Uncategorized

ಲಕ್ಷ ದ್ವೀಪಗಳ ಮಹಾ ಯಾನ – ೧೨ – ಗ್ಲಾಸ್ ಬಾಟಮ್ ಬೋಟ್ ಓಳಗಿನ ಜಲವಿಹಾರ !!!

ಸ್ಕೂಬಾ ಡೈವ್  ಮುಗಿಸಿ ನಮ್ಮ ದೋಣಿ  ಹೊರಡಲು ಅನುವಾಗುತ್ತಿದ್ದಂತೆ ಅತ್ತ ಕಡೆಯಿಂದ ಮತ್ತೆರಡು ದೋಣಿಯಲ್ಲಿ ಮುಂ
ದಿನ ಡೈವಿಂಗ್ಗೆ ಸಾಕಷ್ಟು ಜನರನ್ನು ಕರೆತಂದಿದ್ದರು. ಅವರಲ್ಲಿ ಬಹುತೇಕರು ೬೦ ರಿಂದ ೭೦ ಆಸುಪಾಸಿನ ತರುಣ ತರುಣಿಯರು. ಅವರ ಉತ್ಸಾಹ ೧೮ರ ಪ್ರಾಯದವರನ್ನು ನಾಚಿಸುವಂತಿತ್ತು ಅವರಲ್ಲಿ ಒಂದಿಬ್ಬರು  ಗೋ ಪ್ರೊ ಕ್ಯಾಮೆರಾ ತಂದಿದ್ದರೆ, ಮತ್ತೊಬ್ಬರು ಡ್ರೋನ್ ತಂದಿದ್ದರು ಮತ್ತೆ ಕೆಲವರು ವಾಟರ್ ಪ್ರೊಫ್ ಫೋನ್ ತಂದಿದ್ದರು ತಮ್ಮ ಅನುಭವವಗಳನ್ನು ದಾಖಲಿಸುವುದಕ್ಕೆ. ನಮ್ಮ ಸ್ಕೂಬಾ ತಂಡದಲ್ಲಿ ಆರು ಜನರಿದ್ದೆವು, ನಾವೆಲ್ಲ ಸೇರಿ  ಮುಂದಿನ ಡೈವಿಂಗ್ಗೆ ಬಂದಿದ್ದವರಿಗೆ  ಶುಭ ಕೋರಿ ನಮ್ಮ ಸ್ಕೂಬಾ ಡೈವ್ ಅನುಭವ ಹಂಚಿಕೊಳ್ಳುತ್ತ ಮಾತುಕತೆಯಲ್ಲಿ ನಿರತರಾಗಿದ್ದ ದಡ ಮುಟ್ಟಿದು ಗೊತ್ತಾಗಲೇ ಇಲ್ಲ. 

ಬಹುತೇಕ ಎಲ್ಲ ಕಡೆ ಪ್ರತಿಯೊಬ್ಬ ಸ್ಕೂಬಾ ಡೈವಿಂಗ್  ಅವಧಿಯನ್ನು  ೨೦ ರಿಂದ ೩೦ ನಿಮಿಷ ಸಮಯದ ಅವಧಿ ನಿಗದಿ ಮಾಡಿರುತ್ತಾರೆ ಸಮಯ ಮುಗಿಯುತ್ತಿದ್ದಂತೆ ನೀರಿನ ಮೇಲ್ಮಯ್ಗೆ ಕರೆ ತರುತ್ತಾರೆ. ಈ ಸಮಯದಲ್ಲಿ ಮೊದಲ ಹತ್ತು ನಿಮಿಷ ನೀರಿನ ಒತ್ತಡವನ್ನು ಸಹಿಸಿಕೊಳ್ಳಲು ಸಮಯ ತಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಕಿವಿಯೊಳಗೆ ನೀರು ಸೇರಿಕೊಂಡರೆ ಮುಗಿದೇ ಹೋಯಿತು ಸ್ಕೂಬಾ ಡೈವ್ ಬೇಡವೇ ಬೇಡ ವಾಪಾಸ್ ಕರೆದುಕೊಂಡು ಹೋಗಿಬಿಡಪ್ಪಾ ಅನ್ನುವಷ್ಟು ಸಾಕಾಗಿ ಹೋಗಿ ಬಿಡುತ್ತೆ. ಮೊದಲ ಹತ್ತು ನಿಮಿಷ ಎಲ್ಲವನ್ನು ಸಹಿಸಿ ಕೊಂಡರೆ ಉಳಿದ ಸಮಯದಲ್ಲಿ ಡೈವಿಂಗ್ ಇಷ್ಟು ಬೇಗ ಮುಗಿಯಿತ ಇನ್ನು ಸ್ವಲ್ಪ ಸಮಯ ಕೊಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ. ನಾವು ಅಣ್ಣಯ್ಯ ದಮ್ಮಯ್ಯ ಅಂತ ಬೇಡಿದರು ಅವರು ಡೈವಿಂಗ್ ಅವಧಿ ವಿಸ್ತರಿಸುವುದಿಲ್ಲ ಆದರೆ ನಾವು ಮಾತ್ರ ನಮ್ಮ ಡೈವಿಂಗ್ ಅವಧಿ ವಿಸ್ತರಣೆಯ  ಪ್ರಯತ್ನವನ್ನು ಬಿಡಬಾರದು.

ಅಗಟ್ಟಿ ಕಡಲ ಕಿನಾರೆಗೆ ವಾಪಾಸ್ ಬಂದಾಗ ಸರಿ ಸುಮಾರು  ೧೧ ಗಂಟೆಯಾಗಿತ್ತು. ಮಧ್ಯಾಹ್ನದ ಅಡುಗೆ ಇನ್ನು ತಯಾರಾಗಿರಲಿಲ್ಲ  ಹಾಗಾಗಿ ಅಲ್ಲೇ ಇದ್ದ ಗ್ಲಾಸ್ ಬಾಟಮ್ ಬೋಟ್ ಯಾನಕ್ಕೆ ಹತ್ತಲು ಅನುವಾದೆವು. ಗ್ಲಾಸ್ ಬಾಟಮ್   ಬೋಟ್ ಎಂದರೆ  ದೋಣಿಯ ತಳಭಾಗದಿಂದ ನೀರಿನ ಪರಿಸರವನ್ನು ವೀಕ್ಷಿಸಲು ಪಾರದರ್ಶಕ ಹಾಗು ವಸ್ತುವಿನ ಕಾಣುವಿಕೆಯನ್ನು ಹಿಗ್ಗಿಸಿ(ವರ್ಧಿಸಿ)  ಕಾಣುವ ಉತ್ತಮ ಸಾಂದ್ರತೆಯಿರುವ ಗಾಜಿನ ಹೊದಿಕೆಯಿಂದ ತಯಾರಾದ ದೋಣಿ. ದೋಣಿ ಚಲಿಸಿದಂತೆ  ಗಾಜಿನ ಮೂಲಕ ನಾವು ನೀರಿನ ಪರಿಸರವನ್ನು ನೋಡಬಹುದು  ಇದನ್ನು ಒಂದು ಅರ್ಥದಲ್ಲಿ ನೀರಿನ ಮೇಲೆ ಓಡಾಡುವ ವಾಹನಗಳ ವಿಂಡೋ ಸೀಟ್ ಎನ್ನಬಹದು. ಸ್ಕೂಬಾ , ಇಲ್ಲವೇ ಸ್ನೋರ್ಕೆಲ್ಲಿಂಗ್ ಬೇಡ ಹಾಗು ನೀರನ್ನು ಕಂಡರೇ ಭಯ ಉಳ್ಳವರು ಎನ್ನುವವರಿಗೆ ಇದು ಸೂಕ್ತ, ನೀರಿನ ಒಳಗೆ ಮುಳುಗುವ ಇಲ್ಲವೇ ಈಜುವ ಅವಶ್ಯಕತೆ ಇಲ್ಲದೇ  ಎಷ್ಟು ಹೊತ್ತಾದರೂ  ಕುಳಿತು ನೀರಿನ ಪರಿಸರವನ್ನು ಕಣ್ಣುತುಂಬಿ ಕೊಳ್ಳಬಹುದು. 

ದೋಣಿ ಆರಂಭದಲ್ಲಿ ಜೋರಾಗಿ ಚಲಿಸಿ ನಂತರ ನೀರಿನ ಒಳಗೆ ಹವಳದ ದಿಬ್ಬ ಕಂಡೊಡನೆ ನಿಲ್ಲಿಸುತ್ತಾರೆ , ನಂತರ ಮೆಲ್ಲಗೆ ದೋಣಿ ಹವಳದ ದಿಬ್ಬದ ಪರಿಸರದ ಸುತ್ತ ಪ್ರದಕ್ಷಿಣೆ ಮಾಡುತ್ತಾ ಸಾಗುತ್ತದೆ. ಅಲ್ಲೆಲ್ಲೂ ವಿಶೇಷವಾದ ಹವಳದ ದಿಬ್ಬ, ಮೀನು, ಆಮೆ ಕಂಡೊಡನೆ ಮತ್ತೆ ನಿಧಾನವಾಗಿ ಸಾಗುತ್ತದೆ.  ಹೀಗೆ  ಸುಮಾರು ಒಂದು ೧೫ ರಿಂದ ಮೂವತ್ತು ನಿಮಿಷ  ನೀರಿನಲ್ಲಿ ಸುತ್ತು ಹೊಡೆಸಿ ದಡ ಸೇರಿಸುತ್ತಾರೆ.  ಆದಾಗ ತಾನೇ ಸ್ಕೂಬಾ ಮುಗಿಸಿದ ನಮಗೆ ಇದೇನು ವಿಶೇಷ ಅನ್ನಿಸಲಿಲ್ಲ ಆದರೇ  ಹವಳ ದಿಬ್ಬ ಕಂಡೊಡನೆ ಮತ್ತೆ ನೀರಿಗೆ ಜಿಗಿಯುವ ಮನಸ್ಸಾಯಿತು ಅಷ್ಟೇ, ಆದರೆ ಜಿಗಿದರೆ ಮೇಲೆ ನಾವಾಗಿಯೇ ವಾಪಾಸ್ ಬರುವುದಕ್ಕೆ ಹರಸಾಹಸ ಪಡಬೇಕಿತ್ತು ಹಾಗಾಗಿ ಯಾವುದೇ ಸಾಹಸಕ್ಕೆ ಕೈ  ಹಾಕದೇ  ಸುಮ್ಮನಾದೆವು. 

ದಡಕ್ಕೆ ಬಂದಾಗ ಮಧ್ಯಾಹ್ನದ ಭೋಜನ ತಯಾರಾಗಿತ್ತು, ಹಾಗೆಯೆ ಸವಿದೇವು ಹಾಗು  ನಮಗಾಗಿ ಅಲ್ಲಿನ ಜಾನಪದ  ನೃತ್ಯದ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಕಾರ್ಯಕ್ರಮ ವೀಕ್ಷಿಸಲು ಸ್ಕೂಬಾಗೆ ಹೋಗಿದ್ದ ತಂಡಗಳು ಇನ್ನು ವಾಪಾಸ್ ಆಗಿರಲಿಲ್ಲ, ಪ್ರೇಕ್ಷಕರ ಕೊರತೆ ಎದ್ದು ಕಾಣುತಿತ್ತು. ಹಾಗಾಗಿ ಕಾರ್ಯಕ್ರಮವನ್ನು ಪ್ರವಾಸಿಗರು ಬರುವವರೆಗೂ ತಸು ಮುಂದೂಡಿದ್ದರು.  ಹಾಗಾಗಿ ಮತ್ತೆ ನೀರಿಗಿಳಿಯುವ  ಅವಕಾಶ ಸಿಕ್ಕಿದರಿಂದ ಮತ್ತೆ ನಾವೆಲ್ಲ ಜಲಚರಿಗಳಾದೆವು.

Leave a comment