Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೫ – ಬುದ್ಧನ ಜಾಡು ಹಿಡಿದು

ಜಗತ್ತಿನ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ  ಈಗಿನ ವಾಸ್ತವ ಪರಿಸ್ಥಿತಿಯೊಂದಿಗೆ ಹಿಂದಿನ ಇತಿಹಾಸ ಅಥವಾ ಹಿನ್ನಲೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದ್ದೆ ಇರುತ್ತದೆ. ವಾಸ್ತವ ತಿಳಿದು ಕೊಳ್ಳಲು ವರ್ತಮಾನ ಪತ್ರಿಕೆ ಸಹಾಯ ಮಾಡಿದರೆ, ಇತಿಹಾಸ ತಿಳಿಯಲು ಸ್ಥಳೀಯ ವಸ್ತು ಸಂಗ್ರಹಾಲಯ , ಪ್ರದೇಶಾಧಾರಿತ ಪುಸ್ತಕಗಳು ಇಲ್ಲವೇ ಮಾಹಿತಿ ತಂತ್ರಜ್ಞಾನದ ಮೊರೆ ಹೋಗಬೇಕಾಗುತ್ತದೆ.  ವಸ್ತು ಸಂಗ್ರಹಾಲಯದ  ಸಂಗ್ರಹಣೆಗಳು ಪ್ರಪಂಚದ ಜೈವಿಕ, ಸಾಂಸ್ಕೃತಿಕ ಮತ್ತು ಪರಿಸರ ಇತಿಹಾಸದ ಗ್ರಂಥಾಲಯಗಳಾಗಿವೆ ಮತ್ತು ಹಿಂದಿನದನ್ನು ಅರ್ಥೈಸುವ ಮತ್ತು ಅದರ ಭವಿಷ್ಯದಲ್ಲಿ ನಮ್ಮ ಸ್ಥಾನವನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯಕ್ಕೆ ಪ್ರಮುಖವಾಗಿವೆ. ಅಂತೆಯೇ, ವಸ್ತುಸಂಗ್ರಹಾಲಯಗಳು ಈ ಇತಿಹಾಸದ ಮೇಲ್ವಿಚಾರಕಗಳಾಗಿವೆ. ನಮ್ಮ ಸಂಕೀರ್ಣ ಮತ್ತು ನಿರಂತರವಾಗಿ ಬದಲಾಗುತ್ತಿರುವ ಪ್ರಪಂಚದ ಬಗ್ಗೆ ತಿಳುವಳಿಕೆಯುಳ್ಳ ಮೆಚ್ಚುಗೆಯನ್ನು ಬೆಳೆಸುವಾಗ ಅದನ್ನು ಸಂತತಿಗಾಗಿ ಸಂರಕ್ಷಿಸುತ್ತವೆ. \

ಲಕ್ಷದ್ವೀಪದ ಬಗ್ಗೆ ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಕೆಲವೊಂದು ಅಂತರ್ಜಾಲದ ಪುಟಗಳಲ್ಲಿ ಕಲೆ ಹಾಕಿದ ಮಾಹಿತಿ ಮಾತ್ರ ಸಿಕ್ಕಿದ್ದು ಆದರೆ ಅದಕ್ಕೆ ಪುರಾವೆಗಳು ಎಲ್ಲಿಯೂ ಸಿಗಲಿಲ್ಲ.  ಅಗಟ್ಟಿಯಲ್ಲಿ ಇದ್ದಾಗ ನೆನಪಾದದು ಅಲ್ಲೊಂದು ವಸ್ತುಸಂಗ್ರಹಾಲಯವಿದೆ ಎಂದು. ಹಾಗಾಗಿ ನನ್ನ ಪ್ರತಿಯೊಂದು ಪ್ರಶ್ನೆಗೂ ಉತ್ತರ ದೊರಕುವ ಸ್ಥಳ ಅದೆಂದು ಅಲ್ಲಿಗೆ ಭೇಟಿ ನೀಡಿದರೆ ಒಂದಿಷ್ಟು ಮಾಹಿತಿ ಪಡೆಯಬಹುದು ಎಂದು ನೇರವಾಗಿ ವಸ್ತು ಸಂಗ್ರಹಾಲಯದ ಕಡೆಗೆ ನಡೆದೆ.  ಪ್ರವಾಸಿಗರು ಬರುವರೆಂದು  ಆ ದಿನ  ವಸ್ತು ಸಂಗ್ರಹಾಲಯ ತೆರೆದಿತ್ತು. ಬೇರೆ ದಿನ ಅಲ್ಲಿಗೆ ಒಂದು ನರಪಿಳ್ಳೆಯೂ ಸಹ ಸುಳಿಯುವುದಿಲ್ಲ ಎಂಬ ಮಾಹಿತಿಯನ್ನು ನಮ್ಮನ್ನು ಹೊತ್ತು ತಂದಿದ್ದ ವಾಹನದ ಚಾಲಕ ತಿಳಿಸಿದನು. 

ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ವರ್ಷದ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಕಲಾ ಇಲಾಖೆಯ ಅಡಿಯಲ್ಲಿ “ಗೋಲ್ಡನ್ ಜುಬಿಲಿ ಮ್ಯೂಸಿಯಂ” ಎಂಬ ವಸ್ತುಸಂಗ್ರಹಾಲಯವನ್ನು ಅಗಟ್ಟಿ  ದ್ವೀಪದಲ್ಲಿ ಸ್ಥಾಪಿಸಲಾಯಿತು. ಸಂಗ್ರಹಣೆಗಾಗಿ ಮತ್ತು ಭವಿಷ್ಯದ ಪೀಳಿಗೆಯ ಅನುಕೂಲಕ್ಕಾಗಿ ದ್ವೀಪವಾಸಿಗಳ ದೈನಂದಿನ ಜೀವನ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ವಿವಿಧ ಕಲಾಕೃತಿಗಳನ್ನು ಸಂರಕ್ಷಿಸುವುದು ಈ ಮ್ಯೂಸಿಯಂನ ಮುಖ್ಯ ಉದ್ದೇಶ . ವಸ್ತು ಸಂಗ್ರಹಾಲಯವು  ಎರಡು  ಅಂತಸ್ತಿನದಾಗಿದ್ದು. ನೆಲ ಮತ್ತು ಮೇಲ ಮಹಡಿಯನ್ನು ಹೊಂದಿದೆ.  

ವಸ್ತು ಸಂಗ್ರಹಾಲಯದಲ್ಲಿ ದ್ವೀಪದ  ಸಮಸ್ತ ಮಾಹಿತಿ ನೀಡುವ ಫಲಕಗಳನ್ನೂ ಅಳವಡಿಸಿದ್ದರು ಹಾಗಾಗಿ ಮಾಹಿತಿ ಎಲ್ಲವೂ ಸಂಕ್ಷಿಪ್ತವಾಗಿತ್ತು . ಅಗಟ್ಟಿಯ ಮ್ಯೂಸಿಯಂ ಇಡೀ ಲಕ್ಷದ್ವೀಪದಲ್ಲಿರುವ ಏಕೈಕ ವಸ್ತುಸಂಗ್ರಹಾಲಯವಾಗಿದೆ. ಇದು ಅಗಟ್ಟಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ವಸ್ತುಸಂಗ್ರಹಾಲಯವು ‘ಜಗಧೋನಿ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಮಿನಿಕಾಯ್ ಹಾಯಿದೋಣಿಗಳ ಶಿಲ್ಪಗಳನ್ನು ಪ್ರದರ್ಶಿಸುತ್ತದೆ.  ಪುರಾತನ ಜಾಡಿಗಳು, ಮಡಕೆಗಳು, ಮರದ ಹೆಣಿಗೆ ಮತ್ತು ಚಿನ್ನದ ನಾಣ್ಯಗಳ ಸುಂದರವಾದ ವಿನ್ಯಾಸಕಾರರ ಸಂಗ್ರಹವು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ಕೆಲವು ಕಲಾಕೃತಿಗಳು. ವಸ್ತುಸಂಗ್ರಹಾಲಯದಲ್ಲಿನ ವೈವಿಧ್ಯಮಯ ಸಂಗ್ರಹವು ಹಿಂದಿನ ಐತಿಹಾಸಿಕ ಕ್ಷಣವನ್ನು ಪ್ರತಿಬಿಂಬಿಸುತ್ತದೆ. 

ಇದು ‘ಜಗಧೋನಿ’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಮಿನಿಕಾಯ್ ಹಾಯಿದೋಣಿಗಳ ಶಿಲ್ಪಗಳನ್ನು ಸಹ ಪ್ರದರ್ಶಿಸುತ್ತದೆ. ಎರಡು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಭಗವಾನ್ ಬುದ್ಧನ ಎರಡು ಪ್ರತಿಮೆಗಳು 9 ಮತ್ತು 12 ನೇ ಶತಮಾನದಿಂದ ಹುಟ್ಟಿಕೊಂಡಿವೆ ಎಂದು ಪರಿಗಣಿಸಲಾಗಿದೆ. ಬುದ್ಧನ ಈ ವಿಗ್ರಹಗಳನ್ನು ಅಂಡಾರ್ಟ್ ದ್ವೀಪದಿಂದ ತಂದು ಸಂರಕ್ಷಿಸಿಡಲಾಗಿದೆ .  ಸುಂದರವಾದ ಕಲಾಕೃತಿಗಳು ಈ ಸ್ಥಳದ ಇತಿಹಾಸವನ್ನು ಇಸ್ಲಾಂ ಧರ್ಮದ ಅವಧಿಗೆ ಹಿಂದಿನದನ್ನು ತೋರಿಸುತ್ತವೆ.

ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ನನಗೆ ಅರಿವಿಗೆ ಬಂದಿದ್ದು ಇಲ್ಲಿನ ಪೂರ್ವಜರು ಯಾರು ಇದ್ದರೂ, ಅವರು ಏನು ಪಾಲನೆ ಮಾಡುತ್ತಿದ್ದರು ಎಂಬುದು. ಪ್ರಾಚೀನ ಕಾಲದಿಂದಲೂ ಈ ದ್ವೀಪಗಳ ಇರುವಿಕೆಯ ಬಗ್ಗೆ ನಾವಿಕರಿಗೆ ತಿಳಿದಿದ್ದವು ಆದರೆ ಇಲ್ಲಿ ಮಾನವನ ವಸಾಹತು ಯಾವಾಗ ಆರಂಭವಾಯಿತು ಎನ್ನುವ ನಿರ್ದಿಷ್ಟ ಮಾಹಿತಿ ಇಲ್ಲ. ಬೌದ್ಧಧರ್ಮದ ಜಾತಕ ಕಥೆಗಳು ಈ ದ್ವೀಪಗಳನ್ನು ಉಲ್ಲೇಖಿಸಿವೆ, ಇದು ಕ್ರಿಸ್ತಪೂರ್ವ 6 ನೇ ಶತಮಾನದ  ಸಮಯದಲ್ಲಿ ದ್ವೀಪಗಳಿಗೆ ಬೌದ್ಧಧರ್ಮದ ಹರಡುವಿಕೆಯನ್ನು ದಾಖಲಿಸಿದೆ. ಸ್ಥಳೀಯ ಕಥೆಗಳು ಕ್ರಿ.ಶ. 661 ರಲ್ಲಿ ಅರೇಬಿಯನ್ನರಿಂದ ಇಸ್ಲಾಂ ಆಗಮನವನ್ನು ಸೂಚಿಸುತ್ತವೆ. ನಂತರ, ಚೋಳರು 11 ರಲ್ಲಿ ದ್ವೀಪಗಳನ್ನು ಆಳಿದರು, 16 ರಲ್ಲಿ ಪೋರ್ಚುಗೀಸರು, 17 ರಲ್ಲಿ ಅಲಿ ರಾಜರು, 18 ರಲ್ಲಿ ಟಿಪ್ಪು ಸುಲ್ತಾನ್ ಮತ್ತು ಅಂತಿಮವಾಗಿ ಇದು 19 ನೇ ಶತಮಾನದಲ್ಲಿ 1-6 ರಲ್ಲಿ ಬ್ರಿಟಿಷ್ ರಾಜ್ ಅಡಿಯಲ್ಲಿತ್ತು. ಅರಬ್ ಯಾತ್ರಿಕ ಇಬನ್  ಬಟುಟಾ ತನ್ನ ಅನೇಕ ಕಥೆಗಳಲ್ಲಿ ಈ ದ್ವೀಪಗಳ ಬಗ್ಗೆ ಉಲ್ಲೇಖಿಸಿದ್ದಾನೆ. 

ವಸ್ತು ಸಂಗ್ರಹಾಲಯದಿಂದ ಹೊರ ಬಂದಾಗ ಅರಿವಿಗೆ ಬಂದದ್ದು ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಸಹ ಅಶೋಕನ ಮಗಳು ಸಂಘಮಿತ್ರಳ ಸಮಯದಲ್ಲಿ ದ್ವೀಪಗಳಿಗೆ ಬೌದ್ಧಧರ್ಮದ ಹರಡುವಿಕೆಯನ್ನು ಬೆಂಬಲಿಸುತ್ತವೆ ಎಂಬುದು. 

ವಸ್ತು ಸಂಗ್ರಹಾಲಯದಿಂದ ಹೊರಬಂದು ಮುಂದೆ ಅಗಟ್ಟಿಯಲ್ಲಿದ್ದ ಪುಟ್ಟ ಮತ್ಸಾಲಯದ ಕಡೆಗೆ ಹೊರಟೆವು. ಈ ಅಕ್ವಾರಿಮ್ ಏನು ದೊಡ್ಡದ್ದಲ್ಲ ೧೨ ಚದರ ಜಾಗದಲ್ಲಿ ಇಲ್ಲಿನ ಪುಟ್ಟ ಪುಟ್ಟ ಮೀನಿನ ಸಂಗ್ರಹವಿದೆ ವೀಕ್ಷಣೆಗೆ ಕೇವಲ ಹತ್ತು ನಿಮಿಷ ಸಾಕು ಹಾಗಾಗಿ ಹೇಳುವುದಕ್ಕೂ ಹೆಚ್ಚು ವಿಷಯವಿಲ್ಲ. ಸಂಜೆ ಜಾರುತ್ತಿದ್ದರಿಂದ ನಾವು ಬೇಗ ಅಗಟ್ಟಿಯ ಮತ್ತೊಂದು ತುದಿ ಅಂದರೆ ವಿಮಾನ ನಿಲ್ದಾಣದ ಕಡೆಗೆ ಹೊರಟೆವು. 

ಗಗನ ನೌಕೆಯಲ್ಲಿ ಲಕ್ಷದ್ವೀಪ ತಲುಪಲು ಇರುವ ಏಕೈಕ ವಿಮಾನ ನಿಲ್ದಾಣವನ್ನುಅಗಟ್ಟಿಯಲ್ಲಿ ಹೊಂದಿದೆ ಹಾಗಾಗಿ ಅಗಟ್ಟಿ ದ್ವೀಪ ಲಕ್ಷದ್ವೀಪದ ಹೆಬ್ಬಾಗಿಲು ಎಂದರೆ ತಪ್ಪಾಗಲಾರದು.  ಅಗಟ್ಟಿ ದ್ವೀಪದಲ್ಲಿರುವ ಅಗತ್ತಿ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ಕೇವಲ ಕೊಚ್ಚಿನ್ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಹೊಂದಿದೆ ಹಾಗಾಗಿ ಎಲ್ಲಿಂದ ಬಂದರು ನೇರವಾಗಿ ಕೊಚ್ಚಿಯಿಂದ ಮಾತ್ರ ಬರಬೇಕು. ಲಕ್ಷದ್ವೀಪಕ್ಕೆ ಪ್ರವಾಸವನ್ನು ಯೋಜಿಸುವವರು ಮೊದಲು ತಮ್ಮ ವಿಮಾನ ಟಿಕೆಟ್‌ಗಳನ್ನು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾಯ್ದಿರಿಸಬೇಕು. ಇದು ಪ್ರಪಂಚದ ಇತರ ಭಾಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಅಗತ್ತಿಯಿಂದ ವರ್ಷವಿಡೀ ಲಭ್ಯವಿರುವ ಹೆಲಿಕಾಪ್ಟರ್ ಸೌಲಭ್ಯವನ್ನು ಕವರಟ್ಟಿಯವರೆಗೆ ತೆಗೆದುಕೊಳ್ಳಬಹುದು. ಕೊಚ್ಚಿನ್‌ನಿಂದ ಅಗಟ್ಟಿ ತಲುಪಲು ಸುಮಾರು ಒಂದು ಗಂಟೆ ಮೂವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಈ ವಿಮಾನಗಳು ವಾರದಲ್ಲಿ ಏಳು ದಿನಗಳು ಕಾರ್ಯನಿರ್ವಹಿಸುತ್ತವೆ.  ವಿಮಾನ ನಿಲ್ದಾಣ ಚಿಕ್ಕದಿದ್ದು, ವಿಮಾನದಿಂದ ಕಾಣುವ ದೃಶ್ಯ ಮಾತ್ರ  ಅವರ್ಣನೀಯ ಮತ್ತು ಅತ್ಯದ್ಭುತ. 

ಹಾಗೆಯೇ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯು ಅಷ್ಟೇ ಅದ್ಭುತವಾಗಿದೆ , ರಸ್ತೆಯ  ಮಧ್ಯದಲ್ಲಿ ನಿಂತರೆ ನಿಮಗೆ ಪೂರ್ವ ಮತ್ತು ಪಶ್ಚಿಮದಲ್ಲಿ  ಸಾಗರದ  ಅಲೆಗಳ  ಸುಶ್ರ್ಯವ್ಯ ಸಂಗೀತದ ಕಛೇರಿಯಲ್ಲಿ ಪರವಶವಾಗುವುದರಲ್ಲಿ ಅನುಮಾನವಿಲ್ಲ. ಒಂದೇ ಜಾಗದಲ್ಲಿ ಕೂತು ಬಲಕ್ಕೆ ತಿರುಗಿದರೆ ಸೂರ್ಯೋದಯ ಹಾಗು ಎಡಕ್ಕೆ ತಿರುಗಿದರೆ ಸೂರ್ಯಾಸ್ತ ನೋಡಬಹುದು.  ಭಾರತ ಅತ್ಯದ್ಭುತ ರಸ್ತೆ ಅಂದರೂ ತಪ್ಪಲ್ಲ.  

ಸಾಗರವನ್ನು ಸುಮಾರು ನೂರರಿಂದ ಇನ್ನೂರು ಮೀಟರ್  ರಸ್ತೆ ಬೇರ್ಪಡಿಸಿದೆ. ಈ ದೃಶ್ಯ ಮಾತ್ರ  ವರ್ಣಾತೀತ.  ಸಂಜೆಯಾಗಿದ್ದರಿಂದ  ಸೂರ್ಯ ಸಾಗರಕ್ಕೆ ಜಾರುತ್ತಿದ್ದ  ಸಮಯದಲ್ಲಿ ಪೂರ್ಣ ಚಂದ್ರ ಆಗಸಕ್ಕೆ ಹಾರಿ ಧರಣಿಯನ್ನು ಬೆಳಗಲು ಸಜ್ಜಾಗಿ ಶರಧಿಯ ಅಲೆಗಳನ್ನು ತನ್ನೆಡೆ ಸೆಳೆಯುತ್ತಿದ್ದನು. 

ನಾವು ಸಹ ನಮ್ಮ ಅಂದಿನ ಪ್ರವಾಸವನ್ನು  ಮುಗಿಸಿ ಮನದ ತುಂಬ ಅಗಟ್ಟಿಯ  ಸೌಂದರ್ಯವನ್ನು ಅಚ್ಚೋತ್ತಿ ನಾವೆ ಕಡೆ ಹೊರಟೆವು. 

Leave a comment