಮೆ ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರು ಕಾರ್ಯ ನಿಮಿತ್ತ ಚಿತ್ರದುರ್ಗಕ್ಕೆ ಹೊರಟಿದ್ದರು,  ಹಿರಿಯೂರಿನ ಬಳಿ ಆದವಲಾ ಎಂಬ ಊರಿನ ಹತ್ತಿರ ವಿಶ್ರಾಂತಿಗಾಗಿ ತಮ್ಮ ವಾಹನವನ್ನು ನಿಲ್ಲಿಸಿದರು.  ದಿವಾನರು ಬಂದರೆಂದು ಇಡೀ ಊರಿನ ಜನರು ದಿವಾನರಿದ್ದ ಸ್ಥಳಕ್ಕೆ ಬಂದಾಗ  ದಿವಾನರು ನಿಮಗೆ ಏನಾದರೂ ತೊಂದರೆಯಿದ್ದರೆ ತಿಳಿಸಿ ಎಂದು ಕೇಳುತ್ತಾರೆ. ನಿಮ್ಮ ಆಡಳಿತದಲ್ಲಿ ಎಲ್ಲವೂ ಸುಭಿಕ್ಷವಾಗಿದೆ ಎಂದು ಊರಿನ ಜನರು ದಿವಾನರಿಗೆ ತಿಳಿಸುತ್ತಾರೆ.  ಆಗ ದಿವಾನರು ಹೀಗೆ ಸುತ್ತ ಮುತ್ತ ಕಣ್ಣು ಹಾಯಿಸಿದಾಗ ಮರದ ಟೊಂಗೆಯೊಂದು ರಸ್ತೆಗೆ ಬಾಗಿದ್ದು , ರಸ್ತೆಯಲ್ಲಿ ದಾರಿಹೋಕರಿಗೆ ಸರಿಯಾಗಿ ಚಲಿಸಲು ಆಗದೇ  ಯಾವಾಗಲಾದ್ರೂ ಬಿದ್ದು ತೊಂದರೆ ಆಗುವಂತೆ  ಕಂಡು ಬಂತು. ತಕ್ಷಣವೇ ದಿವಾನರು ತಮ್ಮ ಜೊತೆಯಲ್ಲಿಯೇ ಇದ್ದ ಪಿ ಡಬ್ಲ್ಯೂ ಡಿ ಎಂಜಿನೀರ್  ನಾರಾಯಣಸ್ವಾಮಿ ಅವರಿಗೆ ‘ ಯಾರಿಗೂ ತೊಂದರೆ ಆಗದಂತೆ , ಈ ಟೊಂಗೆಯನ್ನು ತೆರವು ಮಾಡಿ, ಎಲ್ಲರೂ ನಿರ್ಭಿತಿಯಿಂದ ರಸ್ತೆಯಲ್ಲಿ ಸಾಗುವಂತೆ ಅನುವು ಮಾಡಿಕೊಡಬೇಕು ‘ ಎಂದು ಹೇಳಿ ಮುಂದೆ ನಡೆದರು. 

ಮೂರೂ ದಿನಗಳ ನಂತರ ಅದೇ ದಾರಿಯಲ್ಲಿ ಹಿಂದಿರುಗುವಾಗ ಅದೇ ಗ್ರಾಮದ ಬಳಿ ನಿಂತು ರಸ್ತೆಯನ್ನು ವೀಕ್ಷಿಸಿದರು, ಅಲ್ಲಿಯೇ ಇದ್ದವರನ್ನು ‘ ಟೊಂಗೆ ತಗೆದಾಗ ಯಾರಿಗೂ ತೊಂದರೆ ಯಾಗಲಿಲ್ಲವೇ ‘ ಎಂದು  ಕೇಳುತ್ತಾರೆ.  ಆಗ ಅಲ್ಲಿರುವವರು ಇಲ್ಲಾ ಸ್ವಾಮಿ, ಟೊಂಗೆ ಕಡಿದು ಇಲ್ಲೇ ಹಳ್ಳದಲ್ಲಿ ಹಾಕಿದ್ದಾರೆ, ಟೊಂಗೆಯನ್ನು ಹರಾಜು ಹಾಕಿ ಸರ್ಕಾರದ ಖಜಾನೆಗೆ ಹಣವನ್ನು ಕಟ್ಟ ಬೇಕಿರುವುದರಿಂದ ೧೫-೨೦ ದಿನ ಬೇಕಾಗುತ್ತದೆ ಹಾಗಾಗಿ ಬೇರೆ ಯಾರು ತಗೆದುಕೊಂಡು ಹೋಗದಿರಲಿ ಅಂತ ಇಲ್ಲಿಯೇ ಇರಿಸಿದ್ದಾರೆ ಎಂದು ತೋರಿಸುತ್ತಾರೆ. 

ದಿವಾನರು ತಾವು ಬೇರೆಯವರಿಗೆ ವಹಿಸಿರುವ ಕೆಲಸವನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು , ಕಾರ್ಯದ  ಪ್ರಗತಿಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದರು. ಹಾಗಾಗಿ ಹಣ ಸರ್ಕಾರದ ಖಜಾನೆಗೆ ಸಂದಾಯವಾಗುವರೆಗೂ ಅವರೂ ಸಂಪೂರ್ಣವಾಗಿ ಪರಿಶೀಲನೆ  ಮಾಡುತ್ತಿದ್ದರು. 

ಮುಂದೆ ನಾರಾಯಣ ಸ್ವಾಮಿಯವರು ಮರವನ್ನು ಹರಾಜು ಹಾಕಿ , ಹಣವನ್ನು ಸರ್ಕಾರದ ಖಜಾನೆಗೆ ಕಟ್ಟಿದರು. ಆಗ ದಿವಾನರು ಅವರನ್ನು ಕರೆಯಿಸಿ , ಸನ್ಮಾನಿಸಿ, ಕೆಲಸದಲ್ಲಿ ಬಡ್ತಿ ನೀಡಿದರು . 

ಇಲ್ಲಿ ಕಂಡುಬರುವುದು ದಿವಾನರ ಕರ್ತವ್ಯ ನಿಷ್ಠೆ, ಪ್ರಜಾ ಪಾಲನೆ  ಹಾಗೆ ನಾರಾಯಣ ಸ್ವಾಮಿಯವರ ದಕ್ಷತೆ , ಕರ್ತವ್ಯ ನಿಷ್ಠೆ. 

ಹಾಗಾಗಿ ಹಿಂದಿನವರ ಆದರ್ಶಗಳು ಈ ರೀತಿ ಇಂದಿನ ಪ್ರಜಾತಂತ್ರದಲ್ಲಿ ಕಂಡು ಬಂದರೇ  ಅದನ್ನೇ  ರಾಮರಾಜ್ಯವೆನ್ನ ಬಹುದು.  

ಪ್ರಜಾಪ್ರಭುತ್ವದ  ಬಹು ದೊಡ್ಡ ಹಬ್ಬ ಪ್ರಜೆಗಳ ಮುಂದಿದೆ , ತಮ್ಮ ಹಕ್ಕು ಚಲಾಯಿಸಿ ಉತ್ತಮರನ್ನು ಆರಿಸುವ ಸುವರ್ಣ ಅವಕಾಶ ನಿಮ್ಮ ಮುಂದೆ ಇದೆ. 

Uncategorized

ಮಹಾ ಸಂಗ್ರಾಮ ೨೦೨೩ – ದೇಶಭಕ್ತ ನಾಯಕರು – ೫

ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ

ಒಮ್ಮೆ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಕಾಶಿಯಿಂದ ಬಲಿಯಾಗೆ ರೈಲಿನ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದರು.  ರೈಲು ಕಿಕ್ಕಿರಿದು ತುಂಬಿದ್ದರಿಂದ  ರಾತ್ರಿ ಮಲಗಲು ಜಾಗ ಸಿಗಲಿಲ್ಲ. ಅವರ ಸಹಚರರು ಅವರಿಗೆ ಮೊದಲನೇ ದರ್ಜೆಯ ಬೋಗಿಯಲ್ಲಿ ಮಲಗಲು ಹಾಸಿಗೆಯ ವ್ಯವಸ್ಥೆ ಮಾಡಿದರು. ಬಲಿಯಾ ನಿಲ್ದಾಣ ಬಂದ ಕೊಡಲೇ  ಟಿಕೆಟ್‌ ಕಲೆಕ್ಟರ್‌ ಹತ್ತಿರ ಹೋಗಿ  ಮೊದಲ ದರ್ಜೆಯಲ್ಲಿ ಪ್ರಯಾಣಿಸಿದ್ದಕ್ಕೆ  ಹೆಚ್ಚುವರಿ ಹಣವನ್ನು ಕೊಡಲು ಮುಂದಾದರು , ಆದರೆ ಟಿಕೆಟ್‌ ಕಲೆಕ್ಟರ್‌ ನಯವಾಗಿ ತಿರಸ್ಕರಿಸಿ ಹಣ ಪಡೆಯಲು ನಿರಾಕರಿಸಿದರು, ಆದರೆ ಪಟ್ಟು ಬಿಡದ ದೀನ್‍ದಯಾಳರು ನೇರವಾಗಿ ಸ್ಟೇಷನ್ ಮಾಸ್ಟರ್ ಹತ್ತಿರ ಹೋಗಿ ಹಣ ಪಡೆಯುವಂತೆ ಬಿನ್ನವಿಸಿದರು, ಕಡೆಗೆ  ಸ್ಟೇಷನ್ ಮಾಸ್ಟರ್  ಅವರು ದೀನ್‍ದಯಾಳರ ಮನವಿಗೆ  ಮಣಿದು ಹಣ ಪಡೆದು ರಸೀತಿ ನೀಡಿದರು. ಆಗ ಸ್ಟೇಷನ್ ಮಾಸ್ಟರ್  ಅವರು ದೀನ್‍ದಯಾಳರಿಗೆ ಹೀಗೆ ಹೇಳುತ್ತಾರೆ  “ನನ್ನ ಮೂವತ್ತು ವರ್ಷದ ಸೇವಾ ಅನುಭವದಲ್ಲಿ ಹೀಗೆ ಹಣ ನೀಡುತ್ತಿರುವುದು ನೀವೇ ಮೊದಲು ” ಎಂದು. ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಪ್ರಕಾರ  ಸಾರ್ವಜನಿಕ ಸೇವಾ ಅವಕಾಶಗಳನ್ನು ಅನಧಿಕೃತವಾಗಿ ಬಳಸುವುದು ಒಂದು ಅಪರಾಧವೆಂದು ತಮ್ಮ ಜೀವನದಲ್ಲಿ ಪಾಲನೆ ಮಾಡುತ್ತಿದ್ದರು. 

ಸದಾ ದೇಶ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಹೆಚ್ಚಾಗಿ ರೈಲಿನ ಪ್ರಯಾಣವನ್ನೇ ಮಾಡುತ್ತಿದ್ದರು, ತಮ್ಮ ಜೀವನದ ಕೊನೆಯುಸಿರು ಸಹ ಬಿಟ್ಟಿದು ಇದೆ ರೈಲಿನ ಪ್ರಯಾಣದಲ್ಲಿ ಯಾರೋ ಕೊಲೆಗೆಡುಕನ ಸಂಚಿಗೆ ಬಲಿಯಾಗಬೇಕಾಯಿತು.  ಬದುಕಿದ್ದು ೫೨ ವರ್ಷವಾದರೂ  ಸಂಪೂರ್ಣ ಜೀವನವನ್ನು ದೇಶಕ್ಕೆ ಮುಡಿಪಾಗಿಟ್ಟರು.  

ಜನರ ಸೇವೆಗೆ ಮೀಸಲಿಟ್ಟ ಸರ್ಕಾರದ ಅಧಿಕಾರಿಗಳು , ನೇತಾರರು ಹೇಗೆ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ನಾವು ಪತ್ರಿಕೆಯಲ್ಲಿ ಇಲ್ಲವೇ ದೂರದರ್ಶನದಲ್ಲಿ ನೋಡಿರುತ್ತೇವೆ ಇಂತಹವರಿಗೆ  ದೀನ್‍ದಯಾಳರ  ಆದರ್ಶಗಳು ಯಾವಾಗ ಅರಿವಾಗುವುದು ಕಾದು ನೋಡಬೇಕಿದೆ.